ಕೊಲೆ ಆರೋಪದಲ್ಲಿ 11 ವರ್ಷ ಜೈಲಿನಲ್ಲಿದ್ದ ವ್ಯಕ್ತಿಗೆ ಸುಪ್ರೀಂ ರಿಲೀಫ್!
ಹೊಸದಿಲ್ಲಿ: ತಾನು ಮಾಡದ ಕೊಲೆಗಾಗಿ 11 ವರ್ಷ ಕಾಲ ಸೆರೆಮನೆಯಲ್ಲಿದ್ದ ಛತ್ತೀಸ್ ಗಢದ ಬಡ ಗ್ರಾಮಸ್ಥರೊಬ್ಬರನ್ನು ಸುಪ್ರೀಂಕೋರ್ಟ್ ಮಂಗಳವಾರ ದೋಷಮುಕ್ತಗೊಳಿಸಿದೆ. ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ಈ ವ್ಯಕ್ತಿಗೆ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ 11 ವರ್ಷ ಕಾಲ ಇವರು ಜೈಲು ಶಿಕ್ಷೆಗೆ ಗುರಿಯಾಗಿದ್ದರು.
ಈ ಪ್ರಕರಣ ಅಪರಾಧ ನ್ಯಾಯ ವ್ಯವಸ್ಥೆಯ ಆಮೆಗತಿ ನಡಿಗೆಯ ಉದಾಹರಣೆಯಾಗಿದೆ. ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿಯಲು ಛತ್ತೀಸ್ ಗಢ ಹೈಕೋರ್ಟ್ ಐದು ವರ್ಷಗಳನ್ನು ತೆಗೆದುಕೊಂಡಿತ್ತು. ಅಭಿಯೋಜಕರು ವ್ಯಕ್ತಿಯ ವಿರುದ್ಧದ ಆರೋಪವನ್ನು ತಾರ್ಕಿಕ ಸಂದೇಹಗಳಿಂದಾಚೆ ಸಾಬೀತುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಆತನನ್ನು ದೋಷಮುಕ್ತಗೊಳಿಸಲು ಮತ್ತೆ ಆರು ವರ್ಷಗಳನ್ನು ತೆಗೆದುಕೊಂಡಿತು ಎನ್ನುವುದು ಗಮನಾರ್ಹ.
ರಾಯಪುರದ ಖರೋರಾ ಎಂಬ ಗ್ರಾಮದಲ್ಲಿ 2013ರ ಮಾರ್ಚ್ 2ರಂದು ಮಲತಾಯಿಯನ್ನು ಬಲವಂತವಾಗಿ ನೀರಿನಲ್ಲಿ ಮುಳುಗಿಸಿ ಸಾಯಿಸಿದ ಆರೋಪದಲ್ಲಿ ರಂತು ಯಾದವ್ ಎಂಬಾತನನ್ನು ಬಂಧಿಸಲಾಗಿತ್ತು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ತ್ವರಿತಗತಿ ನ್ಯಾಯಾಲಯ 2013ರ ಜುಲೈ 9ರಂದು ಆರೋಪಿಗೆ ಜೀವಾವಧಿ ಶಿಕ್ಷೆ ವಿಧೀಸಿ ತೀರ್ಪು ನೀಡಿತ್ತು. 2018ರ ಏಪ್ರಿಲ್ 7ರಂದು ಹೈಕೋರ್ಟ್ ಈ ತೀರ್ಪನ್ನು ಎತ್ತಿಹಿಡಿದಿತ್ತು.
ಯಾವುದೇ ವಕೀಲರು ಈತನ ಪರ ವಾದ ಮಂಡಿಸದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್, ವಿಚಾರಣಾ ನ್ಯಾಯಾಲಯ ದಾಖಲೆಯಾಗಿ ಒದಗಿಸಿದ ಪುರಾವೆಯ ಬಗ್ಗೆ ನಿರ್ಧಾರಕ್ಕೆ ಬರಲು ಅಮೆಕಸ್ ಕ್ಯೂರಿ ಆಗಿ ನ್ಯಾಯಾಲಯಕ್ಕೆ ನೆರವಾಗಲು ಶ್ರೀಧರ್ ವೈ ಚಿಟಾಲೆ ಎಂಬ ವಕೀಲರನ್ನು ನೇಮಕ ಮಾಡಿತ್ತು. ಈ ಸಾವು ನೀರಿನಲ್ಲಿ ಮುಳುಗಿ ಸಂಭವಿಸಿದೆ ಎನ್ನುವುದನ್ನು ಮರಣೋತ್ತರ ಪರೀಕ್ಷೆಯ ವರದಿ ದೃಢಪಡಿಸಿದೆ. ಆದರೆ ಇದು ಉದ್ದೇಶಪೂರ್ವಕ ಹತ್ಯೆ ಎನ್ನುವುದನ್ನು ಅಭಿಯೋಜಕರು ಸಾಬೀತುಪಡಿಸಿಲ್ಲ ಎಂದು ಚಿಟಾಲೆ ಅಭಿಪ್ರಾಯಪಟ್ಟಿದ್ದರು.
ಈ ಕೊಲೆಯನ್ನು ತಾನೇ ಮಾಡಿದ್ದಾಗಿ ಸಾಕ್ಷಿಯೊಬ್ಬರು ನೀಡಿದ ಹೇಳಿಕೆ ಕಾನೂನುಬಾಹಿರ ಹಾಗೂ ವಿಚಾರಣೆ ವೇಳೆ ಈ ಸಾಕ್ಷಿ ವ್ಯತಿರಿಕ್ತ ಸಾಕ್ಷಿ ನೀಡಿದ್ದರು. ಆದ್ದರಿಂದ ಆರೋಪಿ ತನ್ನ ಮಲತಾಯಿಯನ್ನು ಮುಳುಗಿಸಿ ಸಾಯಿಸಿದ ಕಥೆಗೆ ಸಮರ್ಥನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ನ್ಯಾಯಪೀಠ ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.