ಭಾರತದಲ್ಲಿ ಫುಟ್‌ಬಾಲ್‌ನ ಬೆಳವಣಿಗೆಗೆ ಪೂರಕ ವಾತಾವರಣವಿಲ್ಲ : ಮಾಜಿ ಕೋಚ್ ಐಗರ್ ಸ್ಟೈಮ್ಯಾಕ್
ಹೊಸದಿಲ್ಲಿ: ಜಗತ್ತಿನಲ್ಲಿ ಅತ್ಯಂತ ಹೆಚ್ಚು ಇಷ್ಟಪಡುವ ಕ್ರೀಡೆ ಫುಟ್ ಬಾಲ್ ಆಗಿದ್ದರೂ, ಭಾರತದಲ್ಲಿ ಫುಟ್‌ಬಾಲ್‌ನ ಬೆಳವಣಿಗೆಗೆ ಪೂರಕ ವಾತಾವರಣವಿಲ್ಲ ಎಂದು ಭಾರತೀಯ ಫುಟ್ ಬಾಲ್ ತಂಡದ ಮಾಜಿ ಕೋಚ್ ಐಗರ್ ಸ್ಟೈಮ್ಯಾಕ್ ಅಭಿಪ್ರಾಯ ಪಟ್ಟಿದ್ದಾರೆ.
ಭಾರತೀಯ ಫುಟ್ ಬಾಲ್ ತಂಡದ ಕೋಚ್ ಹುದ್ದೆಯಿಂದ ವಜಾಗೊಂಡಿರುವ ಐಗರ್ ಸ್ಟೈಮ್ಯಾಕ್, ಶುಕ್ರವಾರ ಅಖಿಲ ಭಾರತ ಫುಟ್ ಬಾಲ್ ಒಕ್ಕೂಟದ ಅಧ್ಯಕ್ಷ ಕಲ್ಯಾಣ್ ಚೌಬೆ ಮೇಲೆ ತೀಕ್ಷ್ಣ ದಾಳಿ ನಡೆಸಿದ್ದಾರೆ. ಅವರು ಶೀಘ್ರವೇ ತಮ್ಮ ಹುದ್ದೆಯನ್ನು ತೊರೆಯಲಿದ್ದು, ಇದರಿಂದ ಭಾರತೀಯ ಫುಟ್ ಬಾಲ್ ಗೆ ಒಳಿತಾಗಲಿದೆ ಎಂದು ಹೇಳಿದ್ದಾರೆ.
ಫಿಫಾ ವಿಶ್ವಕಪ್ ನ ಮೂರನೆಯ ಅರ್ಹತಾ ಸುತ್ತನ್ನು ಭಾರತೀಯ ಫುಟ್ ಬಾಲ್ ತಂಡವು ಪ್ರವೇಶಿಸಲು ವಿಫಲಗೊಂಡಿದ್ದರಿಂದ, ಸೋಮವಾರ ಸ್ಟೈಮ್ಯಾಕ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಇದರ ಮರುದಿನವೇ, ಇನ್ನು ಹತ್ತು ದಿನಗಳ ಒಳಗಾಗಿ ನನ್ನ ಬಾಕಿಯನ್ನು ಪಾವತಿಸದಿದ್ದರೆ, ನಾನು ಅಖಿಲ ಭಾರತೀಯ ಫುಟ್ ಬಾಲ್ ಒಕ್ಕೂಟದ ವಿರುದ್ಧ ಫೀಫಾ ನ್ಯಾಯಾಧೀಕರಣದಲ್ಲಿ ದಾವೆ ಹೂಡುವುದಾಗಿ ಸ್ಟೈಮ್ಯಾಕ್ ಬೆದರಿಕೆ ಒಡ್ಡಿದ್ದರು.
ಶುಕ್ರವಾರ ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿದ ಐಗರ್ ಸ್ಟೈಮ್ಯಾಕ್,ಎಷ್ಟು ಬೇಗ ಕಲ್ಯಾಣ್ ಚೌಬೆ ಅಖಿಲ ಭಾರತೀಯ ಫುಟ್ ಬಾಲ್ ಒಕ್ಕೂಟದ ಅಧ್ಯಕ್ಷ ಹುದ್ದೆಯನ್ನು ತೊರೆಯುತ್ತಾರೊ, ಅಷ್ಟೂ ಬೇಗ ಭಾರತೀಯ ಫುಟ್ ಬಾಲ್ ಗೆ ಒಳಿತಾಗಲಿದೆ ಎಂದು ವಾಗ್ದಾಳಿ ನಡೆಸಿದರು.
ಭಾರತೀಯ ಫುಟ್ ಬಾಲ್ ಅನ್ನು ಬಂಧಿಸಡಲಾಗಿದೆ ಎಂದು ಆರೋಪಿಸಿದ ಸ್ಟೈಮ್ಯಾಕ್, ಕ್ರೀಡೆ ಮೇಲೆ ಉಂಟಾಗಿರುವ ಬಹುತೇಕ ಪ್ರತಿಕೂಲ ಪರಿಣಾಮಗಳಿಗೆ ಚೌಬೆಯೇ ಕಾರಣ ಎಂದೂ ದೂರಿದರು. ನನ್ನ ಅವಧಿಯಲ್ಲಿನ ಸುಳ್ಳುಗಳು ಹಾಗೂ ಈಡೇರದ ಭರವಸೆಗಳಿಂದ ಬೇಸತ್ತು ಹೋಗಿದ್ದೇನೆ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.
ಮಾರ್ಚ್ 2019ರಲ್ಲಿ ತಮ್ಮ ನಿಕಟಪೂರ್ವ ಮುಖ್ಯ ಕೋಚ್ ಸ್ಟೀಫನ್ ಕಾಂಸ್ಟಾನ್ಟೈನ್ ನಿರ್ಗಮನದ ನಂತರ ಐಗರ್ ಸ್ಟೈಮ್ಯಾಕ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಈ ತಿಂಗಳ ಆರಂಭದಲ್ಲಿ ಫೀಫಾ ಎರಡನೆ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡವು ಕತರ್ ಎದುರು ಪರಾಭವಗೊಂಡ ನಂತರ, ಭಾರತೀಯ ಫುಟ್ ಬಾಲ್ ಒಕ್ಕೂಟವು ಅವರನ್ನು ವಜಾಗೊಳಿಸಿತ್ತು.