ಪೊಲೀಸರು ಆರ್.ಜಿ. ಕರ್ ಅತ್ಯಾಚಾರ, ಹತ್ಯೆ ಪ್ರಕರಣ: ಆತ್ಮಹತ್ಯೆ ಎಂದು ಪ್ರತಿಪಾದಿಸುವ ಅಡಿಯೊ ವೈರಲ್
ಹೊಸದಿಲ್ಲಿ: ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಆತ್ಮಹತ್ಯೆ ಎಂದು ಅವರ ಹೆತ್ತವರಿಗೆ ಕೋಲ್ಕತ್ತಾ ಪೊಲೀಸರು ಮಾಹಿತಿ ನೀಡಿದ್ದರು ಎಂದು ಆರೋಪಿಸುವ ಕೆಲವು ವೈರಲ್ ಆಡಿಯೊ ತುಣಕುಗಳ ಪ್ರತಿಪಾದನೆಯನ್ನು ಕೋಲ್ಕತ್ತಾ ಪೊಲೀಸರು ನಿರಾಕರಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಲ್ಕತ್ತಾ ಪೊಲೀಸ್‌ನ ಕೇಂದ್ರೀಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಇಂದಿರಾ ಮುಖರ್ಜಿ, ‘‘ಹಲವು ಸುದ್ದಿವಾಹಿನಿಗಳು ಪ್ರಸಾರ ಮಾಡಿದ ಆಡಿಯೊ ತುಣುಕುಗಳನ್ನು ನಾವು ಆಲಿಸಿದ್ದೇವೆ. ಕೋಲ್ಕತ್ತಾ ಪೊಲೀಸರು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅದು ಆತ್ಮಹತ್ಯೆ ಎಂದು ನಾವು ಎಂದೂ ಹೇಳಿಲ್ಲ’’ ಎಂದಿದ್ದಾರೆ.
‘‘ಮೃತದೇಹಕ್ಕೆ ಹೊದಿಸಲಾದ ಬೆಡ್ ಶೀಟ್ ಬಣ್ಣ ನೀಲಿ ಎಂದು ಆರಂಭದಲ್ಲಿ ಘೋಷಿಸಲಾಗಿತ್ತು. ಆದರೆ, ಅನಂತರ ಮೃತದೇಹಕ್ಕೆ ಹೊದಿಸಲು ಬಳಸಲಾದ ಬೆಡ್‌ಶೀಟ್‌ನ ಬಣ್ಣ ಬೇರೆಯಾಗಿತ್ತು ಎಂದು ಕೂಡ ಕೆಲವು ವೀಡಿಯೊ ತುಣುಕುಗಳು ಪ್ರತಿಪಾದಿಸಿವೆ. ಆ ದಿನ ಅಪರಾಹ್ನ 12.25ಕ್ಕೆ ನಮ್ಮ ಛಾಯಾಚಿತ್ರಗ್ರಹಣ ಹಾಗೂ ವೀಡಿಯೊ ಚಿತ್ರೀಕರಣ ಆರಂಭವಾಯಿತು ಎಂದು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ವಸ್ತುಗಳನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಹಾಗೂ ವಿಧಿವಿಜ್ಞಾನ ತಂಡ ಅಲ್ಲಿಗೆ ಆಗಮಿಸುವ ಸಂದರ್ಭ ವೀಡಿಯೊ ಚಿತ್ರೀಕರಣ ಮಾಡಲಾಗಿದೆ’’ ಎಂದು ಅವರು ಹೇಳಿದ್ದಾರೆ.
‘‘ಮೃತದೇಹವನ್ನು ಮುಚ್ಚಲು ಬಳಸಿದ ಹೊದಿಕೆಯ ಬಣ್ಣ ನೀಲಿ ಎಂದು ನಾನು ಖಾತರಿ ನೀಡುತ್ತೇನೆ. ನಮ್ಮಲ್ಲಿ ಇದ್ದ ಎಲ್ಲಾ ದತ್ತಾಂಶಗಳನ್ನು ಸಿಬಿಐಗೆ ಹಸ್ತಾಂತರಿಸಿದ್ದೇವೆ’’ ಎಂದು ಅವರು ಹೇಳಿದ್ದಾರೆ.
ಈ ನಡುವೆ ಮೃತಪಟ್ಟ ವೈದ್ಯೆಯ ತಂದೆ ವೈರಲ್ ಅಡಿಯೊ ತುಣುಕಿಗೆ ಪ್ರತಿಕ್ರಿಯಿಸುವುದರಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಡಿಯೊ ತುಣುಕಿನಲ್ಲಿರುವ ಧ್ವನಿ ತನ್ನದೆಂದು ದೃಢಪಡಿಸಲು ನಿರಾಕರಿಸಿದ್ದಾರೆ.