ರಾಜ್ ಠಾಕ್ರೆ- ಅಮಿತ್ ಶಾ ಭೇಟಿ: ಚುನಾವಣಾ ಮೈತ್ರಿ ವದಂತಿ
ಮುಂಬೈ: ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಸೋಮವಾರ ರಾತ್ರಿ ದೆಹಲಿಗೆ ದಿಢೀರ್ ಭೇಟಿ ನೀಡಿದ ಬೆನ್ನಲ್ಲೇ, ಮಂಗಳವಾರ ಅಮಿತ್ ಶಾ ಜತೆಗಿನ ಚಿತ್ರಗಳನ್ನು ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿರುವುದು ಹಲವು ವದಂತಿಗಳಿಗೆ ಕಾರಣವಾಗಿದೆ.
ರಾಜ್ ಠಾಕ್ರೆ ಜತೆಗೆ ಅವರ ಪುತ್ರ ಅಮಿತ್ ಕೂಡಾ ಇರುವ ಚಿತ್ರವನ್ನು ಫೇಸ್ಬುಕ್ ಪೋಸ್ಟ್ ನಲ್ಲಿ ಶೇರ್ ಮಾಡಲಾಗಿದೆ. "ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು" ಎಂದು ಶೀರ್ಷಿಕೆ ನೀಡಲಾಗಿದೆ. "ಈ ಅಪೂರ್ವ ಭೇಟಿಗೆ ನಾನು ಸಾಕ್ಷಿಯಾಗಿದ್ದೆ" ಎಂದು ಪುತ್ರ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಭೇಟಿ, ಸಂಭಾವ್ಯ ಮೈತ್ರಿಗೆ ಸಂಬಂಧಿಸಿದಂತೆ ಹಲವು ವದಂತಿಗಳಿಗೆ ಕಾರಣವಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಉತ್ತರ ಭಾರತದವರ ವಿರುದ್ಧ ನಿಲುವು ಹೊಂದಿರುವ ರಾಜ್ ಠಾಕ್ರೆ ಪರ ಬಿಜೆಪಿ ಎಂದೂ ಒಲವು ಹೊಂದಿಲ್ಲ ಎಂದು ವಿಶ್ಲೇಷಕ ರಾಮಕಿರಣ್ ದೇಶಮುಖ್ ಹೇಳಿದ್ದಾರೆ. ಆದರೆ ಬಿಜೆಪಿ ಮರಾಠಿ ಮತಗಳ ಬಗ್ಗೆ ಆತಂಕ ಹೊಂದಿದೆ ಎನ್ನುವುದು ಅವರ ವಿಶ್ಲೇಷಣೆ.
"ಬಾಳಾ ನಂದಗಾವ್ಕರ್ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಮುಂಬೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ, ಮರಾಠಿ ಮತಗಳನ್ನು ವಿಭಜಿಸುವಲ್ಲಿ ಯಶಸ್ವಿಯಾಗಿದ್ದರು. ಠಾಕ್ರೆ ಮುಂಬೈ ದಕ್ಷಿಣ ಹಾಗೂ ಕಲ್ಯಾಣ್ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದಾರೆ. ದಕ್ಷಿಣ ಮುಂಬೈನಲ್ಲಿ ಮರಾಠಿ ಮತಗಳು ಸೇವಾರಿ, ವೊರ್ಲಿ ಮತ್ತು ಬೈಕುಲಾದಲ್ಲಿ ಕೇಂದ್ರೀಕೃತವಾಗಿವೆ. ಇಲ್ಲಿ ಉದ್ಧವ್ ಠಾಕ್ರೆ ಪರ ಅನುಕಂಪದ ಅಲೆ ಇದೆ ಎನ್ನುವುದು ದೇಶ್ ಮುಖ್ ಅವರ ವಾದ.
2019ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ನಡುವಿನ ಮೈತ್ರಿ ಮುರಿದು ಬಿದ್ದ ಬಳಿಕ ಬಿಜೆಪಿ ರಾಜ್ ಠಾಕ್ರೆಯವರನ್ನು ಬಹಿರಂಗವಾಗಿ ಓಲೈಸುತ್ತಿದೆ.