ಸೋನು ನಿಗಮ್ ಸೋಗಿನಲ್ಲಿ ಎಕ್ಸ್ ಬಳಕೆದಾರರೊಬ್ಬರಿಂದ ರಾಜಕೀಯ ಹೇಳಿಕೆ : ಅಸಮಾಧಾನ ವ್ಯಕ್ತಪಡಿಸಿದ ಗಾಯಕ
ಹೊಸ ದಿಲ್ಲಿ: ಜನಪ್ರಿಯ ಗಾಯಕ ಸೋನು ನಿಗಮ್ ಸೋಗಿನಲ್ಲಿ ಎಕ್ಸ್ ಬಳಕೆದಾರರೊಬ್ಬರು ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದು, ಆ ಖಾತೆಯನ್ನು ಪರಿಶೀಲಿಸದೆ, ತಾವು ನೀಡಿದ ಹೇಳಿಕೆಯೆಂದು ಮಾಧ್ಯಮಗಳು ವರದಿ ಮಾಡುತ್ತಿರುವ ವಿರುದ್ಧ ಸೋನು ನಿಗಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ಬಾರಿ ಸೋನು ನಿಗಮ್ ಈ ರೀತಿಯ ಮುಜುಗರದ ಸನ್ನಿವೇಶ ಎದುರಿಸದ್ದಾರೆ ಎನ್ನಲಾಗಿದೆ. ಕಳೆದ ಜೂನ್ 4ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಿಗೇ ಎಕ್ಸ್ ಬಳಕೆದಾರರೊಬ್ಬರು, ಸೋನು ನಿಗಮ್ ಸೋಗಿನಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡಿದ್ದರು. ಮಾಧ್ಯಮಗಳೂ ಕೂಡಾ ಆ ಬಳಕೆದಾರನ ಖಾತೆಯ ವಿವರಗಳನ್ನು ಪರಿಶೀಲಿಸದೆ, ಆ ಹೇಳಿಕೆ ಗಾಯಕ ಸೋನು ನಿಗಮ್ ರದ್ದು ಎಂಬಂತೆ ವರದಿ ಮಾಡಿದ್ದವು. ಆ ಘಟನೆಯು ಬಳಿಕ ವಿವಾದದ ಸ್ವರೂಪ ಪಡೆದುಕೊಂಡಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಗಾಯಕ ಸೋನು ನಿಗಮ್, “ನಾನು ಎಕ್ಸ್ ತೊರೆದು ಏಳು ವರ್ಷಗಳಾಗಿವೆ. ಆದರೆ, ನನ್ನದೇ ಹೆಸರು ಹೋಲುವ ಸೋನು ನಿಗಮ್ ಸಿಂಗ್ ಎಂಬ ಬಳಕೆದಾರರೊಬ್ಬರು ವ್ಯಕ್ತಪಡಿಸಿರುವ ರಾಜಕೀಯ ಹೇಳಿಕೆಗಳನ್ನು ನನ್ನದೇ ಎಂಬಂತೆ ಮಾಧ್ಯಮಗಳು ವರದಿ ಮಾಡಿವೆ. ಆ ಬಳಕೆದಾರರ ಪೂರ್ಣ ಹೆಸರು ಸೋನು ನಿಗಮ್ ಸಿಂಗ್ ಎಂದಾಗಿದ್ದು, ಅವರ ವೈಯಕ್ತಿಕ ವಿವರಗಳ ಪ್ರಕಾರ, ಅವರು ಬಿಹಾರ ಮೂಲದ ವಕೀಲರಾಗಿದ್ದಾರೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು Hindustan Times ಸುದ್ದಿ ಸಂಸ್ಥೆ ವರದಿ ಮಾಡಿದೆ.
ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೋನು ನಿಗಮ್, “ಆ ವ್ಯಕ್ತಿ ಹಲವಾರು ದಿನಗಳಿಂದ ನನ್ನ ಸೋಗಿನಲ್ಲಿ ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾನೆ. ನನ್ನ ಅನೇಕ ಸ್ನೇಹಿತರು ಆತನ ಪೋಸ್ಟ್ ಗಳ ಸ್ಕ್ರೀನ್ ಶಾಟ್ ಅನ್ನು ನನಗೆ ಕಳಿಸಿಕೊಟ್ಟಿದ್ದಾರೆ. ನಾವು ಆತನನ್ನು ಸಂಪರ್ಕಿಸಿ, ನನ್ನ ಲಕ್ಷಾಂತರ ಹಿಂಬಾಲಕರನ್ನು ತಪ್ಪು ದಾರಿಗೆ ಎಳೆಯುವ ಸಾಧ್ಯತೆ ಇರುವುದರಿಂದ ನಿಮ್ಮ ಖಾತೆಯ ಹೆಸರನ್ನು ಖಚಿತಪಡಿಸಿಕೊಳ್ಳಿ ಹಾಗೂ ನನ್ನಂತೆ ಸೋಗು ಹಾಕುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದೇವೆ. ಈ ಸಮಸ್ಯೆಗೆ ಪರಿಹಾರವನ್ನು ನಾವು ಖಂಡಿತ ಹುಡುಕಲಿದ್ದೇವೆ” ಎಂದು ಹೇಳಿದ್ದಾರೆ.