ಉಗ್ರರಿಗೆ ಸುಳಿವು ನೀಡುತ್ತಿದ್ದ ವ್ಯಕ್ತಿಯಿಂದ ಪಿಎಸ್‍ಐ ಹತ್ಯೆ
ಗುವಾಹತಿ: ಜನಾಂಗೀಯ ಸಂಘರ್ಷದಿಂದ ಕಂಗೆಟ್ಟಿರುವ ಮಣಿಪುರದಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಒಬ್ಬರನ್ನು ಉಗ್ರಗಾಮಿಗಳಿಗೆ ಮಾಹಿತಿ ನೀಡುತ್ತಿದ್ದ ವ್ಯಕ್ತಿಯೊಬ್ಬ ತಲೆಗೆ ಗುಂಡು ಹೊಡೆದು ಹತ್ಯೆ ಮಾಡಿರುವ ಪ್ರಕರಣ ಚುರಚಂದಪುರ ಜಿಲ್ಲೆಯಲ್ಲಿ ಬುಧವಾರ ಸಂಜೆ ನಡೆದಿದೆ. ಈ ದಾಳಿಯಲ್ಲಿ ಇತರ ಇಬ್ಬರು ಗುಂಡೇಟಿನಿಂದ ಗಾಯಗೊಂಡಿದ್ದಾರೆ.
ಚಿಂಗ್ ಪೆಹೀ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಒಂಕೋಮಂಗ್ ಹಾಕಿಪ್ ಎಂಬ ಪಿಎಸ್‍ಐ ಮೇಲೆ ನಸುಕಿನ 2 ಗಂಟೆ ವೇಳೆಗೆ ದಾಳಿ ನಡೆಸಿದ ಶಂಕಿತ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದರು ಎನ್ನಲಾಗಿದೆ. ಆಗಸ್ಟ್ 30 ಮತ್ತು 31ರಂದು ಖೋಶಭಂಗ್ ಮತ್ತು ಖೋರೆಂಟಾಕ್ ಪ್ರದೇಶದಲ್ಲಿ ವ್ಯಾಪಕ ಗುಂಡಿನ ದಾಳಿ ಮತ್ತು ಶೆಲ್ಲಿಂಗ್ ದಾಳಿ ನಡೆದ ಹಿನ್ನೆಲೆಯಲ್ಲಿ ನಿಯೋಜಿಸಲ್ಪಟ್ಟ ಹೆಚ್ಚುವರಿ ಭದ್ರತಾ ಪಡೆಯಲ್ಲಿ 45 ವರ್ಷದ ಹಾಕಿಪ್ ಕೂಡಾ ಸೇರಿದ್ದರು.
ಮೂಲತಃ ಉಖ್ರುಲ್ ಜಿಲ್ಲೆಯವರಾದ ಹಾಕಿಪ್ ಮಣಿಪುರ ಪೊಲೀಸ್ ಪಡೆಗೆ ಎಎಸ್‍ಐ ಆಗಿ ಸೇರಿದ್ದರು. ಇವರು ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಕಂಗ್‍ಪೋಪ್ಕಿಯಲ್ಲಿ ಮಂಗಳವಾರ ಮುಂಜಾನೆ ಅಪರಿಚಿತ ದಾಳಿಕೋರರು ಬುಡಕಟ್ಟು ಜನಾಂಗಕ್ಕೆ ಸೇರಿದ ಮೂವರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಸೆಪ್ಟೆಂಬರ್ 8ರಂದು ತೆಂಗ್‍ಪಾಲ್ ಜಿಲ್ಲೆಯ ಪಲ್ಲೇಲ್ ಎಮಬಲ್ಲಿ ನಡೆದ ದಾಳಿಯಲ್ಲಿ ಮೂವರು ಹತರಾಗಿ, 50 ಮಂದಿ ಗಾಯಗೊಂಡಿದ್ದರು.