ರಾಜ್ ಕೋಟ್ ಗೇಮಿಂಗ್ ಝೋನ್ ದುರಂತ: ಸಹ ಮಾಲೀಕ ಮೃತಪಟ್ಟಿರುವುದನ್ನು ದೃಢಪಡಿಸಿದ ಡಿಎನ್ಎ ಪರೀಕ್ಷೆ
ಗಾಂಧಿನಗರ : ಗುಜರಾತ್ ನ ರಾಜ್ ಕೋಟ್ ನಲ್ಲಿ ನಾಲ್ಕು ದಿನಗಳ ಹಿಂದೆ ಮಕ್ಕಳು ಸೇರಿದಂತೆ 27 ಮಂದಿಯ ಸಜೀವ ದಹನಕ್ಕೆ ಕಾರಣವಾದ ರಾಜ್ ಕೋಟ್ ಟಿಆರ್ ಪಿ ಗೇಮ್ ಝೋನ್ ಅಗ್ನಿದುರಂತದಲ್ಲಿ ಸಹ ಮಾಲೀಕ ಪ್ರಕಾಶ್ ಹಿರೇನ್ ಮೃತಪಟ್ಟಿರುವುದನ್ನು ಡಿಎನ್ಎ ಪರೀಕ್ಷೆ ದೃಢಪಡಿಸಿದೆ.
ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದ ಇವರು ತಲೆ ಮರೆಸಿಕೊಂಡಿದ್ದಾರೆ ಎಂದು ನಂಬಲಾಗಿತ್ತು. ಹಿರೇನ್ ಈ ಸಂದರ್ಭದಲ್ಲಿ ಅಲ್ಲೇ ಇದ್ದರು. ಹಾಗೂ ದುರಂತ ಸಂಭವಿಸಿದ ಸ್ಥಳದಲ್ಲಿ ಅವರ ಕಾರು ಇದ್ದ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದೆ.
ದುರಂತ ನಡೆದ ಸಂದರ್ಭದಲ್ಲಿ ಗೇಮಿಂಗ್ ಝೋನ್ ಒಳಗಿದ್ದ ಹಿರೇನ್ ನಾಪತ್ತೆಯಾಗಿದ್ದಾರೆ ಎಂದು ಅವರ ಸಹೋದರ ಜಿತೇಂದ್ರ ಹೇಳಿಕೆ ನೀಡಿದ್ದರು. ವಿಧಿವಿಜ್ಞಾನ ಇಲಾಖೆ ಅವರ ತಾಯಿಯ ಡಿಎನ್ಎ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಗುರಿಪಡಿಸಿದ್ದು, ಪ್ರಕಾಶ್ ಕೂಡಾ ಅಗ್ನಿದುರಂತದಲ್ಲಿ ಮೃತಪಟ್ಟಿರುವುದನ್ನು ದೃಢಪಡಿಸಿದೆ. ಹಲವು ದೇಹಗಳು ಸುಟ್ಟು ಕರಕಲಾಗಿದ್ದು, ಪತ್ತೆ ಹಚ್ಚಲಾಗದ ಸ್ಥಿತಿ ಇದೆ. ಆದ್ದರಿಂದ ಪೊಲೀಸರು ಮೃತಪಟ್ಟವರ ಗುರುತು ಪತ್ತೆಗೆ ಡಿಎನ್ಎ ಪರೀಕ್ಷೆಯ ಮೊರೆಹೋಗಿದ್ದರು.
ಕಂಪನಿಯ ಶೇಕಡ 60ರಷ್ಟು ಪಾಲು ಹೊಂದಿದ್ದ ಪ್ರಕಾಶ್, ರೇಸ್ ವೇ ಎಂಟರ್ ಪ್ರೈಸಸ್ ನ ಪಾಲುದಾರರಾಗಿದ್ದರು ಹಾಗೂ ಗುಜರಾತ್ ಪೊಲೀಸರು ಇವರನ್ನು ಆರೋಪಿ ಎಂದು ಹೆಸರಿಸಿದ್ದರು. ಧವಳ ಎಂಟರ್ ಪ್ರೈಸಸ್ ಮಾಲೀಕ ಧವಳ್ ಠಕ್ಕರ್ ಅವರನ್ನು ಎಫ್ಐಆರ್ ನಲ್ಲಿ ಮುಖ್ಯ ಆರೋಪಿಯಾಗಿ ಗುರುತಿಸಲಾಗಿದ್ದು, ಒಟ್ಟು ಆರು ಮಂದಿಯನ್ನು ಆರೋಪಿಗಳಾಗಿ ಪರಿಗಣಿಸಲಾಗಿದೆ. ರೇಸ್ ವೇ ಎಂಟರ್ ಪ್ರೈಸಸ್ ಪಾಲುದಾರರಾದ ಅಶೋಕ್ ಸಿಂಗ್ ಜಡೇಜಾ, ಕೀರ್ತಿಸಿನ್ಹ ಜಡೇಜಾ, ಪ್ರಕಾಶ್ ಹಿರೇನ್, ಯುವರಾಜ್ ಸಿಂಗ್ ಸೋಳಂಕಿ, ರಾಹುಲ್ ರಾಥೋಡ್ ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದಾರೆ. ಇವರು ಒಟ್ಟಾಗಿ ಗೇಮ್ ಝೋನ್ ನಡೆಸುತ್ತಿದ್ದರು.
ಮೂವರು ಆರೋಪಿಗಳನ್ನು 14 ದಿನಗಳ ಅವಧಿಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.