ಕುಂಭಮೇಳದಲ್ಲಿ ಕಾಲ್ತುಳಿತ; ಎರಡನೇ ಅಮೃತಸ್ನಾನಕ್ಕೆ ತಾತ್ಕಾಲಿಕ ತಡೆ

Update: 2025-01-29 07:15 IST
ಕುಂಭಮೇಳದಲ್ಲಿ ಕಾಲ್ತುಳಿತ; ಎರಡನೇ ಅಮೃತಸ್ನಾನಕ್ಕೆ ತಾತ್ಕಾಲಿಕ ತಡೆ

PC: PTI

  • whatsapp icon

ಪ್ರಯಾಗ್ರಾಜ್: ಮಹಾಕುಂಭ ಮೇಳದ ಮೌನಿ ಅಮಾವಾಸ್ಯೆ ಸಂದರ್ಭದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಸಂಗಮಕ್ಷೇತ್ರದಲ್ಲಿ ಪವಿತ್ರ ಸ್ನಾನಕ್ಕೆ ಭಕ್ತ ಸಾಗರವೇ ಹರಿದಿದೆ. ಮಂಗಳವಾರ ಮಧ್ಯರಾತ್ರಿಯ ಬಳಿಕ ಬುಧವಾರ ನಸುಕಿನ 1 ಗಂಟೆಯ ಸುಮಾರಿಗೆ ಜನದಟ್ಟಣೆ, ನೂಕು ನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆಯ ಬೆನ್ನಲ್ಲೇ ಎರಡನೇ ಅಮೃತಸ್ನಾನವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ಜನವರಿ 13ರಂದು ಆರಂಭವಾದ ಮಹಾಕುಂಭ ಮೇಳಕ್ಕೆ ಈ ಬಾರಿ ಅತ್ಯಧಿಕ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ಇದುವರೆಗೆ ಸುಮಾರು 15 ಕೋಟಿ ಮಂದಿ ಸಂಗಮಕ್ಷೇತ್ರದಲ್ಲಿ ಪವಿತ್ರಸ್ನಾನ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಎರಡನೇ ಅಮೃತ ಸ್ನಾನದ ದಿನವಾದ ಬುಧವಾರ ಲಕ್ಷಾಂತರ ಭಕ್ತರು ಪ್ರಯಾಗ್ರಾಜ್ ಯಾತ್ರೆ ಕೈಗೊಂಡಿರುವುದರಿಂದ ಭಾರಿ ಜನದಟ್ಟಣೆ ಕಂಡುಬಂದಿದೆ.

ಕಾಲ್ತುಳಿತ ಘಟನೆ ವರದಿಯಾದ ಬೆನ್ನಲ್ಲೇ ಎರಡನೇ ಅಮೃತಸ್ನಾನವನ್ನು ರದ್ದುಪಡಿಸಲಾಗಿದೆ ಎಂದು ಅಖಿಲ ಭಾರತೀಯ ಅಖಾರಾ ಪರಿಷತ್ ಅಧ್ಯಕ್ಷ ಶ್ರೀ ಮಹಾಂತ ರವೀಂದ್ರ ಪುರಿ ಹೇಳಿದ್ದಾರೆ. "ಅಮೃತಸ್ನಾನಕ್ಕೆ ಆಗಮಿಸದಂತೆ ಆಡಳಿತ ನಮಗೆ ಮನವಿ ಮಾಡಿಕೊಂಡಿದೆ. ಶ್ರೀಗಳು ಮತ್ತು ನಾಗಾ ಸಾಧುಗಳ ಮೆರವಣಿಗೆ ಮುಂದೆ ಸಾಗುವ ಸಿದ್ಧತೆ ನಡೆದಿದ್ದರೂ, ನಾವು ಪ್ರಸ್ತುತ ಹಿಂದಿರುಗಿದ್ದೇವೆ. ಸದ್ಯಕ್ಕೆ ಅಮೃತಸ್ನಾನ ತಡೆಹಿಡಿಯಲಾಗಿದೆ. ಶೀಘ್ರವೇ ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದು ಟೈಮ್ಸ್ ಆಫ್ ಇಂಡಿಯಾ ಪ್ರತಿನಿಧಿ ಜತೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News