9 ವರ್ಷಗಳಿಂದ ಪಾವತಿಯಾಗದ ಭವಿಷ್ಯ ನಿಧಿ ಹಣ; ಕ್ಯಾನ್ಸರ್ ರೋಗಿ ಆತ್ಮಹತ್ಯೆ

Update: 2024-02-07 16:46 GMT

ಶಿವರಾಮನ್/  Photo : newindianexpress.com

ಕೊಚ್ಚಿ: ಭವಿಷ್ಯ ನಿಧಿ ಹಣವನ್ನು ಕಳೆದ 9 ತಿಂಗಳಿಂದ ತಡೆಹಿಡಿದಿರುವುದರಿಂದ ಮನನೊಂದ ಅಪಲ್ಲೊ ಟಯರ್ ನ ನಿವೃತ್ತ ಉದ್ಯೋಗಿ ಹಾಗೂ ಕ್ಯಾನ್ಸರ್ ರೋಗಿಯೋರ್ವರು ಕೊಚ್ಚಿಯ ಕಲೂರ್ನಲ್ಲಿರುವ ಭವಿಷ್ಯ ನಿಧಿ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಶಿವರಾಮನ್ (69) ಎಂದು ಗುರುತಿಸಲಾಗಿದೆ. ಇವರ ತ್ರಿಶೂರ್ನ ಚಾಲಕ್ಕುಡಿ ಸಮೀಪದ ಪೆರಂಬ್ರಾದ ನಿವಾಸಿ.

ಶಿವರಾಮನ್ ಅವರು ಅಪಲ್ಲೊ ಟಯರ್ನಿಂದ 9 ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಅವರು ಭವಿಷ್ಯ ನಿಧಿಗೆ ಸಂಬಂಧಿಸಿದ ದಾಖಲೆಗಳನ್ನು ಕಲೂರ್ನಲ್ಲಿರುವ ಅದರ ಕಚೇರಿಗೆ ಸಲ್ಲಿಸಿದ್ದರು. ಆದರೆ, ಹಲವು ತಾಂತ್ರಿಕ ಕಾರಣಗಳಿಂದ ಈ ದಾಖಲೆಗಳನ್ನು ಭವಿಷ್ಯ ನಿಧಿ ಕಚೇರಿ ಸಿಬ್ಬಂದಿ ಪರಿಗಣಿಸಿರಲಿಲ್ಲ. ಶಿವರಾಮನ್ ಅವರು ಆಗಾಗ ಭವಿಷ್ಯ ನಿಧಿ ಕಚೇರಿಗೆ ಬಂದು ವಿಚಾರಿಸುತ್ತಿದ್ದರು. ಆದರೆ, ಭವಿಷ್ಯ ನಿಧಿ ಕಚೇರಿ ಯಾವುದೇ ನಿರ್ಣಯಕ್ಕೆ ಬಂದಿರಲಿಲ್ಲ. ಇತ್ತೀಚೆಗೆ ಭವಿಷ್ಯ ನಿಧಿ ಕಚೇರಿಯ ಸಿಬ್ಬಂದಿ ಪಿಎಫ್ ಖಾತೆಯಿಂದ 80 ಸಾವಿರ ರೂ.ವನ್ನು ಬಿಡುಗಡೆಗೊಳಿಸಲು ಶಾಲೆ ತೊರೆದ ಪ್ರಮಾಣ ಪತ್ರ ಸಲ್ಲಿಸುವಂತೆ ಅವರಿಗೆ ತಿಳಿಸಿದ್ದರು.

ಶಿವರಾಮನ್ ಅವರು 1960ರಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ್ದರೂ ಶಾಲೆಯಲ್ಲಿ ಪ್ರಮಾಣ ಪತ್ರ ಇರಲಿಲ್ಲ. ಆದರೆ, ಭವಿಷ್ಯ ನಿಧಿ ಸಿಬ್ಬಂದಿ ಶಾಲೆ ತೊರೆದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಸೂಚಿಸಿದ್ದರು.

‘‘ಇದರಿಂದ ಮನನೊಂದ ಶಿವರಾಮನ್ ಮಂಗಳವಾರ ಅಪರಾಹ್ನ 1.15ಕ್ಕೆ ಭವಿಷ್ಯ ನಿಧಿ ಕಚೇರಿಗೆ ತಲುಪಿದ್ದಾರೆ ಹಾಗೂ ಅಲ್ಲಿರುವ ಶೌಚಾಲಯದಲ್ಲಿ ತಾನು ಬಾಟಲಿಯಲ್ಲಿ ತಂದಿದ್ದ ವಿಷ ಸೇವಿಸಿದ್ದಾರೆ. ಕಚೇರಿಯ ಉದ್ಯೋಗಿಗಳು ಅವರನ್ನು ಕೂಡಲೇ ಎರ್ನಾಕುಳಂನ ಜನರಲ್ ಆಸ್ಪತ್ರೆಗೆ ಕೊಂಡೊಯ್ದರು’’ ಎಂದು ಎರ್ನಾಕುಳಂನ ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘‘ಶಿವರಾಮನ್ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ ರಾತ್ರಿ ಅವರನ್ನು ಆ್ಯಸ್ಟರ್ ಮೆಡಿಸಿಟಿಗೆ ವರ್ಗಾಯಿಸಲಾಗಿತ್ತು. ಬುಧವಾರ ಮುಂಜಾನೆ ಸುಮಾರು 5 ಗಂಟೆಗೆ ಅವರು ಕೊನೆಯುಸಿರೆಳೆದರು. ಭವಿಷ್ಯ ನಿಧಿ ಕಚೇರಿಯ ಹಲವು ಉದ್ಯೋಗಿಗಳ ಹೆಸರನ್ನು ಒಳಗೊಂಡ ಸುಸೈಡ್ ನೋಟ್ ಅನ್ನು ಪೊಲೀಸರು ಶಿವರಾಮನ್ ಅವರ ಜೇಬಿನಿಂದ ಪತ್ತೆ ಹಚ್ಚಿದ್ದಾರೆ’’

‘‘ನಾವು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಶಿವರಾಮನ್ ಅವರ ಸಾವಿಗೆ ಭವಿಷ್ಯ ನಿಧಿ ಕಚೇರಿಯ ಸಿಬ್ಬಂದಿಯೇ ಕಾರಣ ಎಂದು ಪ್ರತಿಪಾದಿಸುತ್ತಿರುವ ಅವರ ಸಂಬಂಧಿಕರೊಂದಿಗೆ ಮಾತನಾಡಿದ್ದೇವೆ. ಅವರ ಭವಿಷ್ಯ ನಿಧಿಯನ್ನು ಉದ್ದೇಶಪೂರ್ವಕವಾಗಿ ತಡೆ ಹಿಡಿಯಲಾಗಿತ್ತೇ ಎಂದು ಪರಿಶೀಲಿಸಲಿದ್ದೇವೆ. ಉದ್ದೇಶಪೂರ್ವಕವಾಗಿ ತಡೆ ಹಿಡಿದಿದ್ದರೆ, ಹೊಣೆಗಾರರಾದ ಉದ್ಯೋಗಿಗಳ ವಿರುದ್ಧ ತನಿಖೆಯ ಮುಂದಿನ ಹಂತದಲ್ಲಿ ಪ್ರಕರಣ ದಾಖಲಿಸಲಾಗುವುದು. ಪ್ರಸಕ್ತ ತನಿಖೆ ಕೇವಲ ಪ್ರಾಥಮಿಕ ಹಂತದಲ್ಲಿದೆ’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News