ಕಲಮಶ್ಶೇರಿ ಸ್ಫೋಟ ಸುದ್ದಿಗೆ ಸಂಬಂಧವೇ ಇಲ್ಲದ ಮುಸ್ಲಿಂ ವ್ಯಕ್ತಿಯ ಫೊಟೋ ಪ್ರಕಟಿಸಿದ ಪವರ್ ಟಿವಿ

Update: 2023-10-29 15:37 GMT

ಬೆಂಗಳೂರು : ಕೇರಳದ ಕೊಚ್ಚಿಯ ಕಳಮಶ್ಶೇರಿ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಸರಣಿ ಸ್ಪೋಟದಲ್ಲಿ ಓರ್ವ ಮಹಿಳೆ ಮೃತಪಟ್ಟು, ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ. ಈ ಸ್ಪೋಟಕ್ಕೆ ನಾನೇ ಕಾರಣ ಎಂದು ಡೊಮಿನಿಕ್ ಮಾರ್ಟಿನ್ ಎಂಬಾತ ಫೇಸ್ ಬುಕ್ ಲೈವ್ ನಲ್ಲಿ ವೀಡಿಯೊ ಮೂಲಕ ಹೇಳಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಇದು ನಡೆದ ಘಟನೆಯಾಗಿದ್ದರೂ, ಕನ್ನಡದ ನ್ಯೂಸ್ ಚಾನೆಲ್ ಪವರ್ ಟಿವಿಯ ವೆಬ್ ಪೋರ್ಟಲ್ ಘಟನೆಗೆ ಸಂಬಂಧಿಸಿದಂತೆ ಟೋಪಿ ಹಾಕಿದ ಮುಸ್ಲಿಂ ವ್ಯಕ್ತಿಯೋರ್ವರ ಫೊಟೋ ಬಳಸಿ "ಬಾಂಬ್ ಇಟ್ಟಿದ್ದ ವ್ಯಕ್ತಿ ಪೊಲೀಸರಿಗೆ ಶರಣು" ಎಂಬ ಶೀರ್ಷಿಕೆಯ ಸುದ್ದಿ ಪ್ರಕಟಿಸಿ ಬೇಜವಾಬ್ದಾರಿತನ ಮೆರೆದಿದೆ. ಈ ಸುಳ್ಳು ಸುದ್ದಿ ಪ್ರಕಟಿಸಿ ಮೂರು ಗಂಟೆ ಕಳೆದರೂ, ಅದನ್ನು ತಿದ್ದಿಲ್ಲ, ಡಿಲೀಟ್ ಮಾಡಿಲ್ಲ, ಯಾವುದೇ ಸ್ಪಷ್ಟೀಕರಣ ನೀಡಿಲ್ಲ ಪವರ್ ಟಿವಿ.

Full View

ಬಾಂಬ್ ಸ್ಪೋಟ ಘಟನೆಗೆ ಸಂಬಂಧವೇ ಇಲ್ಲದ ಫೋಟೋ ಬಳಸಿದ ಪವರ್ ಟಿವಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧವೇ ಇಲ್ಲದ ಯಾವುದೋ ಒಂದು ವೀಡಿಯೋ ಗ್ರಾಬ್ ಸ್ಕೀನ್ ಶಾಟ್ ಬಳಸಿ ಸುದ್ದಿಯ ಜೊತೆ ಪ್ರಕಟಿಸಲಾಗಿದೆ. ಸುದ್ದಿಯಲ್ಲಿ ಒಂದು ಕಡೆ ಮೀನಹಿಲೆ ಎಂಬ ಕೊಚ್ಚಿಯ ವ್ಯಕ್ತಿ ಶರಣಾಗಿದ್ದಾನೆ ಎಂದು ಬರೆಯಲಾಗಿದೆ.ಇನ್ನೊಂದೆಡೆ ಕಣ್ಣೂರು ಪೊಲೀಸರು ವ್ಯಕ್ತಿಯೊಬ್ಬನ ಬ್ಯಾಗ್ನಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಗುರುತಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಗುಜರಾತ್ ಮೂಲದ ಈತ ಮಂಗಳೂರಿನಿಂದ ಅರಿಕೋಡಿಗೆ ತೆರಳುತ್ತಿದ್ದ ಎನ್ನಲಾಗಿದೆ ಎಂದು ನಿರಾಧಾರ ವಾಗಿ ಬರೆಯಲಾಗಿದೆ.

ಈ ಸುಳ್ಳು ಸುದ್ದಿ ಜೊತೆಗೆ, ಸನಾತನ್ ಧರ್ಮ್ ಕೀ ಜಯ್ ಎನ್ನುವ x ಖಾತೆಯಲ್ಲಿ ಕೇರಳವನ್ನು ಗಾಝಾ ಪಟ್ಟಿಗೆ ಹೋಲಿಸಿ ಬರೆದ ಪೋಸ್ಟ್ ಅನ್ನೂ ಹಾಕಲಾಗಿದೆ.

 

ಈ ಸುದ್ದಿಗೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಯಿಸಿರುವ ಓದುಗರು, ಪವರ್ ಟಿವಿಯವರು ಸಾರಾಯಿ ನಶೆಯಲ್ಲಿರೋದು, ಹಸಿ ಹಸಿ ಸುಳ್ಳುಗಳು ಎಂದು ಕಿಡಿ ಕಾರಿದ್ದಾರೆ. ಕೆಲವರು ನಿಮ್ಮದೇ ಫೊಟೋ ಬಳಸಿಕೊಳ್ಳಿ ಎಂದು ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


 

 


Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News