ಖ್ಯಾತ ಆದಿವಾಸಿ ಗೀತೆ ರಚನೆಕಾರ ಸೇರಿ ಆರು ಮಂದಿ ಗುಂಡಿನ ದಾಳಿಗೆ ಬಲಿ

Update: 2023-09-01 05:13 GMT

Photo: TOI

ಗುವಾಹತಿ: ಬುಧವಾರ ತಡರಾತ್ರಿಯಿಂದೀಚೆಗೆ ಮಣಿಪುರದ ಹಿಂಸಾಪೀಡಿತ ಬಿಷ್ಣುಪುರ- ಚುರಚಂದನಪುರ ಗಡಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಖ್ಯಾತ ಆದಿವಾಸಿ ಗೀತ ರಚನೆಗಾರ- ಸಂಗೀತ ಸಂಯೋಜಕ ಸೇರಿದಂತೆ ಆರು ಮಂದಿ ಬಲಿಯಾಗಿದ್ದಾರೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ.

ಗುಂಡಿನ ದಾಳಿ, ಸ್ಫೋಟಗಳು ಮತ್ತು ನಿರಂತರ ಶೆಲ್ಲಿಂಗ್ನಿಂದ, ಆದಿವಾಸಿ ಗೀತೆ "ಐ ಗಾಮ್ ಹಿಲೋ ಹಮ್" ರಚಿಸಿದ್ದ ಎಲ್.ಎಸ್.ಮಂಗ್ಬೋಯ್ ಲುಂಗ್ಡಿಮ್ (42) ಎಂಬ ಗೀತರಚನೆಕಾರ ಮೃತಪಟ್ಟಿದ್ದಾರೆ. ಈ ಮೂಲಕ ಕೆಲ ಸಮಯದ ವರೆಗೆ ಶಾಂತಿಯುತವಾಗಿದ್ದ ರಾಜ್ಯದಲ್ಲಿ ಮತ್ತೆ ರಕ್ತಪಾತದ ಎರಡನೇ ಅಧ್ಯಾಯ ಆರಂಭವಾದಂತಾಗಿದೆ.

ಮೋರ್ಟರ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಲುಂಗ್ಡಿಮ್ ಅವರನ್ನು ಮಿಜೋರಾಂ ರಾಜಧಾನಿ ಐಜ್ವಾಲ್ ಗೆ ಚಿಕಿತ್ಸೆಗಾಗಿ ಕರೆ ತರುತ್ತಿದ್ದಾಗ ಗುರುವಾರ ಮಧ್ಯರಾತ್ರಿ ಬಳಿಕ 1 ಗಂಟೆಯ ವೇಳೆಗೆ ಅವರು ಕೊನೆಯುಸಿರೆಳೆದರು. ಕೊಯಿರೆಂಗ್ಟೆಕ್- ನರನ್ ಸೇನಿಯಾ ಪ್ರದೇಶದಲ್ಲಿ ನಡೆದ ಶೆಲ್ಲಿಂಗ್ ದಾಳಿಯಲ್ಲಿ ಗಾಯಗೊಂಡಿದ್ದ ರಿಚರ್ಡ್ ಹೆಮ್ ಕೊಲನ್ ಗಯಟೆ (31) ಬೆಳಿಗ್ಗೆ 9 ಗಂಟೆಯ ವೇಳೆಗೆ ಐಜ್ವಾಲ್ ಮೂಲಕ ಗುವಾಹತಿಗೆ ಕರೆದೊಯ್ಯುತ್ತಿದ್ದ ವೇಳೆ ಮೃತಪಟ್ಟರು.

ಗಡಿಯ ಪಕ್ಕ ನಡೆದ ಗುಂಡಿನ ದಾಳಿಯಲ್ಲಿ ಗ್ರಾಮ ಸ್ವಯಂಸೇವಕರಿಬ್ಬರು ಸಾವಿಗೀಡಾಗಿದ್ದಾರೆ. ಚುರಚಂದನಪುರದ ಕೌಸಂಬಂಗ್ ಎಂಬಲ್ಲಿ ನಡೆದ ಶೆಲ್ಲಿಂಗ್ ದಾಳಿಯಲ್ಲಿ ಎಂಟು ಮಂದಿ ಇತರರು ಗಾಯಗೊಂಡಿದ್ದಾರೆ.

ಬಿಷ್ಣುಪುರದ ತಮ್ನಪೋಕ್ಪಿ ಮತ್ತು ನರನ್ ಸೇನಿಯಾ ಎಂಬಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪೆಬಮ್ ದೇಬನ್ ಮತ್ತು ಮೊಯಿರಂಗಥೆಮ್ ರೊಪೆನ್ ಎಂಬ ಇಬ್ಬರು ಪ್ರಾಣ ಬಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News