ನಟಿ ಸ್ವರಾ ಭಾಸ್ಕರ್ ಪತಿಗೆ ಶರದ್ ಪವಾರ್ ಎನ್ ಸಿಪಿ ಪಟ್ಟಿಯಲ್ಲಿ ಸ್ಥಾನ
ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ನಡೆಯುವ ಚುನಾವಣೆಗೆ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಮೂರನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಟಿ ಸ್ವರಾ ಭಾಸ್ಕರ್ ಅವರ ಪತಿ ಫಹದ್ ಅಹ್ಮದ್ ಅವರನ್ನು ಕಣಕ್ಕೆ ಇಳಿಸಿದೆ.
ಸಮಾಜವಾದಿ ಪಕ್ಷದ ಯುವ ವಿಭಾಗದ ಅಧ್ಯಕ್ಷರಾಗಿರುವ ಅಹ್ಮದ್, ಎನ್ ಸಿಪಿ(ಎಸ್ಪಿ)ಗೆ ಪಕ್ಷಾಂತರ ಮಾಡಿದ್ದು, ಅನುಶಕ್ತಿನಗರ ಕ್ಷೇತ್ರದಿಂದ ಅವರನ್ನು ಕಣಕ್ಕೆ ಇಳಿಸಲಾಗಿದೆ. ಇವರು ಅಜಿತ್ ಪವಾರ್ ನೇತೃತ್ವದ ಎನ್ ಸಿಪಿಯ ಮಾಜಿ ಸಚಿವ ನವಾಬ್ ಮಲಿಕ್ ಅವರ ಪುತ್ರಿ ಸನಾ ಮಲಿಕ್ ಅವರ ಸವಾಲು ಎದುರಿಸುವರು. ದಾವೂದ್ ಇಬ್ರಾಹಿಂ ಸಹೋದರಿಯಿಂದ ಕುರ್ಲಾದಲ್ಲಿ ಆಸ್ತಿಯೊಂದನ್ನು ಕಿತ್ತುಕೊಂಡ ಆರೋಪದಲ್ಲಿ 2022ರ ಫೆಬ್ರುವರಿಯಲ್ಲಿ ಕಾನೂನು ಜಾರಿ ನಿರ್ದೇಶನಾಲಯ ನವಾಬ್ ಮಲಿಕ್ ಅವರನ್ನು ಬಂಧಿಸಿತ್ತು.
ಅನುಶಕ್ತಿ ನಗರ ಕ್ಷೇತ್ರದ ಹಾಲಿ ಶಾಸಕರಾಗಿರುವ ನವಾಬ್ ಮಲಿಕ್ ಕಳೆದ ವರ್ಷ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಳಿಕ ಅವರು ಅಜಿತ್ ಪವಾರ್ ನೇತೃತ್ವದ ಬಣ ಸೇರಿದ್ದರು. ಬಹುಶಃ ಮಿತ್ರಪಕ್ಷವಾದ ಬಿಜೆಪಿಯ ಅಕ್ಷೇಪದ ಹಿನ್ನೆಲೆಯಲ್ಲಿ ಅವರನ್ನು ಕಣಕ್ಕೆ ಇಳಿಸಿಲ್ಲ. ಎನ್ ಸಿಪಿ (ಎಸ್ಪಿ) ಮಹಾರಾಷ್ಟ್ರ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಸೇರಿದಂತೆ ಒಂಬತ್ತು ಮಂದಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಒಟ್ಟು 76 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ. ಈ ಪೈಕಿ 11 ಮಂದಿ ಮಹಿಳೆಯರು.
ದಿವಂಗತ ಬಿಜೆಪಿ ಶಾಸಕ ರಾಜೇಂದ್ರ ಪಾಟ್ನಿ ಅವರ ಪುತ್ರ ಧ್ಯಾಯಕ್ ಪಾಟ್ನಿ ಅವರನ್ನು ಕರಂಜ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ. 2014 ಮತ್ತು 2019ರಲ್ಲಿ ಬಿಜೆಪಿ ಟಿಕೆಟ್ ನಲ್ಲಿ ಗೆದ್ದಿದ್ದ ರಾಜೇಂದ್ರ ಪಾಟ್ನಿ ಕಳೆದ ಫೆಬ್ರವರಿಯಲ್ಲಿ ಮೃತಪಟ್ಟಿದ್ದರು. ಆದರೆ ಅವರ ಪುತ್ರ ಎನ್ಸಿಪಿ (ಎಸ್ಪಿ) ಪಕ್ಷ ಸೇರಿದ್ದರು.
ಉಳಿದಂತೆ ಅತುಲ್ ವಂಡಿಲೆ (ಹಿಂಗಾನ್ಘಾಟ್), ರಮೇಶ್ ಬಂಗ್ (ಹಿಂಗ್ನಾ), ರಾಹುಲ್ ಕಲಾಟೆ (ಚಿಂಚವಾಡ್) ಮತ್ತು ಅಜಿತ್ ಗಾವ್ನೆ (ಭೋಸರಿ), ಮೋಹನ್ ಜಗತಾಪ್ (ಮಜಲಗಾಂವ್) ಮತ್ತು ರಾಜಾಸಾಹೇಬ್ ದೇಶಮುಖ್ (ಪಾರ್ಲಿ), ಸಿದ್ದಿ ರಮೇಶ್ ಕದಂ (ಮೊಹಲ್) ಪಕ್ಷದ ಅಭ್ಯರ್ಥಿಗಳು.