ಸಾಮಾಜಿಕ ಮಾಧ್ಯಮಗಳ ಬಳಕೆಗೆ 15 ವರ್ಷ ವಯಸ್ಸಿನ ಮಿತಿ ಜಾರಿಗೆ ಮುಂದಾದ ನಾರ್ವೆ
ನಾರ್ವೆ: ಸಾಮಾಜಿಕ ಮಾಧ್ಯಮ ಬಳಕೆಗಾಗಿ ಕಟ್ಟುನಿಟ್ಟಾದ ಕನಿಷ್ಠ 15ವರ್ಷ ವಯಸ್ಸಿನ ಮಿತಿಯನ್ನು ಜಾರಿಗೊಳಿಸಲು ನಾರ್ವೆ ದೇಶವು ಸಿದ್ಧವಾಗಿದೆ.
ಸಾಮಾಜಿಕ ಮಾಧ್ಯಮ ಸಣ್ಣ ಮಕ್ಕಳ ಮೆದುಳಿನ ಮೇಲೆ ಪ್ರಭಾವ ಬೀರುತ್ತಿದ್ದು, ಮಕ್ಕಳನ್ನು ರಕ್ಷಿಸಲು ರಾಜಕೀಯ ಕ್ರಮದ ಅಗತ್ಯವನ್ನು ನಾರ್ವೆ ಪ್ರಧಾನಮಂತ್ರಿ ಜೊನಾಸ್ ಗಹರ್ ಸ್ಟೋರ್ ಪ್ರತಿಪಾದಿಸಿದ್ದಾರೆ.
ನಾರ್ವೆಯಲ್ಲಿ ಪ್ರಸ್ತುತ 13 ವರ್ಷ ವಯಸ್ಸಿನವರಾದರೆ ಸಾಮಾಜಿಕ ಮಾಧ್ಯಮವನ್ನು ಬಳಕೆ ಮಾಡಬಹುದು. ನಾರ್ವೇ ಮಾಧ್ಯಮ ಪ್ರಾಧಿಕಾರದ ಸಂಶೋಧನೆಯು 9 ವರ್ಷ ವಯಸ್ಸಿನ ಅರ್ಧಕ್ಕಿಂತ ಹೆಚ್ಚು ಅಂದರೆ 10 ವರ್ಷ ವಯಸ್ಸಿನ 58% ಮತ್ತು 11 ವರ್ಷ ವಯಸ್ಸಿನ 72% ಮಕ್ಕಳು ಈಗಾಗಲೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯವಾಗಿದ್ದಾರೆ ಎಂದು ತೋರಿಸುತ್ತದೆ ಎಂದು ಹೇಳಿದ್ದಾರೆ.
ಸರ್ಕಾರದ ಪ್ರಸ್ತಾವನೆಯನ್ನು ಸಮಾಲೋಚನೆಗಾಗಿ ಶೀಘ್ರದಲ್ಲೇ ಸಲ್ಲಿಸಲಾಗುವುದು. ಸಾಧ್ಯವಾದಷ್ಟು ಬೇಗ ಅದನ್ನು ಸಂಸತ್ತಿನ ಮೂಲಕ ಅಂಗೀಕರಿಸುವ ಗುರಿಯನ್ನು ಹೊಂದಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿ ವಯಸ್ಸಿನ ಮಿತಿಗೆ ಈಗಾಗಲೇ ಸಂಸದೀಯ ಬೆಂಬಲವಿದೆ. ಆದರೆ ಈ ನಿಯಮಗಳನ್ನು ಜಾರಿಗೊಳಿಸುವುದು ಸವಾಲಾಗಿರಬಹುದು ಎಂದು ಪ್ರಧಾನಮಂತ್ರಿ ಜೊನಾಸ್ ಗಹರ್ ಸ್ಟೋರ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಬಳಕೆಗೆ ಸಂಬಂಧಿಸಿ ನಾರ್ವೆ ಸರ್ಕಾರವು ಬಲವಾದ ರಕ್ಷಣಾತ್ಮಕ ಕ್ರಮಗಳನ್ನು ಪರಿಚಯಿಸಲು ಬದ್ಧವಾಗಿದೆ. ಇದರಲ್ಲಿ ವೈಯಕ್ತಿಕ ಡೇಟಾ ಕಾಯ್ದೆಗೆ ತಿದ್ದುಪಡಿಯೂ ಸೇರಿದೆ. ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಬಳಕೆದಾರರಿಗೆ 15 ವರ್ಷ ವಯಸ್ಸಿನ ಮಿತಿಯನ್ನು ಹೇರುವ ಗುರಿಯನ್ನು ನಾರ್ವೆ ಹೊಂದಿದೆ.