ರೂ. 4,002 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಮಾಹಿತಿ ಬಹಿರಂಗ ಇಲ್ಲ: ಏಕೆ ಗೊತ್ತೇ?

Update: 2024-03-16 09:55 GMT

ಹೊಸದಿಲ್ಲಿ: ಭಾರತೀಯ ಸ್ಟೇಟ್ ಬ್ಯಾಂಕ್ 2018ರ ಮಾರ್ಚ್‍ನಿಂದೀಚೆಗೆ ಒಟ್ಟು 16,518 ಕೋಟಿ ರೂಪಾಯಿ ಮೌಲ್ಯದ 28030 ಚುನಾವಣಾ ಬಾಂಡ್‍ಗಳನ್ನು ಮಾರಾಟ ಮಾಡಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಬಹಿರಂಗಪಡಿಸಿದೆ. ಆದರೆ ಚುನಾವಣಾ ಆಯೋಗ ಬಿಡುಗಡೆ ಮಾಡಿದ ಖರೀದಿದಾರರ ಪಟ್ಟಿಯಲ್ಲಿ ಕೇವಲ 12516 ಕೋಟಿ ರೂಪಾಯಿ ಮೌಲ್ಯದ 18871 ಬಾಂಡ್‍ಗಳ ವಿವರಗಳಿವೆ. ಈ ಕ್ರಮದಿಂದಾಗಿ 4002 ಕೋಟಿ ರೂಪಾಯಿ ಮೌಲ್ಯದ 9159 ಬಾಂಡ್‍ಗಳ ಬಹೆಗಿನ ಮಾಹಿತಿ ನಿಗೂಢವಾಗಿಯೇ ಉಳಿದಿದೆ.

ಈ ಅಂತರಕ್ಕೆ ಮುಖ್ಯ ಕಾರಣ, ಎಸ್‍ಬಿಐ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ ವಿವರಗಳಲ್ಲಿನ ಅಜಾಗರೂಕತೆ ಕಾರಣ. ಮಾರ್ಚ್ 6ರ ಒಳಗಾಗಿ ಚುನಾವಣಾ ಆಯೋಗಕ್ಕೆ ಎಲ್ಲ ಚುನಾವಣಾ ಬಾಂಡ್‍ಗಳ ಸಮಗ್ರ ವಿವರಗಳನ್ನು ನೀಡುವಂತೆ ಕೋರ್ಟ್ ಸೂಚಿಸಿದ್ದರೂ, ಮಾರ್ಚ್ 4ರಂದು ಎಸ್‍ಬಿಐ ಸಲ್ಲಿಸಿದ ಅರ್ಜಿಯಲ್ಲಿ 2019ರಿಂದೀಚೆಗೆ 22 ಹಂತಗಳಲ್ಲಿ ಮಾರಾಟ ಮಾಡಿದ ಬಾಂಡ್‍ಗಳ ವಿವರ ಮಾತ್ರ ಇದೆ.

ಆರಂಭದಲ್ಲಿ 2019ರ ಎಪ್ರಿಲ್ 12ರಿಂದ 2024ರ ಫೆಬ್ರವರಿ 15ರವರೆಗೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು 22,217 ಬಾಂಡ್‍ಗಳನ್ನು ಬಳಸಲಾಗಿದೆ ಎಂದು ಹೇಳಿತ್ತು. ಆದರೆ ಆ ಬಳಿಕ ಮಾರ್ಚ್ 12ರಂದು ಸಲ್ಲಿಸಿದ ಅನುಸರಣಾ ಅಫಿಡವಿಟ್‍ನಲ್ಲಿಕೇವಲ 18,871 ಬಾಂಡ್‍ಗಳನ್ನು ಮಾತ್ರ ಮಾರಾಟ ಮಾಡಲಾಗಿದೆ ಎಂದು ಬಹಿರಂಗಪಡಿಸಿತ್ತು. ಉಳಿದ ಬಾಂಡ್‍ಗಳಣ್ನು 2019ರ ಎಪ್ರಿಲ್ 1 ರಿಂದ 11ರ ಅವಧಿಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ.

ಸುಪ್ರೀಂಕೋರ್ಟ್ ತೀರ್ಪನ್ನು ಎಸ್‍ಬಿಐ ವಿಶ್ಲೇಷಣೆ ಮಾಡಿರುವ ವಿಧಾನ ಈ ವ್ಯತ್ಯಾಸಕ್ಕೆ ಕಾರಣ. 2019ರ ಎಪ್ರಿಲ್ 12ರಂದು ನೀಡಿದ ಮಧ್ಯಂತರ ಆದೇಶದ ಬಳಿಕ ಖರೀದಿ ಮಾಡಲಾದ ಚುನಾವಣಾ ಬಾಂಡ್‍ಗಳ ವಿವರಗಳನ್ನು ಸಲ್ಲಿಸುವಂತೆ ಎಸ್‍ಬಿಐಗೆ ಕೋರ್ಟ್ ಸೂಚಿಸಿತ್ತು.

ಮಧ್ಯಂತರ ತೀರ್ಪಿನ ಪ್ರಕಾರ, ಚುನಾವಣಾ ಬಾಂಡ್‍ಗಳಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು 2019ರ ಮೇ 15ರೊಳಗೆ ಚುನಾವಣಾ ಆಯೋಗಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ಇದನ್ನು ವಿಶ್ಲೇಷಿಸಿದ ಎಸ್‍ಬಿಐ 2018ರ ಮಾರ್ಚ್ 1ರಿಂದ 2019ರ ಎಪ್ರಿಲ್ 11ರ ವರೆಗಿನ ಮಾಹಿತಿಯನ್ನು ಹೊರತುಪಡಿಸಲಾಗಿದೆ ಎಂದು ನಿರ್ಧರಿಸಿತ್ತು. ಇದು ಈ ಮಾಹಿತಿಯ ಅಂತರಕ್ಕೆ ಕಾರಣವಾಗಿದೆ. ಇದರ ಪರಿಣಾಮವಾಗಿ ಮುಚ್ಚಿದ ಲಕೋಟೆಯಲ್ಲಿದ್ದ ಮಾಹಿತಿ ಬಹಿರಂಗವಾಗಿದ್ದು, ಉಳಿದ ಮಾಹಿತಿ ಬಹಿರಂಗವಾಗಿಲ್ಲ.

ಮುಚ್ಚಿದ ಲಕೋಟೆಯಲ್ಲಿರುವ ಮಾಹಿತಿಯಲ್ಲಿ 2018ರ ಮಾರ್ಚ್ 1ರಿಂದ 2019ರ ಮೇ 15ರವರೆಗೆ 10 ಹಂತಗಳಲ್ಲಿ ಬಿಡುಗಡೆ ಮಾಡಿದ ಬಾಂಡ್‍ಗಳ ವಿವರಗಳಿವೆ. ಇದರಲ್ಲಿ ಒಟ್ಟು 11681 ಬಾಂಡ್‍ಗಳಿವೆ. 2018ರ ಮಾರ್ಚ್ 1ರಿಂದ 2019ರ ಎಪ್ರಿಲ್ 12ರವರೆಗಿನ ಒಟ್ಟು 9159 ಬಾಂಡ್‍ಗಳ ಮಾಹಿತಿ ಇಲ್ಲ. ಇದರ ಒಟ್ಟು ಮೌಲ್ಯ 4002 ಕೋಟಿ ರೂಪಾಯಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News