ಮಣಿಪುರ ರಾಜ್ಯಪಾಲರನ್ನು ಭೇಟಿಯಾದ ರಾಹುಲ್ ಗಾಂಧಿ: ಶಾಂತಿ ಕಾಪಾಡುವಂತೆ ಜನರಿಗೆ ಮನವಿ

Update: 2023-06-30 15:24 GMT

Photo: PTI

ಇಂಫಾಲ,ಜೂ.30: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶುಕ್ರವಾರ ಇಲ್ಲಿ ಹಿಂಸಾಚಾರ ಪೀಡಿತ ಮಣಿಪುರದ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನು ಭೇಟಿಯಾಗಿ ಮಾತುಕತೆಗಳನ್ನು ನಡೆಸಿದರು. ಇದೇ ವೇಳೆ ಶಾಂತಿಯನ್ನು ಕಾಯ್ದುಕೊಳ್ಳುವಂತೆ ಸಮಾಜದ ಎಲ್ಲ ವರ್ಗಗಳಿಗೆ ಮನವಿ ಮಾಡಿಕೊಂಡ ಅವರು ಹಿಂಸಾಚಾರವು ಪರಿಹಾರವಲ್ಲ ಎಂದು ಹೇಳಿದರು.

ಮಣಿಪುರದಲ್ಲಿಯ ಘಟನೆಗಳನ್ನು ದುರಂತ ಎಂದು ಬಣ್ಣಿಸಿದ ಅವರು,ಇವು ರಾಜ್ಯ ಮತ್ತು ರಾಷ್ಟ್ರಕ್ಕೆ ಯಾತನಾದಾಯಕವಾಗಿವೆ ಎಂದರು.

ರಾಜ್ಯಪಾಲರೊಂದಿಗೆ ಭೇಟಿಯ ಬಳಿಕ ರಾಜಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಶಾಂತಿಯು ಮುಂದಿನ ದಾರಿಯಾಗಿದೆ. ಪ್ರತಿಯೊಬ್ಬರೂ ಈಗ ಶಾಂತಿಯ ಕುರಿತು ಮಾತನಾಡಬೇಕು ಮತ್ತು ಆ ನಿಟ್ಟಿನಲ್ಲಿ ಮುನ್ನಡೆಯಬೇಕು. ನಾನು ಇಲ್ಲಿದ್ದೇನೆ ಮತ್ತು ಮಣಿಪುರದಲ್ಲಿ ಶಾಂತಿಯನ್ನು ತರಲು ಯಾವುದೇ ರೀತಿಯ ನೆರವನ್ನಾದರೂ ನೀಡುತ್ತೇನೆ ’ ಎಂದು ಹೇಳಿದರು.

‘ನಾನು ಮಣಿಪುರದ ಜನರ ನೋವನ್ನು ಹಂಚಿಕೊಳ್ಳುತ್ತೇನೆ. ಇದು ಭೀಕರ ದುರಂತವಾಗಿದೆ. ಇದು ಮಣಿಪುರದ ಮತ್ತು ಭಾರತದ ಜನತೆಗೆ ಅತ್ಯಂತ ದುಃಖ ಮತ್ತು ನೋವಿನ ವಿಷಯವಾಗಿದೆ ’ ಎಂದರು.

ಇದಕ್ಕೂ ಮುನ್ನ ರಾಹುಲ್ ಇಂಫಾಲ, ಚುರಾಚಂದ್ರಪುರ ಮತ್ತು ಮೊಯಿರಂಗ್ನಲ್ಲಿಯ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಎಲ್ಲ ಸಮುದಾಯಗಳ ಜನರೊಂದಿಗೆ ಮಾತುಕತೆಗಳನ್ನು ನಡೆಸಿದ್ದರು.

ಪರಿಹಾರ ಶಿಬಿರಗಳಲ್ಲಿಯ ಮೂಲ ಸೌಕರ್ಯಗಳು ಮತ್ತು ಆಹಾರದಲ್ಲಿ ಸುಧಾರಣೆಯಾಗಬೇಕಿದೆ. ಔಷಧಿಗಳ ಪೂರೈಕೆಯಾಗಬೇಕಿದೆ. ಶಿಬಿರಗಳಿಂದ ಇಂತಹ ದೂರುಗಳು ಬಂದಿವೆ ಎಂದು ರಾಹುಲ್ ಹೇಳಿದರು.

ಇದಕ್ಕೂ ಮುನ್ನ ಅವರು ಮಣಿಪುರದ ವಿವಿಧ ನಾಗರಿಕ ಸಂಘಟನೆಗಳ ಸದಸ್ಯರನ್ನು ಭೇಟಿಯಾದರು.

ಐಎನ್ಎ ಯುದ್ಧಸ್ಮಾರಕಕ್ಕೂ ಭೇಟಿ ನೀಡಿದ ರಾಹುಲ್,1944ರಲ್ಲಿ ಇಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದ ನೇತಾಜಿ ಸುಭಾಷಚಂದ್ರ ಬೋಸ್ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಪುಷ್ಪಾಂಜಲಿಯನ್ನು ಸಲ್ಲಿಸಿದರು.

ಗುರುವಾರ ರಾಹುಲ್ ಜನಾಂಗೀಯ ಹಿಂಸಾಚಾರದಿಂದ ತೀವ್ರ ಬಾಧಿತ ಪಟ್ಟಣಗಳಲ್ಲೊಂದಾದ ಚುರಾಚಂದ್ರಪುರದ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ್ದರು.

ಚುರಾಚಂದ್ರಪುರಕ್ಕೆ ರಾಹುಲ್ ಪ್ರಯಾಣ ಹೈಡ್ರಾಮಾಕ್ಕೆ ಸಾಕ್ಷಿಯಾಗಿತ್ತು. ಬಿಷ್ಣುಪುರದಲ್ಲಿ ಸ್ಥಳೀಯ ಪೊಲೀಸರು ರಾಹುಲ್ ಕಾರುಗಳ ಸಾಲಿನ ಮೇಲೆ ದಾಳಿ ನಡೆಯಬಹುದು ಎಂಬ ಆತಂಕದಿಂದ ಅವರನ್ನು ತಡೆದಿದ್ದರು. ಅಂತಿಮವಾಗಿ ಅಲ್ಲಿಂದ ವಾಪಸಾದ ರಾಹುಲ್ ಹೆಲಿಕಾಪ್ಟರ್ ಮೂಲಕ ಚುರಾಚಂದ್ರಪುರವನ್ನು ತಲುಪಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News