ಶಿಂಧೆ ಪಾಳಯದ ವಿರುದ್ಧ ಅನರ್ಹತೆ ಅರ್ಜಿಗಳ ಕುರಿತು ಸುಪ್ರೀಂ ಮೆಟ್ಟಿಲೇರಿದ ಠಾಕ್ರೆ ಬಣ

Update: 2023-07-04 18:24 GMT

ಹೊಸದಿಲ್ಲಿ: ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಅವರಿಗೆ ನಿಷ್ಠ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ಗೆ ನಿರ್ದೇಶನಗಳನ್ನು ಕೋರಿ ಶಿವಸೇನೆ (ಉದ್ಧವ್ ಬಾಳಾಸಾಹೇಬ ಠಾಕ್ರೆ)ಯು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.

2022ರಲ್ಲಿ ಪಕ್ಷದ ಮುಖ್ಯ ಸಚೇತಕರಾಗಿದ್ದ ಶಿವಸೇನೆಯ ಠಾಕ್ರೆ ಬಣದ ಶಾಸಕ ಸುನಿಲ್ ಪ್ರಭು ಅವರು ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಅನರ್ಹತೆ ಅರ್ಜಿಯನ್ನು ಸಲ್ಲಿಸಿದ್ದರು. ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಭು,ಮೇ 11ರ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಸ್ಪೀಕರ್ ಅರ್ಜಿಗಳನ್ನು ಇತ್ಯರ್ಥಗೊಳಿಸುವಲ್ಲಿ ಉದ್ದೇಶಪೂರ್ವಕ ವಿಳಂಬವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಾಕಿಯುಳಿದಿರುವ ಅನರ್ಹತೆ ಅರ್ಜಿಗಳನ್ನು ನ್ಯಾಯಯುತವಾದ ಅವಧಿಯಲ್ಲಿ ತೀರ್ಮಾನಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಮೇ 11ರ ಆದೇಶದಲ್ಲಿ ಸ್ಪಷ್ಟ ನಿರ್ದೇಶನ ನೀಡಿದ್ದರೂ ಸ್ಪೀಕರ್ ಈವರೆಗೆ ಒಂದೇ ಒಂದು ವಿಚಾರಣೆಯನ್ನು ನಡೆಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿರುವ ಪ್ರಭು, ಅನರ್ಹತೆ ಅರ್ಜಿಗಳನ್ನು ಇತ್ಯರ್ಥಗೊಳಿಸುವಲ್ಲಿ ಉದ್ದೇಶಪೂರ್ವಕ ವಿಳಂಬದ ಮೂಲಕ ಅವರು ಮುಖ್ಯಮಂತ್ರಿ ಏಕನಾಥ ಶಿಂಧೆಯವರು ಕಾನೂನುಬಾಹಿರವಾಗಿ ಅಧಿಕಾರದಲ್ಲಿ ಮುಂದುವರಿಯಲು ಅನುಮತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News