ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಿಂದ ಸಿಜೆಐ ಅವರನ್ನು ಹೊರಗಿಡುವ ಮಸೂದೆ ಮಂಡಿಸಲಿರುವ ಕೇಂದ್ರ
ಹೊಸದಿಲ್ಲಿ: ದೇಶದ ಉನ್ನತ ಚುನಾವಣಾ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಿಂದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡುವ ಮಸೂದೆಯನ್ನು ಇಂದು ಸಂಸತ್ ಮುಂದೆ ಕೇಂದ್ರ ಮಂಡಿಸುವ ನಿರೀಕ್ಷೆಯಿದ್ದು ಇದು ಮತ್ತೆ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವೆಗಳ ಷರತ್ತುಗಳು ಮತ್ತು ಅಧಿಕಾರಾವಾಧಿ) ಮಸೂದೆ 2023 ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆಯಿದ್ದು, ಚುನಾವಣಾ ಅಧಿಕಾರಿಗಳನ್ನು ಪ್ರಧಾನಿ, ಲೋಕಸಭೆಯ ವಿಪಕ್ಷ ನಾಯಕ ಮತ್ತು ಪ್ರಧಾನಿಯಿಂದ ನೇಮಕಗೊಂಡ ಕೇಂದ್ರ ಸಚಿವರೊಬ್ಬರ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಕಗೊಳಿಸಲು ಈ ಮಸೂದೆ ಅನುವು ಮಾಡಿಕೊಡಲಿದೆ. ಈ ಸಮಿತಿಯ ನೇತೃತ್ವವನ್ನು ಪ್ರಧಾನಿ ವಹಿಸಲಿದ್ದಾರೆಂದು ಮಸೂದೆ ಹೇಳುತ್ತದೆ.
ಮುಖ್ಯ ಚುನಾವಣಾ ಆಯುಕ್ತರ ಸಹಿತ ಇತರ ಚುನಾವಣಾ ಆಯುಕ್ತರನ್ನು ಪ್ರಧಾನಿ, ವಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಿರುವ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಕಾತಿ ಮಾಡಬೇಕೆಂದು ಮಾರ್ಚ್ 2023ರಲ್ಲಿ ಸುಪ್ರೀಂ ಕೋರ್ಟಿನ ಸಂವಿಧಾನಿಕ ಪೀಠ ನೀಡಿದ ತೀರ್ಪಿಗೆ ಈ ಮಸೂದೆ ವಿರುದ್ಧವಾಗಿದೆ.
ಆದರೆ ಸಂಸತ್ತು ಈ ಕುರಿತು ಕಾನೂನು ಜಾರಿಗೆ ತರುವ ತನಕ ಈ ಏರ್ಪಾಟು ಮುಂದುವರಿಯಲಿದೆ ಎಂದು ತೀರ್ಪು ಹೇಳಿತ್ತು.