ಬಿಜೆಪಿ ಮತ್ತು ಮೂರು ನೂತನ ಸಿಎಂಗಳು : ಸಂಘ ಪರಿವಾರದ ನಂಟು ಮತ್ತು ಜಾತಿ ಸಮೀಕರಣದ ಲೆಕ್ಕಾಚಾರ

Update: 2023-12-12 15:35 GMT

ವಿಷ್ಣು ದಿಯೊ ಸಾಯಿ , ಮೋಹನ್ ಯಾದವ್, ಭಜನ್ ಲಾಲ್ ಶರ್ಮ | PTI

ಹೊಸದಿಲ್ಲಿ: ಇತ್ತೀಚಿಗೆ ಮುಕ್ತಾಯಗೊಂಡ ಪಂಚರಾಜ್ಯ ಚುನಾವಣೆಗಳ ಪೈಕಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಡದಲ್ಲಿ ಭಾರಿ ಗೆಲುವು ಸಾಧಿಸಿದ್ದ ಬಿಜೆಪಿ, ಬರೋಬ್ಬರಿ ಹತ್ತು ದಿನಗಳ ನಂತರ ಮೂರೂ ರಾಜ್ಯಗಳ ಮುಖ್ಯಮಂತ್ರಿ ಆಯ್ಕೆಯನ್ನು ಅಂತಿಮಗೊಳಿಸಿದೆ. ಮೂರೂ ರಾಜ್ಯಗಳ ಮುಖ್ಯಮಂತ್ರಿ ಹುದ್ದೆಗೂ ಹೊಸ ಮುಖಗಳಿಗೆ ಮಣೆ ಹಾಕಿರುವ ಬಿಜೆಪಿ ಹೈಕಮಾಂಡ್, ಕ್ರಮವಾಗಿ ಬ್ರಾಹ್ಮಣ, ಇತರೆ ಹಿಂದುಳಿದ ವರ್ಗಗಳು ಹಾಗೂ ಬುಡಕಟ್ಟು ಸಮುದಾಯದ ನಾಯಕರನ್ನು ಮುಖ್ಯಮಂತ್ರಿ ಗಾದಿಗೇರಿಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಆದರೆ, ಈ ಜಾತಿ ಸಮೀಕರಣವನ್ನು ಸಂಪೂರ್ಣವಾಗಿ ಸಂಘ ಪರಿವಾರದ ನಿರ್ದೇಶನದನ್ವಯ ಪಾಲಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಎಚ್ಚರಿಕೆಯಿಂದಲೇ ಈ ಆಯ್ಕೆಗಳನ್ನು ಮಾಡಲಾಗಿದೆ ಎಂದೂ ಬಿಜೆಪಿ ಮೂಲಗಳು ಹೇಳುತ್ತಿವೆ.

ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ಕ್ರಮವಾಗಿ ಬ್ರಾಹ್ಮಣ ಸಮುದಾಯದ ಭಜನ್ ಲಾಲ್ ಶರ್ಮ, ಇತರೆ ಹಿಂದುಳಿದ ವರ್ಗದ ಮೋಹನ್ ಯಾದವ್ ಹಾಗೂ ಬುಡಕಟ್ಟು ಸಮುದಾಯದ ವಿಷ್ಣು ದಿಯೊ ಸಾಯಿ ಅವರನ್ನು ಮುಖ್ಯಮಂತ್ರಿಗಳನ್ನಾಗಿಸಲಾಗಿದೆ.

ಹಾಗೆಯೇ, ರಾಜಸ್ಥಾನದಲ್ಲಿ ರಾಜವಂಶಸ್ಥೆಯಾದ ದಿಯಾ ಕುಮಾರಿ ಹಾಗೂ ಪರಿಶಿಷ್ಟ ಜಾತಿಯ ಪ್ರೇಮ್‌ಚಂದ್ ಬೈರ್ವಾರನ್ನು ಉಪ ಮುಖ್ಯಮಂತ್ರಿಗಳನ್ನಾಗಿಸಲಾಗಿದ್ದರೆ, ಸಿಂಧಿ ಸಮುದಾಯದ ನಾಯಕ ವಾಸುದೇವ್ ದೇವಾನಿಯನ್ನು ವಿಧಾನಸಭಾ ಸ್ಪೀಕರನ್ನಾಗಿಸಲಾಗಿದೆ.

ಮಧ್ಯಪ್ರದೇಶದಲ್ಲಿ ದಲಿತ ಸಮುದಾಯದ ಜಗದೀಶ್ ದೇವ್ಡಾ ಹಾಗೂ ಬ್ರಾಹ್ಮಣ ಸಮುದಾಯದ ರಾಜೇಂದ್ರ ಶುಕ್ಲಾ ಅವರನ್ನು ಉಪ ಮುಖ್ಯಮಂತ್ರಿಗಳನ್ನಾಗಿಸಲಾಗಿದ್ದರೆ, ರಜಪೂತ ಸಮುದಾಯದ ನಾಯಕ ನರೇಂದ್ರ ಸಿಂಗ್ ತೋಮರ್‌ರನ್ನು ವಿಧಾನಸಭಾ ಸ್ಪೀಕರನ್ನಾಗಿಸಲಾಗಿದೆ.

ಛತ್ತೀಸ್‌ಗಡದಲ್ಲಿ ಇತರೆ ಹಿಂದುಳಿದ ವರ್ಗಕ್ಕೆ ಸೇರಿರುವ ಸಾಹು ಸಮುದಾಯದ ಅರುಣ್ ಸಾವೊ ಹಾಗೂ ಬ್ರಾಹ್ಮಣ ನಾಯಕ ವಿಜಯ್ ಶರ್ಮಾರನ್ನು ಉಪ ಮುಖ್ಯಮಂತ್ರಿಗಳನ್ನಾಗಿಸಲಾಗಿದ್ದರೆ, ರಜಪೂತ ಸಮುದಾಯದ ರಾಮಣ್ ಸಿಂಗ್ ಅವರನ್ನು ವಿಧಾನಸಭಾ ಸ್ಪೀಕರನ್ನಾಗಿಸಲಾಗಿದೆ.

ಈ ಎಲ್ಲ ಮುಖ್ಯಮಂತ್ರಿಗಳ ಆಯ್ಕೆಯಲ್ಲಿರುವ ಸಮಾನ ಅಂಶವೆಂದರೆ, ಅವರೆಲ್ಲ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಪರ್ಕ ಹೊಂದಿರುವುದು. ಭಜನ್ ಲಾಲ್ ಶರ್ಮ, ಮೋಹನ್ ಯಾದವ್ ಹಾಗೂ ವಿಷ್ಣು ದಿಯೊ ಸಾಯಿ ಎಲ್ಲರೂ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾರೆ.

2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮೂರನೆಯ ಅವಧಿಯ ಗೆಲುವಿನ ಮೇಲೆ ಕಣ್ಣು ನೆಟ್ಟಿರುವ ಸಂಘ ಪರಿವಾರವು, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ ರಾಜ್ಯಗಳಿಗೆ ಆಯ್ಕೆ ಮಾಡಿರುವ ಮುಖ್ಯಮಂತ್ರಿಗಳ ಮೂಲಕ ದೇಶದ ಎಲ್ಲ ಜಾತಿಯ ಸಮುದಾಯಗಳನ್ನು ತನ್ನತ್ತ ಸೆಳೆಯುವ ಗುರಿ ಹೊಂದಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಎಲ್ಲ ಜಾತಿ ಹಾಗೂ ಗುಂಪುಗಳನ್ನು ಬಿಜೆಪಿ ತಲುಪಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದೊಂದಿಗೆ ಈ ಆಯ್ಕೆಗಳು ಸ್ಥಿರತೆ ಹೊಂದಿವೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News