ಮಣಿಪುರ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಮಾತನಾಡಬೇಕು: ಸತ್ಯಪಾಲ್ ಮಲಿಕ್
ಹೊಸದಿಲ್ಲಿ: ಮಣಿಪುರದಲ್ಲಿನ ಭಯಾನಕ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಮಾತನಾಡಬೇಕು ಎಂದು ಮೇಘಾಲಯದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಆಗ್ರಹಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ಹೊರಗೆ ಮೆಟ್ಟಿಲ ಬಳಿ ನಿಂತು ಮಾತನಾಡಿದ್ದಾರೆಯೇ ಹೊರತು, ಸಂಸತ್ತಿನ ಒಳ ಹೋಗಿ ಯಾವುದೇ ಹೇಳಿಕೆ ನೀಡಿಲ್ಲ. ಅವರು ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂದು ನಾನು ಆಗ್ರಹಿಸುತ್ತೇನೆ" ಎಂದು ರೈತರು ಹಾಗೂ ಕಾರ್ಮಿಕರ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಮಣಿಪುರದ ಪುತ್ರಿಯರ ದುಃಖ ಹಾಗೂ ಬಾಧೆಯನ್ನು ಪ್ರಧಾನಿ ದೇಶದೊಂದಿಗೆ ಹಂಚಿಕೊಳ್ಳಬೇಕು" ಎಂದೂ ಅವರು ಒತ್ತಾಯಿಸಿದ್ದಾರೆ.
ಮಣಿಪುರ ಮಹಿಳೆಯರ ನಗ್ನ ಮೆರವಣಿಗೆಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಈ ಕುರಿತು ಹಿರಿಯ ಕಾನೂನು ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿರುವುದರಿಂದ ಒತ್ತಡಕ್ಕೆ ಒಳಗಾಗಿ ಆ ವಿಡಿಯೊದ ಕುರಿತು ಮೋದಿ ಹೇಳಿಕೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯವು ನಿರ್ಣಾಯಕ ಸಂದರ್ಭಗಳಲ್ಲಿ ಹಾದು ಹೋಗುವಾಗ, ಮೋದಿ ಸರ್ಕಾರ ತಮ್ಮ ಮೇಲಿರಿಸಿದ್ದ ವಿಶ್ವಾಸದ ಕಾರಣಕ್ಕೆ ಆ ರಾಜ್ಯದ ರಾಜ್ಯಪಾಲರಾಗಿದ್ದ ಮಲಿಕ್, ಮಣಿಪುರ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರನ್ನು ತಕ್ಷಣವೇ ವಜಾಗೊಳಿಸಬೇಕಿದ್ದರೂ, ದಿಲ್ಲಿಯಲ್ಲಿನ ತನ್ನ ದೊರೆಗಳ ಆಶೀರ್ವಾದದಿಂದ ಹುದ್ದೆಯಲ್ಲಿ ಮುಂದುವರಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ಮಣಿಪುರ ಮುಖ್ಯಮಂತ್ರಿ ಒಂದು ಕ್ಷಣವೂ ಹುದ್ದೆಯಲ್ಲಿ ಮುಂದುವರಿಯಬಾರದು. ಆದರೆ, ಅವರು ತಮ್ಮ ದಿಲ್ಲಿಯ ದೊರೆಯ ಆಶೀರ್ವಾದದಿಂದ ಇನ್ನೂ ಅಲ್ಲೇ ಉಳಿದಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.