ಅತ್ಯಾಚಾರ ಪ್ರಕರಣದ ಅಸಮರ್ಪಕ ವಿಚಾರಣೆ: ಹೈಕೋರ್ಟ್ ಛೀಮಾರಿ ಬಳಿಕ ಪೊಲೀಸ್ ವೈಫಲ್ಯ ತನಿಖೆ
ಕೊಲ್ಕತ್ತಾ: ಬಂಗಾಳದಿಂದ ಹೊರಗೆ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ ಪತ್ನಿ ನೀಡಿದ ಅತ್ಯಾಚಾರ ದೂರಿನ ಬಗ್ಗೆ ಅಸಮರ್ಪಕ ತನಿಖೆ ನಡೆಸಿದ ಬಗ್ಗೆ ಕೊಲ್ಕತ್ತಾ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ, ನಗರದ ಲೇಕ್ ಪೊಲೀಸ್ ಠಾಣೆಯ ಅಧಿಕಾರಿ, ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ಮೂವರು ಮಹಿಳಾ ಅಧಿಕಾರಿಗಳ ವಿರುದ್ಧ ಶನಿವಾರ ತನಿಖೆ ಆರಂಭಿಸಲಾಗಿದೆ.
ಖಾಸಗಿ ಕಂಪನಿಯೊಂದರಲ್ಲಿ ಹಿರಿಯ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ, ಕೊಲ್ಕತ್ತಾದ ತನ್ನ ಮನೆಯಲ್ಲಿ ಜುಲೈ 14 ಮತ್ತು 15ರಂದು ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರು ನೀಡಿದ್ದರು. ಎರಡು ದಿನದಲ್ಲಿ ಎರಡು ಬಾರಿ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಜುಲೈ 15ರಂದು ದೂರು ನೀಡಲು ಹೋದಾಗ, ಲೇಕ್ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಯ ಪತ್ನಿ ಮತ್ತು ಮಗನನ್ನು ಕರೆಸಿ ದೂರು ವಾಪಾಸು ಪಡೆಯುವಂತೆ ಬಲವಂತಪಡಿಸಿದರು ಎಂದು ದೂರು ನೀಡಿದ್ದ ಮಹಿಳೆ ಆಪಾದಿಸಿದ್ದರು.
ಇದರ ತನಿಖೆಯಲ್ಲಿ ವಿಧಿವಿಧಾನಗಳನ್ನು ಉಲ್ಲಂಘಿಸಲಾಗಿದ್ದು, ಇಂಥ ಸಂದರ್ಭದಲ್ಲಿ ನಡೆಸಬೇಕಾದ ವೈದ್ಯಕೀಯ ಪರೀಕ್ಷೆ ನಡೆಸದಿರುವುದು ಮತ್ತು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆಯದಿರುವುದು ಹೀಗೆ ಅನೇಕ ಲೋಪಗಳಿಂದ ತನಿಖೆ ಕೂಡಿತ್ತು. ಮಹಿಳೆ ಸ್ವಯಂಪ್ರೇರಿತರಾಗಿ ಎಂ.ಆರ್.ಬಂಗೂರ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಿದ್ದರು.
ಆರಂಭಿಕ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಈ ಕಾರಣದಿಂದಾಗಿ ಭಾರತೀಯ ನ್ಯಾಯಸಂಹಿತೆಯ ತೀವ್ರವಲ್ಲದ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದ್ದರು. ಶೂನ್ಯ ಚೆಕ್ ಲಿಸ್ಟ್ ಅನ್ನು ತನಿಖಾಧಿಕಾರಿಗಳು ಸಲ್ಲಿಸಿದ ಹಿನ್ನೆಲೆಯಲ್ಲಿ ಆರೋಪಿ ಜುಲೈ 16ರಂದು ಜಾಮೀನು ಪಡೆದಿದ್ದ.
ಕೆಳಹಂತದ ನ್ಯಾಯಾಲಯ ನೀಡಿದ್ದ ಜಾಮೀನನ್ನು ರದ್ದುಪಡಿಸಿದ ಹೈಕೋರ್ಟ್, ಸೆಪ್ಟೆಂಬರ್ 10ರಂದು ಅಲಿಪುರ ಸೆಷನ್ಸ್ ನ್ಯಾಯಾಲಯ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನನ್ನೂ ವಜಾ ಮಾಡಿತ್ತು. ಆರೋಪಿ ಸೋಮವಾರದ ಒಳಗಾಗಿ ಹಾಜರಾಗಬೇಕು ಅಥವಾ ಆತನನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.