ಶುಕ್ರವಾರ ಮಧ್ಯಾಹ್ನ ವಿರಾಮದ ಸಮಯ ಬದಲಾಯಿಸಿದ ರಾಜ್ಯಸಭಾ ಸಭಾಪತಿ
ಹೊಸದಿಲ್ಲಿ: ಲೋಕಸಭೆಯ ಸಮಯಕ್ಕೆ ಸರಿಹೊಂದುವಂತೆ ರಾಜ್ಯಸಭೆಯ ಶುಕ್ರವಾರ ಮಧ್ಯಾಹ್ನದ ವಿರಾಮ ಸಮಯವನ್ನು ಬದಲಾಯಿಸಲಾಗಿದೆ. ಹಿಂದಿನ 2.30 ಗಂಟೆಯ ಬದಲು 2 ಗಂಟೆಗೆ ರಾಜ್ಯಸಭಾ ಅಧಿವೇಶನ ಆರಂಭಗೊಳ್ಳಲಿದೆ ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಕರ್ ಬದಲಾಯಿಸಿದ್ದಾರೆ.
ಕಳೆದ ಶುಕ್ರವಾರ ಈ ಸಮಯ ಬದಲಾವಣೆ ಬಗ್ಗೆ ತಿಳಿದ ನಂತರ ಡಿಎಂಕೆಯ ತಿರುಚ್ಚಿ ಸಿವ ಅವರು ಕಾರಣವನ್ನು ಕೇಳಿದರು. “ಸಂಪ್ರದಾಯದಂತೆ ಶುಕ್ರವಾರ ಅಪರಾಹ್ನದ ಸಮಯ 2.30ಕ್ಕೆ ಆರಂಭಗೊಳ್ಳುತ್ತದೆ, ಆದರೆ ಇಂದು 2 ಗಂಟೆ ಎಂದು ತಿಳಿಸಲಾಗಿದೆ. ಸದಸ್ಯರಿಗೆ ಈ ಕುರಿತು ತಿಳಿದಿಲ್ಲ,” ಎಂದು ಅವರು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ, ಕಳೆದ ಅಧಿವೇಶನದಲ್ಲಿಯೇ ತಾವು ಸಮಯ ಬದಲಾಯಿಸಿರುವುದಾಗಿ ತಿಳಿಸಿದರು.
“ಇದು ಇವತ್ತಿಗೆ ಮಾತ್ರ ಅಲ್ಲ. ಕಾರಣ ಹಿಂದೆಯೇ ನೀಡಲಾಗಿದೆ. ಲೋಕಸಭೆ ಊಟದ ವಿರಾಮದ ನಂತರ ಅಪರಾಹ್ನ 2 ಗಂಟೆಗೆ ಆರಂಭವಾಗುತ್ತದೆ. ಲೋಕಸಭೆ ಮತ್ತು ರಾಜ್ಯಸಭೇ ಸಂಸತ್ತಿನ ಅವಿಭಾಜ್ಯ ಅಂಗಗಳಾಗಿರುವುದರಿಂದ ಏಕಕಾಲದಲ್ಲಿ ಕಾರ್ಯಾರಂಭಿಸುವುದು ಒಳ್ಳೆಯದು,” ಎಂದು ಧನ್ಕರ್ ಹೇಳಿದರು.
ಡಿಎಂಕೆಯ ಇನ್ನೊಬ್ಬ ಸದಸ್ಯ ಎಂ ಎಂ ಅಬ್ದುಲ್ಲ ಮಾತನಾಡಿ ಮುಸ್ಲಿಂ ಸದಸ್ಯರಿಗೆ ಶುಕ್ರವಾರದ ಪ್ರಾರ್ಥನೆಗೆ ಅನುಕೂಲಕರವಾಗಲೆಂದು ಊಟದ ನಂತರದ ಅವಧಿ 2.30ಕ್ಕೆ ಆರಂಭಗೊಳ್ಳುತ್ತಿತ್ತು ಎಂದರು.
ಇದಕ್ಕೆ ಪ್ರತಿಕ್ರಿಯಸಿದ ಧನ್ಕರ್, “ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎಲ್ಲಾ ವರ್ಗಗಳ ಸದಸ್ಯರಿದ್ದಾರೆ. ಚರ್ಚೆಯ ನಂತರ ನಿರ್ಧಾರ ಕೈಗೊಳ್ಳಲಾಗಿದೆ, ಲೋಕಸಭೆಯ ಸಮಯದಂತೆಯೇ ರಾಜ್ಯಸಭೆ ಕೂಡ ಊಟದ ನಂತರ 2 ಗಂಟೆಗೆ ಕಾರ್ಯಾರಂಭಿಸುತ್ತದೆ,” ಎಂದು ಹೇಳಿದರು.