ಕೊಚ್ಚಿ ವಾಟರ್ ಮೆಟ್ರೋಗಾಗಿ ನಿರ್ಮಿಸಿದ್ದ ಎರಡು ಬೋಟ್‌ಗಳು ಉತ್ತರ ಪ್ರದೇಶಕ್ಕೆ ರವಾನೆ

Update: 2024-01-05 10:51 GMT

ಸಾಂದರ್ಭಿಕ ಚಿತ್ರ (PTI)

ಕೊಚ್ಚಿ: ಕೊಚ್ಚಿನ್ ಶಿಪ್ಯಾರ್ಡ್ ಲಿ.(ಸಿಎಸ್ಎಲ್) ಕೊಚ್ಚಿ ವಾಟರ್ ಮೆಟ್ರೋಗಾಗಿ ನಿರ್ಮಿಸಿದ್ದ ಎರಡು ಬೋಟ್‌ ಗಳನ್ನು ಉತ್ತರ ಪ್ರದೇಶಕ್ಕೆ ರವಾನಿಸಲಾಗಿದೆ. ಭಾರತೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರ (ಐಡಬ್ಲ್ಯುಎಐ)ವು ಈ ಬೋಟ್‌ ಗಳು ಅಯೋಧ್ಯೆ ಮತ್ತು ವಾರಣಾಸಿಗಳಲ್ಲಿ ಕಾರ್ಯಾಚರಿಸಲಿದೆ ಎಂದು .thehindu.com ವರದಿ ಮಾಡಿದೆ.

ಈ ಎರಡು ಲಾಂಚ್ ಗಳು ಕೊಚ್ಚಿ ವಾಟರ್ ಮೆಟ್ರೋ ಲಿ.(ಕೆಡಬ್ಲ್ಯುಎಂಎಲ್) ಬೇಡಿಕೆ ಸಲ್ಲಿಸಿದ್ದ 23 ಲಾಂಚ್ ಗಳಲ್ಲಿ ಸೇರಿವೆ. ಮುಖ್ಯ ಭೂಭಾಗದಿಂದ ಗ್ರೇಟರ್ ಕೊಚ್ಚಿ ಪ್ರದೇಶದ 10 ದ್ವೀಪಗಳಿಗೆ ಕಾರ್ಯಾಚರಿಸಲು ಈ ಬೋಟ್ ಗಳಿಗೆ ಕೆಡಬ್ಲ್ಯುಎಂಎಲ್ ಬೇಡಿಕೆ ಸಲ್ಲಿಸಿತ್ತು. ಇಂತಹ ಇನ್ನೂ ಆರು ಎಲೆಕ್ಟ್ರಿಕ್-ಹೈಬ್ರಿಡ್ ಬೋಟ್ ಗಳು ಸಿಎಸ್ಎಲ್ ನ ಅಂಗಸಂಸ್ಥೆಯಾಗಿರುವ ಕೋಲ್ಕತಾದ ಹೂಗ್ಲಿ ಕೊಚ್ಚಿನ್ ಶಿಪ್ಯಾರ್ಡ್ ನಲ್ಲಿ ನಿರ್ಮಾಣಗೊಳ್ಳಲಿವೆ. ಅವುಗಳ ಪೂರೈಕೆ ಪ್ರಕ್ರಿಯೆಯು ಜೂನ್ ನಲ್ಲಿ ಆರಂಭಗೊಳ್ಳಲಿದ್ದು, ಅಯೋಧ್ಯೆ, ವಾರಣಾಸಿ, ಮಥುರಾ ಮತ್ತು ಗುವಾಹಟಿಗಳಲ್ಲಿ ನಿಯೋಜಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದು ದೇಶದ ಒಳನಾಡು ಜಲಮಾರ್ಗಗಳಲ್ಲಿ ವಿದ್ಯುತ್ ಮತ್ತು ಇತರ ಕಡಿಮೆ ಇಂಗಾಲವನ್ನು ಹೊರಸೂಸುವ ಲಾಂಚ್ ಗಳನ್ನು ನಿಯೋಜಿಸುವ ನೌಕಾ ಸಚಿವಾಲಯದ ಪ್ರಯತ್ನಗಳ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಎಸ್ಎಲ್ ಈವರೆಗೆ 23 ಲಾಂಚ್ ಗಳ ಪೈಕಿ 12ನ್ನು ಕೆಡಬ್ಲ್ಯುಎಂಎಲ್ ಗೆ ಹಸ್ತಾಂತರಿಸಿದೆ. ಪೂರೈಕೆ ಸರಪಳಿ ಸಮಸ್ಯೆಗಳಿಂದ ಇತರ ಲಾಂಚ್ಗಳ ಪೂರೈಕೆಯಲ್ಲಿ ವಿಳಂಬವಾಗಿದೆ. ಈ ತಿಂಗಳಾಂತ್ಯದಲ್ಲಿ ಎರಡು ಮತ್ತು ಫೆಬ್ರವರಿಯಲ್ಲಿ ಇನ್ನೂ ಎರಡು ಲಾಂಚ್ ಗಳನ್ನು ಪೂರೈಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಐಡಬ್ಲ್ಯುಎಐಗೆ ಎರಡು ದೋಣಿಗಳ ಹಸ್ತಾಂತರದಿಂದ ಕೊಚ್ಚಿ ವಾಟರ್ ಮೆಟ್ರೋ ಯೋಜನೆಯ ವೆಚ್ಚದ ಮೇಲೆ ಹೊರೆ ಬೀಳುವುದಿಲ್ಲ ಎಂದು ಸಿಎಸ್ಎಲ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News