ವಿದ್ಯಾರ್ಥಿ ಹೋರಾಟಗಾರ ಶರ್ಜೀಲ್ ಇಮಾಮ್‌ಗೆ ಜಾಮೀನು ಮಂಜೂರುಗೊಳಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಮತ್ತು ದೇಶದ್ರೋಹ ಪ್ರಕರಣದಲ್ಲಿ ಬಂಧಿತರಾಗಿರುವ ವಿದ್ಯಾರ್ಥಿ ಹೋರಾಟಗಾರ ಶರ್ಜೀಲ್ ಇಮಾಮ್‌ಗೆ ದಿಲ್ಲಿ ಹೈಕೋರ್ಟ್ ಬುಧವಾರ ಜಾಮೀನು ಮಂಜೂರುಗೊಳಿಸಿದೆ. ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಆಲಿಘರ್ ಮುಸ್ಲಿಂ ವಿವಿ ಮತ್ತು ದಿಲ್ಲಿಯ ಜಾಮಿಯಾ ಮಿಲಿಯಾ ವಿವಿಯಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪಗಳು ಅವರ ಮೇಲಿವೆ.
ವಿಚಾರಣಾ ನ್ಯಾಯಾಲಯವು ಜಾಮೀನು ನಿರಾಕರಿಸಿ ಹೊರಡಿಸಿದ್ದ ಆದೇಶವನ್ನು ಈ ಹಿಂದೆ ಶರ್ಜೀಲ್ ಇಮಾಮ್ ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ ಕದ ತಟ್ಟಿದ್ದರು. ಇಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರ ವಿಭಾಗೀಯ ಪೀಠ ಶರ್ಜೀಲ್ ಇಮಾಮ್‌ಗೆ ಜಾಮೀನು ನೀಡಿದೆ.
ಈ ಪ್ರಕರಣದಲ್ಲಿ ಗರಿಷ್ಠ ಏಳು ವರ್ಷ ಜೈಲು ಶಿಕ್ಷೆಯಲ್ಲಿ ಈಗಾಗಲೇ ಅರ್ಧದಷ್ಟು ಶಿಕ್ಷೆ ಅವಧಿ ಪೂರ್ಣಗೊಂಡಿರುವುದರಿಂದ ಜಾಮೀನು ಮಂಜೂರುಗೊಳಿಸುವಂತೆ ಶರ್ಜೀಲ್ ಕೋರಿದ್ದರು.
ಶರ್ಜೀಲ್ ನೀಡಿದ ಭಾಷಣಗಳು ಶಾಂತಿಭಂಗ ಉಂಟುಮಾಡಿರಬಹುದು ಹಾಗೂ 2020ರ ದಿಲ್ಲಿ ಹಿಂಸಾಚಾರಕ್ಕೆ ಕಾರಣವಾಗಿರಬಹುದು ಎಂಬ ಕಾರಣ ನೀಡಿ ಫೆಬ್ರವರಿ 17ರಂದು ವಿಚಾರಣಾ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿತ್ತು.