ಐವರು ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ | ‘ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ಯ ಮಾಜಿ ಮುಖ್ಯಸ್ಥ ಬಾಳೇಶ್ ಧನಕರ್ ಗೆ 40 ವರ್ಷ ಜೈಲು ಶಿಕ್ಷೆ

ಬಾಳೇಶ್ ಧನಕರ್ | PC : X/ Kaleshi Bua
ಸಿಡ್ನಿ : ಕೊರಿಯಾದ ಐವರು ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಮೂಲದ ಬಾಳೇಶ್ ಧನಕರ್ ಗೆ ಆಸ್ಟ್ರೇಲಿಯಾದಲ್ಲಿ 40 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈತ ಆಸ್ಟ್ರೇಲಿಯಾದ ‘ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ಯ ಮಾಜಿ ಮುಖ್ಯಸ್ಥನಾಗಿದ್ದ ಎಂದು ತಿಳಿದು ಬಂದಿದೆ.
ಬಾಳೇಶ್ ಧನಕರ್ 21 ರಿಂದ 27ರ ಹರೆಯದ ಯುವತಿಯರಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗುತ್ತಿದ್ದ. 13 ಲೈಂಗಿಕ ದೌರ್ಜನ್ಯದ ಪ್ರಕರಣ, ಒಪ್ಪಿಗೆಯಿಲ್ಲದೆ ವೀಡಿಯೊ ಚಿತ್ರೀಕರಣ, ಹಲ್ಲೆ ಸೇರಿದಂತೆ 39 ಅಪರಾಧಗಳಿಗೆ ಸಂಬಂಧಿಸಿ ಬಾಳೇಶ್ ಧನಕರ್ ಗೆ ಈ ಶಿಕ್ಷೆಯನ್ನು ವಿಧಿಸಲಾಯಿತು. 2023ರ ಎಪ್ರಿಲ್‌ನಲ್ಲಿ ಸಿಡ್ನಿ ನ್ಯಾಯಾಲಯ ಎಲ್ಲಾ ಪ್ರಕರಣಗಳಲ್ಲಿ ಬಾಳೇಶ್ ಧನಕರ್ ತಪ್ಪಿತಸ್ಥ ಎಂದು ಘೋಷಿಸಿತು.
ಆಸ್ಟ್ರೇಲಿಯಾದ ಮಾಧ್ಯಮ ವರದಿಗಳ ಪ್ರಕಾರ, ಬಾಳೇಶ್ ಧನಕರ್ ಮಾಜಿ ಐಟಿ ಸಲಹೆಗಾರನಾಗಿದ್ದ. ಈತ ಕೊರಿಯನ್‌ನಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡುವವರು ಬೇಕಾಗಿದ್ದಾರೆ ಎಂದು ನಕಲಿ ಜಾಹೀರಾತು ನೀಡುತ್ತಿದ್ದ. ಈತನನ್ನು ಸಂಪರ್ಕಿಸುತ್ತಿದ್ದ ಮಹಿಳೆಯರನ್ನು ಸಿಡ್ನಿಯ ಹಿಲ್ಟನ್ ಹೋಟೆಲ್ನಲ್ಲಿರುವ ಬಾರ್‌ನಲ್ಲಿ ಭೇಟಿಯಾಗುತ್ತಿದ್ದ. ಬಳಿಕ ಹೋಟೆಲ್ ಅಥವಾ ಪಕ್ಕದಲ್ಲಿರುವ ತನ್ನ ಅಪಾರ್ಟ್ಮೆಂಟ್ನಲ್ಲಿ ಮಹಿಳೆಯರಿಗೆ ಮಾದಕವಸ್ತುಗಳನ್ನು ನೀಡಿ ಅತ್ಯಾಚಾರ ಎಸಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈತನ ಅಪರಾಧ ಕೃತ್ಯದ ಕುರಿತು ವೀಡಿಯೊ ಪುರಾವೆಗಳನ್ನು ಕೂಡ ಪೊಲೀಸರು ತನಿಖೆಯ ವೇಳೆ ಪತ್ತೆ ಹಚ್ಚಿದ್ದಾರೆ.
2006ರಲ್ಲಿ ಆಸ್ಟ್ರೇಲಿಯಾಕ್ಕೆ ವಿದ್ಯಾರ್ಥಿಯಾಗಿ ತೆರಳಿದ ಧನಕರ್, ಭಾರತೀಯ-ಆಸ್ಟ್ರೇಲಿಯನ್ ಸಮುದಾಯದಲ್ಲಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದಲ್ಲದೆ ಆಸ್ಟ್ರೇಲಿಯಾದ ಹಿಂದೂ ಕೌನ್ಸಿಲ್‌ನ ವಕ್ತಾರನಾಗಿ ಕಾರ್ಯನಿರ್ವಹಿಸಿದ್ದ. 2014ರಲ್ಲಿ ಸಿಡ್ನಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ವಾಗತ ಕಾರ್ಯಕ್ರಮ ಆಯೋಜಿಸುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ.
ವರದಿಯ ಪ್ರಕಾರ, ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮೈಕೆಲ್ ಕಿಂಗ್ ಅವರು ಆರೋಪಿ ಬಾಳೇಶ್ ಧನಕರ್‌ಗೆ ಶಿಕ್ಷೆ ವಿಧಿಸುವಾಗ, ಆತನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಳೇಶ್ ನಡವಳಿಕೆಯು ಪೂರ್ವ ಯೋಜಿತ, ಕುಶಲತೆಯಿಂದ ಕೂಡಿದ್ದು, ವಿಸ್ತಾರವಾಗಿ ಕಾರ್ಯರೂಪಕ್ಕೆ ತರಲಾಗಿತ್ತು ಮತ್ತು ಇದು ಅತ್ಯಂತ ಹಿಂಸಾತ್ಮಕವಾಗಿತ್ತು ಎಂದು ನ್ಯಾಯಾಧೀಶರು ಹೇಳಿದರು.
ಮಾರ್ನಿಂಗ್ ಹೆರಾಲ್ಡ್ ವರದಿಯ ಪ್ರಕಾರ, ಧನಕರ್ ತನ್ನ ಫೋನ್ ಕ್ಯಾಮೆರಾ ಮತ್ತು ಅಲರಾಂ ಗಡಿಯಾರದ ಒಳಗೆ ರಹಸ್ಯ ಕ್ಯಾಮೆರಾವನ್ನು ಇಟ್ಟು, ತಾನು ಎಸಗಿದ ನೀಚ ಕೃತ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದ. ಸಿಡ್ನಿಯಲ್ಲಿ ಇತ್ತೀಚೆಗೆ ನಡೆದ ಅತ್ಯಂತ ಕೆಟ್ಟ ಕೃತ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದೆ.