ಕೇಂದ್ರ ಸಚಿವ ಸುರೇಶ್ ಗೋಪಿಯಿಂದ ಆ್ಯಂಬುಲೆನ್ಸ್ ದುರ್ಬಳಕೆ ಆರೋಪ : ವಿಚಾರಣೆ ಪ್ರಾರಂಭಿಸಿದ ಪೊಲೀಸರು
ತ್ರಿಶೂರ್: ಈ ವರ್ಷದ ಎಪ್ರಿಲ್ ತಿಂಗಳಲ್ಲಿ ನಡೆದಿದ್ದ ತ್ರಿಶೂರ್ ಪೂರಂ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸಚಿವ ಸುರೇಶ್ ಗೋಪಿ ಆ್ಯಂಬುಲೆನ್ಸ್ ಒಂದನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪದ ಕುರಿತು ತ್ರಿಶೂರ್ ನಗರ ಪೊಲೀಸರು ಪ್ರಾಥಮಿಕ ವಿಚಾರಣೆ ಪ್ರಾರಂಭಿಸಿದ್ದಾರೆ ಎಂದು ಸೋಮವಾರ ವರದಿಯಾಗಿದೆ.
ಸ್ಥಳೀಯ ಸಿಪಿಐ ನಾಯಕ ದಾಖಲಿಸಿರುವ ದೂರನ್ನು ಆಧರಿಸಿ ಕೇಂದ್ರ ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ರಾಜ್ಯ ಸಚಿವ ಸುರೇಶ್ ಗೋಪಿ ವಿರುದ್ಧ ಪೊಲೀಸರು ವಿಚಾರಣೆ ಪ್ರಾರಂಭಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಲೋಕಸಭಾ ಚುನಾವಣೆಗೂ ಮುನ್ನ ನಡೆದಿದ್ದ ಈ ಘಟನೆಯ ಸಂಬಂಧ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಲು ಸೂಕ್ತ ಕಾರಣಗಳಿವೆಯೆ ಎಂಬುದನ್ನು ಪರಿಶೀಲಿಸಲು ಪೊಲೀಸರು ಪ್ರಾಥಮಿಕ ವಿಚಾರಣೆಯನ್ನು ಕೈಗೊಂಡಿದ್ದಾರೆ.
ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ಧ ದಾಖಲಾಗಿರುವ ದೂರನ್ನು ಪ್ರಾಥಮಿಕ ವಿಚಾರಣೆಗಾಗಿ ತ್ರಿಶೂರ್ ಸಹಾಯಕ ಪೊಲೀಸ್ ಆಯುಕ್ತರಿಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.