ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಸೋನಿಯಾ ಗಾಂಧಿ

Update: 2024-02-14 08:00 GMT

Screengrab:X/ANI

ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಇಂದು (ಬುಧವಾರ) ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸಿದರು. ಜೈಪುರದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ ಸೋನಿಯಾ ಗಾಂಧಿಯವರೊಂದಿಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಇದ್ದರು.

ರಾಜಸ್ಥಾನದಿಂದ ಕಾಂಗ್ರೆಸ್ ಪಕ್ಷವು ಒಂದು ರಾಜ್ಯಸಭಾ ಸ್ಥಾನದಲ್ಲಿ ಗೆಲುವು ಸಾಧಿಸುವುದು ದೃಢವಾಗಿದ್ದು, 77 ವರ್ಷದ ಸೋನಿಯಾ ಗಾಂಧಿ ಅವರು ಐದು ಬಾರಿ ಲೋಕಸಭಾ ಸಂಸದರಾದ ನಂತರ ಇದೇ ಪ್ರಥಮ ಬಾರಿಗೆ ರಾಜ್ಯಸಭೆಯನ್ನು ಪ್ರವೇಶಿಸಲಿದ್ದಾರೆ.

ಲೋಕಸಭೆಯಲ್ಲಿ ರಾಯ್ ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸೋನಿಯಾ ಗಾಂಧಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ.

15 ರಾಜ್ಯಗಳ ಒಟ್ಟು 56 ರಾಜ್ಯಸಭಾ ಸದಸ್ಯರು ಎಪ್ರಿಲ್ ತಿಂಗಳಲ್ಲಿ ನಿವೃತ್ತರಾಗುತ್ತಿದ್ದು, ತೆರವಾಗುತ್ತಿರುವ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಿಗದಿಯಾಗಿದೆ. ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನಾಂಕವಾಗಿದೆ.

ರಾಜಸ್ಥಾನದಿಂದ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಒಂದು ಸ್ಥಾನದಲ್ಲಿ ಸುಲಭವಾಗಿ ಗೆಲುವು ಸಾಧಿಸಲಿದೆ. ಮಾಜಿ ಪ್ರಧಾನಿ ಮನೋಹನ್ ಸಿಂಗ್ ಅವರ ಆರು ವರ್ಷಗಳ ಅವಧಿಯು ಎಪ್ರಿಲ್ ತಿಂಗಳಲ್ಲಿ ಮುಕ್ತಾಯವಾಗುತ್ತಿರುವುದರಿಂದ ಅವರ ಸ್ಥಾನ ತೆರವಾಗುತ್ತಿದೆ.

ಆಗಸ್ಟ್ 1964ರಿಂದ ಫೆಬ್ರವರಿ 1967ರವರೆಗೆ ಇಂದಿರಾ ಗಾಂಧಿ ರಾಜ್ಯಸಭಾ ಸದಸ್ಯರಾಗಿದ್ದ ನಂತರ ಗಾಂಧಿ ಕುಟುಂಬದಿಂದ ರಾಜ್ಯಸಭೆಯನ್ನು ಪ್ರವೇಶಿಸುತ್ತಿರುವ ಎರಡನೆ ಸದಸ್ಯೆ ಸೋನಿಯಾ ಗಾಂಧಿ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News