ದೂರಸಂಪರ್ಕ ಮಸೂದೆ: ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಸೇವೆಗಳ ಸ್ವಾಧೀನಕ್ಕೆ, ಅಮಾನತಿಗೆ ಕೇಂದ್ರಕ್ಕೆ ಅವಕಾಶ

Update: 2023-12-18 10:25 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿರುವ ಕರಡು ದೂರಸಂಪರ್ಕ ಮಸೂದೆ, 2023 ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಲ್ಲಿ ಯಾವುದೇ ಅಥವಾ ಎಲ್ಲ ದೂರಸಂಪರ್ಕ ಸೇವೆಗಳು ಅಥವಾ ನೆಟ್‌ವರ್ಕ್‌ಗಳನ್ನು ಸ್ವಾಧೀನ ಪಡಿಸಿಕೊಳ್ಳಲು, ನಿರ್ವಹಿಸಲು ಅಥವಾ ಅಮಾನತುಗೊಳಿಸಲು ಕೇಂದ್ರಕ್ಕೆ ಅವಕಾಶವನ್ನು ಒದಗಿಸಿದೆ.

ನೂತನ ಮಸೂದೆಯು ದೂರಸಂಪರ್ಕ ಕ್ಷೇತ್ರವನ್ನು ನಿಯಂತ್ರಿಸುತ್ತಿರುವ 138 ವರ್ಷಗಳಷ್ಟು ಹಳೆಯದಾದ ಭಾರತೀಯ ಟೆಲಿಗ್ರಾಫ್ ಕಾಯ್ದೆಯನ್ನು ಬದಲಿಸುವ ಉದ್ದೇಶವನ್ನು ಹೊಂದಿದೆ.

ಕಳೆದ ಆಗಸ್ಟ್‌ನಲ್ಲಿ ಸಚಿವ ಸಂಪುಟವು ಮಸೂದೆಗೆ ಅನುಮೋದನೆಯನ್ನು ನೀಡಿತ್ತು.

2023ರ ಕರಡು ದೂರಸಂಪರ್ಕ ಮಸೂದೆಯು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ಓವರ್-ದಿ -ಟಾಪ್ (ಒಟಿಟಿ) ಅಥವಾ ಇಂಟರ್ನೆಟ್ ಆಧಾರಿತ ಕರೆಗಳನ್ನು ಮಾಡುವ ಮತ್ತು ಸಂದೇಶಗಳನ್ನು ರವಾನಿಸುವ ಆ್ಯಪ್‌ಗಳನ್ನು ದೂರಸಂಪರ್ಕದ ವ್ಯಾಖ್ಯಾನದಡಿ ತರಲು ಉದ್ದೇಶಿಸಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ಅಧಿಕಾರವನ್ನು ನಿರ್ಬಂಧಿಸಲೂ ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ. ದೂರಸಂಪರ್ಕ ಉದ್ಯಮವು ಟ್ರಾಯ್ ಅಧಿಕಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು.

ದೂರಸಂಪರ್ಕ ಕಂಪನಿಯು ತನ್ನ ಪರವಾನಿಗೆಯನ್ನು ಮರಳಿಸಿದರೆ ಪರವಾನಿಗೆ, ನೋಂದಣಿ ಇತ್ಯಾದಿ ಶುಲ್ಕಗಳ ಮರುಪಾವತಿಯಂತಹ ಕೆಲವು ನಿಯಮಗಳನ್ನು ಸಡಿಲಿಸಲು ಮಸೂದೆಯು ಉದ್ದೇಶಿಸಿದೆ.

ನೂತನ ಮಸೂದೆಯು ಬಳಕೆದಾರರ ಹಿತಾಸಕ್ತಿಯಲ್ಲಿ ಮಾರುಕಟ್ಟೆಯಲ್ಲಿ ಸ್ಪರ್ಧೆ, ದೂರಸಂಪರ್ಕ ನೆಟ್‌ವರ್ಕ್‌ಗಳ ಲಭ್ಯತೆ ಅಥವಾ ನಿರಂತರತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪ್ರವೇಶ ಶುಲ್ಕ, ಪರವಾನಿಗೆ ಶುಲ್ಕ, ದಂಡ ಇತ್ಯಾದಿಗಳನ್ನು ಮನ್ನಾ ಮಾಡುವ ಅಧಿಕಾರವನ್ನು ಸರಕಾರಕ್ಕೆ ನೀಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News