ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದವರಿಗೆ ಕಾಲಿನಿಂದ ಒದ್ದ ಪೊಲೀಸ್ ಅಧಿಕಾರಿ
Update: 2024-03-08 11:28 GMT
ಹೊಸದಿಲ್ಲಿ: ರಾಜಧಾನಿಯ ಇಂದರ್‌ಲೋಕ್ ಪ್ರದೇಶದಲ್ಲಿ ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದ ಜನರಿಗೆ ಪೊಲೀಸ್ ಅಧಿಕಾರಿಯೊಬ್ಬರು ಥಳಿಸುತ್ತಿರುವ ವೀಡಿಯೋ ವೈರಲ್ ಆದ ಬೆನ್ನಿಗೇ ಈ ಘಟನೆಯ ಕುರಿತು ದಿಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವೈರಲ್ ವೀಡಿಯೋದಲ್ಲಿ ಜನರ ಗುಂಪೊಂದು ರಸ್ತೆಯಲ್ಲಿ ನಮಾಝ್ ಸಲ್ಲಿಸುತ್ತಿರುವುದು ಹಾಗೂ ಅಲ್ಲಿಗೆ ಆಗಮಿಸಿದ ಪೊಲೀಸ್ ಸಿಬ್ಬಂದಿಯೊಬ್ಬರು ಅವರಿಗೆ ಅಲ್ಲಿಂದ ತೆರಳಲು ಹೇಳುತ್ತಾ ಅವರಿಗೆ ತುಳಿಯುವುದು ಹಾಗೂ ಹೊಡೆಯುವುದು ಕಾಣಿಸುತ್ತದೆ. ಆಗ ಹತ್ತಿರದಲ್ಲಿರುವ ಜನರು ಮಧ್ಯಪ್ರವೇಶಿಸುವುದು ಹಾಗೂ ಪೊಲೀಸರ ಕ್ರಮವನ್ನು ಖಂಡಿಸುವುದೂ ಕಾಣಿಸುತ್ತದೆ. ಇದರ ಬೆನ್ನಲ್ಲೇ ಜನರು ಹಾಗೂ ಕಾನ್‌ಸ್ಟೇಬಲ್ ನಡುವೆ ವಾಕ್ಸಮರ ನಡೆಯುವ ದೃಶ್ಯ ವಿಡಿಯೋದಲ್ಲಿ ಕಂಡು ಬಂದಿದೆ.
ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ.