ಮುರುಗದಾಸ್‌ 'ಗಜಿನಿ' ಚಿತ್ರದ ಬಗ್ಗೆ ಹಾಲಿವುಡ್‌ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ಗಿತ್ತು ಬೇಸರ !

Update: 2023-09-23 06:53 GMT

christopher nolan (Photo: getty images)

ಮುಂಬೈ: ಭಾರತೀಯ ಸಿನಿರಂಗದಲ್ಲಿ ಮೊದಲ 100 ಕೋಟಿ ರೂ. ಕ್ಲಬ್‌ ಸೇರಿದ ಮೊದಲ ಚಿತ್ರವಾದ ಗಜಿನಿಯ ಬಗ್ಗೆ ಹಾಲಿವುಡ್‌ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ ಅವರಿಗಿರುವ ಬೇಸರದ ಬಗ್ಗೆ ಬಾಲಿವುಡ್‌ ನಟ ಅನಿಲ್‌ ಕಪೂರ್‌ ಈ ಹಿಂದೆ ಬಹಿರಂಗಪಡಿಸಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಈಗಲೂ ಚರ್ಚೆ ನಡೆಯುತ್ತಿರುತ್ತವೆ.

ಎಆರ್‌ ಮುರುಗದಾಸ್‌ ನಿರ್ದೇಶನದಲ್ಲಿ ತಮಿಳಿನಲ್ಲಿ ಮೊದಲು ತೆರೆಕಂಡ ಗಜಿನಿ ಚಿತ್ರವು ಸೂರ್ಯ ಅವರ ವೃತ್ತಿ ಜೀವನದಲ್ಲಿ ದೊಡ್ಡ ಬ್ರೇಕ್‌ ಅನ್ನು ನೀಡಿತ್ತು. ಈ ಚಿತ್ರದ ನಟಿ ಆಸಿನ್‌ ಪಾತ್ರವು ಸಾಕಷ್ಟು ಗಮನ ಸೆಳೆದಿತ್ತು. ಈ ಚಿತ್ರದ ಯಶಸ್ಸು ಕಂಡ ನಿರ್ದೇಶಕ ಎಆರ್‌ ಮುರುಗದಾಸ್‌ ಚಿತ್ರದಲ್ಲಿ ಸಣ್ಣ ಮಾರ್ಪಾಡಿನೊಂದಿಗೆ ಬಾಲಿವುಡ್‌ನಲ್ಲಿ ಆಮಿರ್‌ ಖಾನ್‌ ಅವರನ್ನು ಮುಖ್ಯಭೂಮಿಕೆಯಲ್ಲಿರಿಸಿ ಮೂಲ ಚಿತ್ರದ ಹೆಸರಿನಲ್ಲೇ ಚಿತ್ರ ನಿರ್ಮಿಸಿದ್ದರು.

2008 ರಲ್ಲಿ ತೆರೆಕಂಡ ಆಮಿರ್‌ ಖಾನ್‌ ಅವರ ಗಜಿನಿಯು ನೂರು ಕೋಟಿ ಕ್ಲಬ್‌ ಪ್ರವೇಶಿಸಿದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಈ ಚಿತ್ರದ ಮೂಲಕ ನಟಿ ಆಸಿನ್‌ರಿಗೂ ಬಾಲಿವುಡ್‌ನಲ್ಲಿ ವಿಫುಲ ಅವಕಾಶವನ್ನು ಪಡೆದಿದ್ದರು.

ಹಲವು ದಾಖಲೆಗಳನ್ನು ಸೃಷ್ಟಿಸಿ, ವಿಮರ್ಶಕರಿಂದಲೂ ಮೆಚ್ಚುಗೆ ಪಡೆದು, ಬಾಕ್ಸ್‌ ಆಫೀನಲ್ಲೂ ದಾಖಲೆ ನಿರ್ಮಿಸಿದ್ದ ಗಜಿನಿ ಚಿತ್ರದ ಬಗ್ಗೆ ಹಾಲಿವುಡ್‌ ನಿರ್ದೇಶಕ ನೋಲನ್‌ ಅವರು ಬೇಸರಗೊಂಡಿದ್ದರು.

2000 ದಲ್ಲಿ ಬಿಡುಗಡೆಯಾದ ನೋಲನ್‌ ಅವರ ʼಮೆಮೆಂಟೋʼ ಚಿತ್ರದ ಮುಖ್ಯ ಪಾತ್ರದಿಂದ ಗಜಿನಿಯಲ್ಲಿ ಸೂರ್ಯ ಹಾಗೂ ಆಮಿರ್‌ ನಿರ್ವಹಿಸಿದ ಪಾತ್ರ ಪ್ರೇರಣೆ ಪಡೆದಿದೆ. ಮರೆವು ರೋಗದಿಂದ ಬಳಲುತ್ತಿರುವ ನಾಯಕ ತನ್ನ ಪ್ರೇಯಸಿಯ ಕೊಲೆಗಾರನನ್ನು ಹುಡುಕಿ ಹೋಗುವುದೇ ಎರಡೂ ಚಿತ್ರದ ಒನ್‌ ಲೈನ್‌ ಕತೆಯಾಗಿತ್ತು. ಅಲ್ಲದೆ, ಮುರುಗದಾಸ್‌ ಚಿತ್ರದ ಹಲವು ದೃಶ್ಯಗಳು ನೋಲನ್‌ ಅವರ ಮೂಲ ಚಿತ್ರದಿಂದ ಪ್ರೇರಣೆ ಪಡೆದಿದ್ದವಾಗಿದ್ದವು.

ಆದರೆ ಎಲ್ಲೂ ತನಗೆ ಸಲ್ಲಬೇಕಾದ ಕ್ರೆಡಿಟ್ ಅನ್ನು ಎಲ್ಲೂ ನೀಡದೆ ಎರಡೆರಡು ಬಾರಿ ಚಿತ್ರ ನಿರ್ಮಿಸಿರುವುದಕ್ಕೆ ನೋಲನ್‌ ಬೇಸರ ವ್ಯಕ್ತಪಡಿಸಿದ್ದರು ಎಂದು ಅನಿಲ್‌ ಕಪೂರ್‌ ಬಹಿರಂಗಪಡಿಸಿದ್ದರು.

ಅದಾಗ್ಯೂ ಚಿತ್ರ ಭಾರತದಲ್ಲಿ ದೊಡ್ಡ ಮಟ್ಟಿಗಿನ ಯಶಸ್ಸು ಕಂಡಿರುವ ಬಗ್ಗೆ ನೋಲನ್‌ ಸಂತೋಷಪಟ್ಟಿದ್ದರು ಎಂದು ಅನಿಲ್‌ ಹೇಳಿದ್ದಾರೆ.

ಮೆಮೆಂಟೋ ಚಿತ್ರವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ನೋಲನ್‌ ಅವರು ಬಹಳ ಕಷ್ಟಪಟ್ಟಿದ್ದರು. ವಿತರಕರ ಕೊರತೆಯಿಂದ ಚಿತ್ರವು ಒಂದು ವರ್ಷ ಮುಂದುವರೆಯಲು ಸಾಧ್ಯವಾಗಲಿಲ್ಲ. ಒಮ್ಮೆ ಬಿಡುಗಡೆಯಾದ ನಂತರ, ಅದನ್ನು ಕೇವಲ 11 ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗಿತ್ತು. ಆದರೆ, ಶೀಘ್ರದಲ್ಲೇ ಚಿತ್ರವು ಬಾಯಿಂದ ಬಾಯಿಗೆ ಉತ್ತಮ ಪ್ರತಿಕ್ರಿಯೆಗಳನ್ನು ಪಡೆಯುತ್ತಾ ಹೋಗಿದ್ದರಿಂದ ಚಿತ್ರವು ಶೀಘ್ರದಲ್ಲೇ 500 ಪರದೆಗಳಿಗೆ ವಿಸ್ತರಿಸಿತ್ತು. ಹಾಗೂ ಟಿಕೆಟ್‌ ಮಾರಾಟದಿಂದಲೇ 40 ಮಿಲಿಯನ್ ಡಾಲರ್‌ಗಳನ್ನು ಗಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News