ಈಡಿ ಬಂಧನ ಪ್ರಶ್ನಿಸಿ ಹೇಮಂತ್ ಸೊರೇನ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಭೂ ಅವ್ಯವಹಾರ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಹೊರಿಸಿ ಜಾರಿ ನಿರ್ದೇಶನಾಲಯವು ತಮ್ಮನ್ನು ಬಂಧಿಸಿದ್ದನ್ನು ಪ್ರಶ್ನಿಸಿ ಜಾರ್ಖಂಡ್‌ನ ಮಾಜಿ ಸೀಎಂ ಹೇಮಂತ್ ಸೊರೇನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಹೇಳಿ ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ಈ ಅರ್ಜಿಯ ವಿಚಾರಣೆಗೆ ರಜಾಕಾಲದ ನ್ಯಾಯಪೀಠದ ನ್ಯಾಯಾಧೀಶರುಗಳಾದ ದೀಪಾಂಕರ್ ದತ್ತಾ ಮತ್ತು ಸತೀಶ್ ಶರ್ಮ ಮನಸ್ಸು ಮಾಡದೇ ಇದ್ದ ಹಿನ್ನೆಲೆಯಲ್ಲಿ ಅರ್ಜಿದಾರರು ಅರ್ಜಿ ವಾಪಸ್ ಪಡೆದಿದ್ದಾರೆ.
ಈಡಿ ದಾಖಲಿಸಿರುವ ದೂರನ್ನು ವಿಶೇಷ ನ್ಯಾಯಾಲಯ ಪರಿಗಣಿಸಿದೆ ಎಂಬ ಕುರಿತಂತೆ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಾಸ್ತವಗಳನ್ನು ಬಹಿರಂಗಪಡಿಸಿಲ್ಲ ಎಂದು ನ್ಯಾಯಪೀಠ ತನ್ನ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಈಡಿ ದೂರನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿದ್ದನ್ನು ಹಾಗೂ ಸೊರೇನ್ ಪರ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು ಅದು ತಿರಸ್ಕರಿಸಿರುವ ಹೊರತಾಗಿಯೂ ಸುಪ್ರೀಂ ಕೋರ್ಟ್ ಅವರ ಬಂಧನದ ಕಾನೂನುಬದ್ಧತೆಯನ್ನು ಪರಿಶೀಲಿಸಬಹುದು ಎಂಬ ಕುರಿತಂತೆ ವಿವರಣೆ ನೀಡಬೇಕೆಂದು ಮಂಗಳವಾರದ ವಿಚಾರಣೆ ವೇಳೆ ಸೊರೇನ್ ಅವರ ವಕೀಲ ಕಪಿಲ್ ಸಿಬಲ್ ಅವರಿಗೆ ನ್ಯಾಯಾಲಯ ಸೂಚಿಸಿತ್ತು.