ಸದ್ಯಕ್ಕೆ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಯಾವುದೇ ಸಮೀಕ್ಷೆ ನಡೆಸಬಾರದು: ಸುಪ್ರಿಂ ಕೋರ್ಟ್‌

Update: 2024-01-16 06:05 GMT

Photo: ANI

ಹೊಸದಿಲ್ಲಿ: ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಸಮೀಕ್ಷೆ ಕೈಗೊಳ್ಳಲು ಅಡ್ವಕೇಟ್‌ ಕಮಿಷನರ್‌ ಅವರ ನೇಮಕಾತಿಗಾಗಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶದ ಜಾರಿಗೆ ಸುಪ್ರೀಂ ಕೋರ್ಟ್‌ ಇಂದು ತಡೆಯಾಜ್ಞೆ ನೀಡಿದೆ.

ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಾಂಕರ್‌ ದತ್ತಾ ಅವರ ಪೀಠವು ಮೇಲಿನಂತೆ ಮಧ್ಯಂತರ ಆದೇಶ ಹೊರಡಿಸಿದೆ ಹಾಗೂ ಅಲಹಾಬಾದ್‌ ಹೈಕೋರ್ಟಿನ ಡಿಸೆಂಬರ್‌ 14ರ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿಗೊಳಿಸಿದೆ.

ಆರಾಧನಾ ಸ್ಥಳಗಳ ಕಾಯಿದೆ 1991 ಅಡಿ ಮೂಲ ಅರ್ಜಿಯನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅಪೀಲು ಬಾಕಿಯಿರುವಾಗ ಹೈಕೋರ್ಟ್‌ ಅಡ್ವಕೇಟ್‌ ಕಮಿಷನರ್‌ ಅವರ ನೇಮಕಾತಿಗೆ ಆದೇಶ ಹೊರಡಿಸಬಾರದಾಗಿತ್ತು ಎಂದು ಮಸೀದಿ ಸಮಿತಿಯ ವಕೀಲ ತಸ್ನೀಂ ಅಹ್ಮದಿ ವಾದಿಸಿದ್ದರು.

ಅರ್ಜಿದಾರರು ಸಲ್ಲಿಸಿದ್ದ ಮೂಲ ಅರ್ಜಿಯ ಆಧಾರದಲ್ಲಿ ಅಲಹಾಬಾದ್‌ ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಮಸೀದಿಯ ಅಡಿಯಲ್ಲಿ ಕೃಷ್ಣ ದೇವರ ಮೂಲ ಜನ್ಮಸ್ಥಾನವಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಈಗ ಶಾಹಿ ಈದ್ಗಾ ಮಸೀದಿ ಇರುವ ಸ್ಥಳ ಸಹಿತ ವಿವಾದಿತ ಸ್ಥಳವು ಶ್ರೀ ಕೃಷ್ಣ ವಿರಾಜಮಾನ್‌ಗೆ ಸೇರಿದ್ದು ಎಂದು ಘೋಷಿಸಬೇಕೆಂದು ಕೋರಿತ್ತು.

ಈ ಅರ್ಜಿಯನ್ನು ತಿರಸ್ಕರಿಸಬೇಕೆಂದು ಕೋರಿ ತಾನು ಸಲ್ಲಿಸಿದ್ದ ಅರ್ಜಿಯ ಕುರಿತು ತೀರ್ಪು ನೀಡುವ ಮುನ್ನವೇ ಅಡ್ವಕೇಟ್‌ ಕಮಿಷನರ್‌ ನೇಮಕಾತಿ ಆದೇಶ ಹೊರಡಿಸಬಾರದಾಗಿತ್ತು ಎಂದು ಮಸೀದಿ ಸಮಿತಿ ವಾದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News