ʼಒಂದು ದೇಶ ಒಂದು ಚುನಾವಣೆʼ ಪ್ರಸ್ತಾವನೆ: ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿಯಿಂದ ರಾಷ್ಟ್ರಪತಿಗೆ ವರದಿ ಸಲ್ಲಿಕೆ

Update: 2024-03-14 17:17 GMT

Photo Credit: PIB

ಹೊಸದಿಲ್ಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಮಾಜಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ನೇತೃತ್ವದ ಉನ್ನತಾಧಿಕಾರದ ಸಮಿತಿಯೊಂದು ಗುರುವಾರ ಶಿಫಾರಸು ಮಾಡಿದೆ.

‘‘ಒಂದು ದೇಶ, ಒಂದು ಚುನಾವಣೆ’’ ಕುರಿತ ಸಮಿತಿಯು, ಏಕಕಾಲದಲ್ಲಿ ಚುನಾವಣೆ ನಡೆಸುವ ಸಂಭವನೀಯತೆ ಬಗ್ಗೆ ತನ್ನ 18,626 ಪುಟಗಳ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುರಿಗೆ ಗುರುವಾರ ಸಲ್ಲಿಸಿದೆ. ಸಂಬಂಧಪಟ್ಟವರು ಮತ್ತು ಪರಿಣತರೊಂದಿಗೆ ಸಮಾಲೋಚನೆಗಳನ್ನು ನಡೆಸಿ ಹಾಗೂ 191 ದಿನಗಳ ಕಾಲ ಸಂಶೋಧನೆ ನಡೆಸಿ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಸಮಿತಿ ಹೇಳಿದೆ.

ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಎರಡು ಹಂತಗಳ ವಿಧಾನವೊಂದನ್ನೂ ಸಮಿತಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ. ಮೊದಲ ಹಂತದಲ್ಲಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಬಹುದಾಗಿದೆ ಎಂದು ಅದು ಹೇಳಿದೆ. ಎರಡನೇ ಹಂತದಲ್ಲಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆಗಳು ನಡೆದ 100 ದಿನಗಳ ಒಳಗೆ ಮುನಿಸಿಪಾಲಿಟಿ ಮತ್ತು ಪಂಚಾಯತ್ ಗಳಿಗೆ ಚುನಾವಣೆಗಳನ್ನು ನಡೆಸುವ ಬಗ್ಗೆ ಪರಿಶೀಲಿಸಬಹುದಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಸ್ವಾತಂತ್ರ್ಯಾನಂತರದ ಆರಂಭಿಕ ದಶಕಗಳಲ್ಲಿ ನಡೆಸಿದಂತೆ ಏಕಕಾಲಿಕ ಚುನಾವಣೆಗಳನ್ನು ಮರಳಿ ತರುವ ಅಗತ್ಯವಿದೆ ಎಂದು ಸಮಿತಿ ಹೇಳಿದೆ. ‘‘ಪ್ರತಿ ವರ್ಷ ಚುನಾವಣೆಗಳನ್ನು ನಡೆಸುವುದರಿಂದ ಸರಕಾರ, ಉದ್ಯಮಗಳು, ಕೆಲಸಗಾರರು, ನ್ಯಾಯಾಲಯಗಳು, ರಾಜಕೀಯ ಪಕ್ಷಗಳು, ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ನಾಗರಿಕ ಸಮಾಜದ ಮೇಲೆ ಅಗಾಧ ಹೊರೆ ಬೀಳುತ್ತದೆ’’ ಎಂದು ವರದಿ ಹೇಳಿದೆ.

ಚುನಾವಣಾ ಆಯೋಗವು ರಾಜ್ಯ ಮಟ್ಟದ ಚುನಾವಣಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮತದಾರರ ಪಟ್ಟಿ ಮತ್ತು ಮತದಾರರ ಗುರುತು ಚೀಟಿಗಳನ್ನು ಸಿದ್ಧಪಡಿಸಬೇಕು ಎಂಬುದಾಗಿಯೂ ಅದು ಕರೆ ನೀಡಿದೆ. ತನ್ನ ವರದಿ ಜಾರಿಯ ಉಸ್ತುವಾರಿ ನೋಡಲು ಅನುಷ್ಠಾನ ಸಮಿತಿಯೊಂದನ್ನು ರಚಿಸುವಂತೆಯೂ ಸಮಿತಿ ಶಿಫಾರಸು ಮಾಡಿದೆ.

‘‘ಏಕಕಾಲಿಕ ಚುನಾವಣೆಗಳು ಅಭಿವೃದ್ಧಿ ಮತ್ತು ಸಾಮಾಜಿಕ ಬಂಧವನ್ನು ಉತ್ತೇಜಿಸುತ್ತವೆ, ಪ್ರಜಾಪ್ರಭುತ್ವದ ಬುಡವನ್ನು ಗಟ್ಟಿಗೊಳಿಸುತ್ತದೆ ಮತ್ತು ‘ಇಂಡಿಯಾ, ಅಂದರೆ ಭಾರತ’ದ ಆಶೋತ್ತರಗಳನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತವೆ’’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಏಕಕಾಲಿಕ ಚುನಾವಣೆಗಳನ್ನು ನಡೆಸುವ ಪ್ರಸ್ತಾವಗಳ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಕೇಂದ್ರ ಸರಕಾರವು ಕಳೆದ ವರ್ಷದ ಸೆಪ್ಟಂಬರ್ 2ರಂದು ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಉನ್ನತಾಧಿಕಾರದ ಸಮಿತಿಯನ್ನು ರಚಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯ ಮಾಜಿ ಪ್ರತಿಪಕ್ಷ ನಾಯಕ ಗುಲಾಮ್ ನಬಿ ಆಝಾದ್, ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ. ಸಿಂಗ್, ಲೋಕಸಭೆಯ ಮಾಜಿ ಮಹಾಕಾರ್ಯದರ್ಶಿ ಸುಭಾಶ್ ಕಶ್ಯಪ್ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ ಸಮಿತಿಯ ಸದಸ್ಯರಾಗಿದ್ದರು.

ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿಯನ್ನೂ ಸಮಿತಿಗೆ ಸೇರಿಸಲಾಗಿತ್ತು. ಆದರೆ, ಈ ಸಮಿತಿಯು ‘‘ಕೇವಲ ಕಣ್ಣೊರೆಸುವ ತಂತ್ರ’’ ಎಂಬುದಾಗಿ ಬಣ್ಣಿಸಿದ ಅವರು ಕೆಲವೇ ಗಂಟೆಗಳಲ್ಲಿ ಸಮತಿಯ ಸದಸ್ಯರಾಗಲು ನಿರಾಕರಿಸಿದ್ದರು.

► ಸಂವಿಧಾನದ ಸಂಪೂರ್ಣ ಬುಡಮೇಲು ಗುರಿ : ಕಾಂಗ್ರೆಸ್

ದೇಶದಲ್ಲಿ ಏಕಕಾಲಿಕ ಚುನಾವಣೆಗಳನ್ನು ನಡೆಸುವಂತೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತಾಧಿಕಾರದ ಸಮಿತಿಯು ಕೇಂದ್ರ ಸರಕಾರಕ್ಕೆ ಶಿಫಾರಸುಗಳನ್ನು ಮಾಡಿರುವ ಬೆನ್ನಿಗೇ, ಕಾಂಗ್ರೆಸ್ ಪಕ್ಷವು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ‘‘ಒಂದು ದೇಶ, ಚುನಾವಣೆ ಇಲ್ಲ’’ ಎಂಬ ಗುರಿಯೊಂದಿಗೆ ಸಂವಿಧಾನವನ್ನು ಸಂಪೂರ್ಣವಾಗಿ ಬುಡಮೇಲುಗೊಳಿಸಲು ಅವರು ಬಯಸಿದ್ದಾರೆ ಎಂದು ಅದು ಆರೋಪಿಸಿದೆ.

‘‘ಪ್ರಧಾನಿ ನರೇಂದ್ರ ಮೋದಿಯ ಉದ್ದೇಶ ಸ್ಪಷ್ಟ. ಸ್ಪಷ್ಟ ಬಹುಮತ ನೀಡಿ, ಮೂರನೇ ಎರಡು ಬಹುಮತ ನೀಡಿ, 400 ಸ್ಥಾನಗಳನ್ನು ನೀಡಿ ಎಂದು ಕೇಳಿಕೊಂಡು ಅವರು ತಿರುಗುತ್ತಿದ್ದಾರೆ. ಈಗ ಅವರ ಉದ್ದೇಶ ಬಹಿರಂಗವಾಗಿದೆ’’ ಪಿಟಿಐಯೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

‘‘ಅವರು ಬಾಬಾಸಾಹೇಬ್ ಅಂಬೇಡ್ಕರ್ರ ಸಂವಿಧಾನವನ್ನು ಸಂಪೂರ್ಣವಾಗಿ ಬುಡಮೇಲುಗೊಳಿಸಲು ಬಯಸಿದ್ದಾರೆ. ಅದಕ್ಕಾಗಿ ಅವರಿಗೆ ‘ಒಂದು ದೇಶ, ಚುನಾವಣೆ ಇಲ್ಲ’ ಎಂಬ ನೀತಿ ಬೇಕಾಗಿದೆ’’ ಎಂದು ಅವರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ನಳಿನ್ ಕೊಹ್ಲಿ, ‘‘ಇದೊಂದು ರಾಜಕೀಯ ವಿಷಯವಲ್ಲ, ಹಣ ಮತ್ತು ಇತರ ಸಂಪನ್ಮೂಲಗಳನ್ನು ಉಳಿಸುವ ಉದ್ದೇಶವನ್ನು ಇದು ಹೊಂದಿದೆ’’ ಎಂದು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News