ತಿರುಪತಿ ಲಡ್ಡು ವಿವಾದ: ಪವನ್ ಕಲ್ಯಾಣ್- ಪ್ರಕಾಶ್ ರಾಜ್ ವಾಕ್ಸಮರ!

Update: 2024-09-22 06:45 GMT

ಹೊಸದಿಲ್ಲಿ: ತಿರುಪತಿ ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಹಂದಿ ಮತ್ತು ದನದ ಕೊಬ್ಬು ಸೇರಿದೆ ಎಂಬ ಪ್ರಯೋಗಾಲಯ ವರದಿ ಬಹಿರಂಗವಾದ ಬೆನ್ನಲ್ಲೇ ಎದ್ದಿರುವ ವಿವಾದದ ಸಂಬಂಧ ನಟ-ರಾಜಕಾರಣಿ ಪವನ್ ಕಲ್ಯಾಣ್ ಮತ್ತು ನಟ ಪ್ರಕಾಶ್ರಾಜ್ ವಾಕ್ಸಮರ ನಡೆಸಿರುವ ಕುತೂಹಲಕರ ಘಟನೆ ಬೆಳಕಿಗೆ ಬಂದಿದೆ.

ತಿರುಪತಿ ಲಡ್ಡಿನಲ್ಲಿ ಮೀನೆಣ್ಣೆ, ಹಂದಿ ಮತ್ತು ಹಸುವಿನ ಕೊಬ್ಬು ಸೇರಿರುವ ಬಗ್ಗೆ ಪವನ್ ಕಲ್ಯಾಣ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವೈಎಸ್ಆರ್ ಕಾಂಗ್ರೆಸ್ ನೇತೃತ್ವದ ಸರ್ಕಾರ ನೇಮಕ ಮಾಡಿದ್ದ ಹಿಂದಿನ ಟಿಡಿಡಿ ಮಂಡಳಿಯನ್ನು ಪ್ರಶ್ನಿಸಿರುವ ಅವರು, ಇಡೀ ವಿವಾದಕ್ಕೆ ಮಂಡಳಿ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.

ಭಾರತದಲ್ಲಿ ದೇವಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಬಹುಶಃ ರಾಷ್ಟ್ರಮಟ್ಟದಲ್ಲಿ ಸನಾತನ ಧರ್ಮ ಪ್ರಕಾಶನ ಮಂಡಳಿ ರಚಿಸುವ ಅಗತ್ಯವಿದೆ. ಎಲ್ಲ ನೀತಿ ನಿರೂಪಕರು, ಧಾರ್ಮಿಕ ಮುಖಂಡರು, ನ್ಯಾಯಾಂಗ, ನಾಗರಿಕರು, ಮಾಧ್ಯಮ ಮತ್ತು ಸಂಬಂಧಿಸಿದ ಎಲ್ಲರ ನಡುವೆ ಚರ್ಚೆ ಏರ್ಪಡುವ ಅಗತ್ಯವಿದೆ. ಸನಾತನ ಧರ್ಮದ ಅವಹೇಳನ ತಡೆಯಲು ಒಂದಾಗಬೇಕಾದ ಅಗತ್ಯವಿದೆ ಎಂದು ಪವನ್ ಕಲ್ಯಾಣ್ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆದರೆ ಇದನ್ನು ನಟ ಪ್ರಕಾಶ್ ರಾಜ್ ಕಟುವಾಗಿ ಟೀಕಿಸಿ, ಪ್ರಾದೇಶಿಕ ಸಮಸ್ಯೆಯನ್ನು ರಾಷ್ಟ್ರೀಯ ವಿವಾದವಾಗಿ ಬಿಂಬಿಸಲಾಗುತ್ತಿದೆ ಎಂದು ಆಪಾದಿಸಿದ್ದಾರೆ. ಕೋಮು ಗಲಭೆ ಹರಡುವ ಬದಲು ಇದನ್ನು ಸ್ಥಳೀಯವಾಗಿ ತನಿಖೆ ನಡೆಸಿ ಇತ್ಯರ್ಥಪಡಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

"ಆತ್ಮೀಯ ಪವನ್ ಕಲ್ಯಾಣ್, ನೀವು ಉಪ ಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲಿ ಇದು ನಡೆದಿದೆ. ದಯವಿಟ್ಟು ತನಿಖೆ ನಡೆಸಿ ತಪ್ಪಿತಸ್ಥರನನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಿ. ನೀವು ಇದನ್ನು ರಾಷ್ಟ್ರೀಯ ಸಮಸ್ಯೆಯಾಗಿ ಏಕೆ ಬಿಂಬಿಸುತ್ತೀರಿ? ದೇಶದಲ್ಲಿ ಸಾಕಷ್ಟು ಕೋಮು ಸಂಘರ್ಷಗಳಿವೆ" ಎಂದು ರಾಜ್ ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News