ಉತ್ತರಾಖಂಡ: ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಲಂಬ ರಂಧ್ರ ಕೊರೆಯಲು ಆರಂಭ
ಉತ್ತರಕಾಶಿ: ಉತ್ತರಾಖಂಡದ ನಿರ್ಮಾಣ ಹಂತದ ಸುರಂಗ ಮಾರ್ಗ ಕುಸಿದು ಕಳೆದ 7 ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ಸುರಂಗದ ಮೇಲಿನಿಂದ ಲಂಬ ರಂದ್ರ ಕೊರೆಯಲು ಶನಿವಾರ ಎಲ್ಲಾ ಸಿದ್ಧತೆ ಆರಂಭವಾಗಿದೆ.
ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರ ಸುರಂಗಕ್ಕೆ ಲಂಬ ರಂಧ್ರ ಕೊರೆಯುವ ಮೂಲಕ ಪರ್ಯಾಯ ದಾರಿ ರೂಪಿಸಲು ಗಡಿ ರಸ್ತೆ ಸಂಸ್ಥೆ (ಬಿಆರ್ಒ) ರವಿವಾರ ಅಪರಾಹ್ನ ಸಿದ್ಧವಾಗಿದ್ದು, ಇದರಿಂದ ಶುಕ್ರವಾರದಿಂದ ಸ್ಥಗಿತಗೊಂಡಿದ್ದ ರಕ್ಷಣಾ ಕಾರ್ಯಾಚರಣೆ ಮರು ಆರಂಭವಾಗಲಿದೆ.
‘‘ನಾವು ಸುರಂಗದ ಮೇಲಿನಿಂದ ಲಂಬ ಮಾರ್ಗ ಕೊರೆಯಲು ಪ್ರಯತ್ನಿಸುತ್ತಿದ್ದೇವೆ. ನಾವು ಶೀಘ್ರದಲ್ಲಿ ಮಾರ್ಗ ಕೊರೆಯುವ ಕಾರ್ಯವನ್ನು ಆರಂಭಿಸಲಿದ್ದು, ಸುರಂಗದ ಮೇಲೆ ಮಾರ್ಗ ಕೊರೆಯುವ ಸ್ಥಳವನ್ನು ಗುರುತಿಸಿದ್ದೇವೆ. ಈ ಮಾರ್ಗ 1,000ದಿಂದ 1,100 ಮೀಟರ್ ದೀರ್ಘವಿರಲಿದೆ. ಇದೇ ಸಂದರ್ಭ ಈ ಕಾರ್ಯಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂದು ನಾವು ಅಂದಾಜಿಸುತ್ತಿದ್ದೇವೆ. ನಮ್ಮ ಅಂದಾಜಿನ ಪ್ರಕಾರ ನಾಳೆ ಅಪರಾಹ್ನ ಮಾರ್ಗ ಸಿದ್ಧವಾಗಲಿದೆ’’ ಎಂದು ಬಿಆರ್ಒನ ಮೇಜರ್ ನಾಮನ್ ನರುಲಾ ತಿಳಿಸಿದ್ದಾರೆ.
ಅತ್ಯಧಿಕ ಕಾರ್ಯಕ್ಷಮತೆಯ ಕೊರೆಯುವ ಮೆಷಿನ್ ಅನ್ನು ಇಂದೋರ್ನಿಂದ ಶನಿವಾರ ಇಲ್ಲಿಗೆ ತರಲಾಗಿದೆ. ಈ ಯಂತ್ರವನ್ನು ಜೋಡಿಸಿದ ಬಳಿಕ ಕೊರೆಯುವಿಕೆಯನ್ನು ಆರಂಭಿಸಲಾಗುವುದು ಎಂದು ಸ್ಥಳದಲ್ಲಿದ್ದ ಅಧಿಕಾರಿ ತಿಳಿಸಿದ್ದಾರೆ.
ಉತ್ತರಕಾಶಿಯ ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಸಿಲ್ಕ್ಯಾರ ಸುರಂಗ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಸರ್ವ ಋತು ರಸ್ತೆ ಯೋಜನೆಯ ಭಾಗವಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (ಎನ್ಎಚ್ಐಡಿಸಿಎಲ್) ಅಡಿಯಲ್ಲಿ ನಿರ್ಮಿಸಲಾಗುತ್ತಿದೆ.
ಈ ಸುರಂಗ ರವಿವಾರ ಬೆಳಗ್ಗೆ 5.30ಕ್ಕೆ ಕುಸಿದಿದ್ದು, ಈಗ ಒಂದು ವಾರವಾಗುತ್ತಿದೆ. ರಕ್ಷಣಾ ಕಾರ್ಯಕರ್ತರು ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಲು ಯಂತ್ರದ ಮೂಲಕ ರಂಧ್ರ ಕೊರೆಯುತ್ತಿದ್ದರು. ಈ ಸಂದರ್ಭ ಬಿರುಕು ಬಿಡುವ ಧ್ವನಿ ಕೇಳಿ ಬಂದಿರುವುದರಿಂದ ಅವರು ಈ ಕಾರ್ಯವನ್ನು ಶನಿವಾರ ಅಪರಾಹ್ನ ಸ್ಥಗಿತಗೊಳಿಸಿದ್ದರು. ಆದರೆ, ಯಂತ್ರದಲ್ಲಿ ಯಾವುದೇ ದೋಷಗಳಿಲ್ಲ ಎಂದು ಎನ್ಎಚ್ಐಡಿಸಿಎಲ್ ನಿರ್ದೇಶಕ ಅಂಶು ಮನೀಶ್ ಖುಲ್ಕೊ ಅವರು ತಿಳಿಸಿದ್ದರು.