ಬಿರ್ಲಾದ ಮಾಜಿ ಉನ್ನತಾಧಿಕಾರಿ ಒಡಿಶಾದ ಅತ್ಯಂತ ಶ್ರೀಮಂತ ಅಭ್ಯರ್ಥಿ
ಭುವನೇಶ್ವರ: ಕಟಕ್ ಲೋಕಸಭಾ ಕ್ಷೇತ್ರದಿಂದ ಬಿಜೆಡಿ ಟಿಕೆಟ್ ನಲ್ಲಿ ಸ್ಪರ್ಧಿಸುತ್ತಿರುವ ಆದಿತ್ಯ ಬಿರ್ಲಾ ಉದ್ಯಮ ಸಮೂಹದ ಮಾನವ ಸಂಪನ್ಮೂಲ ವಿಭಾಗದ ಮಾಜಿ ಮುಖ್ಯಸ್ಥ ಸಂತೃಪ್ತ್ ಮಿಶ್ರಾ (58) ನಾಮಪತ್ರ ಸಲ್ಲಿಕೆ ಜತೆ ನೀಡಿರುವ ಅಫಿಡವಿಟ್ ನಲ್ಲಿ ಮಾಹಿತಿ ನೀಡಿದಂತೆ 461 ಕೋಟಿ ರೂಪಾಯಿಗಳ ಆಸ್ತಿ ಘೋಷಿಸಿಕೊಂಡಿದ್ದು, ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಆದಿತ್ಯ ಉದ್ಯಮ ಸಮೂಹದಲ್ಲಿ ಸ್ವಯಂನಿವೃತ್ತಿ ಪಡೆದ ಬಳಿಕ ಮಿಶ್ರಾ ಬಿಜೆಡಿ ಸೇರಿದ್ದರು. ಅವರ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ 2021-22ರಲ್ಲಿ 76.23 ಕೋಟಿ ರೂಪಾಯಿ ಆದಾಯ ತೋರಿಸಿದ್ದಾರೆ. ಅಂತೆಯೇ 2022-23ರಲ್ಲಿ 66.21 ಕೋಟಿ ರೂಪಾಯಿ ಆದಾಯ ಘೋಷಿಸಿದ್ದರು. ಮಿಶ್ರಾ 408 ಕೋಟಿ ರೂಪಾಯಿಗಳ ಚರಾಸ್ತಿ ಮತ್ತು 53 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ. ಇದರಲ್ಲಿ 4 ಕೋಟಿ ರೂಪಾಯಿ ಬ್ಯಾಂಕ್ ಠೇವಣಿಗಳೂ ಸೇರಿವೆ.
ಅವರ ಮ್ಯೂಚುವಲ್ ಫಂಡ್ ಗಳಲ್ಲಿನ ಹೂಡಿಕೆ, ಪರ್ಯಾಯ ಹೂಡಿಕೆ ಫಂಡ್, ಬಾಂಡ್ ಮತ್ತು ಷೇರುಗಳಲ್ಲಿನ ಹೂಡಿಕೆಯ ಪ್ರಸ್ತುತ ಮೌಲ್ಯ 308 ಕೋಟಿ ರೂಪಾಯಿ. ಅವರು 2.3 ಕೋಟಿ ರೂಪಾಯಿ ಮೌಲ್ಯದ ಕಾರುಗಳನ್ನು ಹೊಂದಿದ್ದಾರೆ. ಇವರ ಪತ್ನಿ 11.72 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳ ಒಡತಿ. ಮಿಶ್ರಾ ಒಡಿಶಾದಲ್ಲಿ ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. ಆದರೆ ಮಹಾರಾಷ್ಟ್ರದ ರಾಯಗಢದಲ್ಲಿ ಕೃಷಿಭೂಮಿ ಮತ್ತು ಹೈದರಾಬಾದ್ ಮತ್ತು ಮುಂಬೈನಲ್ಲಿ ಒಂದು ಫ್ಲಾಟ್ ಹೊಂದಿದ್ದಾರೆ.
ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿಯ ರೂರ್ಕೆಲಾ ಅಭ್ಯರ್ಥಿ ದಿಲೀಪ್ ರಾಯ್ (71) ಮತ್ತೊಬ್ಬ ಶ್ರೀಮಂತ ಅಭ್ಯರ್ಥಿ. 1999ರಲ್ಲಿ ಜಾರ್ಖಂಡ್ ಕಲ್ಲಿದ್ದಲು ಗಣಿ ಹಂಚಿಕೆ ಆರೋಪದಲ್ಲಿ ಅವರ ಶಿಕ್ಷೆಗೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಅವರು ಸ್ಪರ್ಧಿಸುವುದು ಸಾಧ್ಯವಾಗಿದೆ. ಅವರು 300 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಬಗ್ಗೆ ಅಫಿಡವಿಟ್ ನೀಡಿದ್ದಾರೆ.