ಮಾಮಣ್ಣನ್ ಚಿತ್ರದ ನಟನೆಗಾಗಿ ವಡಿವೇಲುಗೆ ಅತ್ಯುತ್ತಮ ನಟ ಪ್ರಶಸ್ತಿ
ಚೆನ್ನೈ: ದಲಿತ ಸಮುದಾಯದ ಜನ ಪ್ರತಿನಿಧಿಯ ಕತೆಯನ್ನು ಹೇಳುವ ʼಮಾಮಣ್ಣನ್ʼ ಚಿತ್ರದಲ್ಲಿನ ನಟನೆಗಾಗಿ ತಮಿಳು ಖ್ಯಾತ ನಟ ವಡಿವೇಲು ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ.
21ನೇ ಚೆನ್ನೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಡಿಸೆಂಬರ್ 14 ರಿಂದ 21 ರವರೆಗೆ ಚೆನ್ನೈನ ವಿವಿಧ ಚಿತ್ರಮಂದಿರಗಳಲ್ಲಿ ನಡೆದಿದ್ದು, ಇಂಡೋ ಸಿನಿ ಅಪ್ರಿಸಿಯೇಷನ್ ಫೌಂಡೇಶನ್ 2003 ರಿಂದ ಈ ಉತ್ಸವವನ್ನು ಆಯೋಜಿಸುತ್ತಿದೆ.
ಈ ವರ್ಷದ ಚಲನಚಿತ್ರೋತ್ಸವದ ಸ್ಪರ್ಧೆಯಲ್ಲಿ ತಮಿಳು ವಿಭಾಗದಲ್ಲಿ ಅನೀತಿ, ಅಯೋಧ್ಯಾ, ಕರುಮೇಗಙಲ್ ಕಲೈಗಿಂಡ್ರನ, ಮಾಮನ್ನನ್, ಪೋರ್ ತೊಳಿಲ್, ರಾವಣ ಕೂಟ್ಟಂ, ಸಾಯವನಂ, ಸೆಂಬಿ, ಸ್ಟಾರ್ಟ್ ಕ್ಯಾಮೆರಾ ಆಕ್ಷನ್, ವಿಡುತಲೈ ಭಾಗಂ 1 ಸೇರಿದಂತೆ ಚಲನಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.
ಮಾಮಣ್ಣನ್ ಚಿತ್ರದಲ್ಲಿನ ನಟನೆಗಾಗಿ ವಡಿವೇಲು ಅವರಿಗೆ ಉತ್ತಮ ನಟ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ವೇದಿಕೆಯಲ್ಲಿ ಮಾತನಾಡಿದ ವಡಿವೇಲು ಅವರು, “ಅಳುವ ದೃಶ್ಯಗಳೆಲ್ಲಾ ಈಗ ವರ್ಕೌಟ್ ಆಗುವುದಿಲ್ಲ, ಆದರೂ ಮಾಮಣ್ಣನ್ ಚಿತ್ರ ನೋಡಿ ಸ್ವೀಕರಿಸಿದ್ದೀರಿ. ಅಳುವುದಕ್ಕೆ ನನಗೆ ಪ್ರಶಸ್ತಿ ಕೊಟ್ಟಿದ್ದೀರಿ. ಅದು ನನ್ನ ಜೀವನವೂ ಹೌದು. ಇದು ನನ್ನ ಜೀವನ ಚರಿತ್ರೆಯೇ ಹೊರತು ಕೇವಲ ಚಲನಚಿತ್ರ ಮಾತ್ರವಲ್ಲ. ಈ ಗೆಲುವು ಮಾರಿ ಸೆಲ್ವರಾಜ್‌ಗೆ ಸಲ್ಲಬೇಕು. ನಾವು ಎದುರಿಸಿದ ಎಲ್ಲಾ ಕಷ್ಟಗಳನ್ನು ಅವರು ಸಿನೆಮಾಗಳಲ್ಲಿ ಹೇಳುತ್ತಿದ್ದಾರೆ. ನಾನು ಮಾಮಣ್ಣನ್ ಚಿತ್ರ ಮಾಡಿದ ನಂತರ ನನಗೆ ಬರುತ್ತಿರುವ ಎಲ್ಲಾ ಕಥೆಗಳು ದುಃಖದ ಕಥೆಗಳೇ. ಹಾಗಾಗಿ 5 ವರ್ಷಗಳ ನಂತರ ಈ ರೀತಿಯ ಕಥೆಯನ್ನು ಮಾಡಬೇಕೆಂದು ನಿರ್ಧರಿಸಿದೆ. ಮಾಮಣ್ಣನ್ ಚಿತ್ರದಲ್ಲೂ ನಿರ್ದೇಶಕರು ತಮ್ಮ ನೋವನ್ನು ಹೇಳಿಕೊಂಡಿದ್ದರು. ಬಡವರ ನೋವಿನ ಬಗ್ಗೆಯೂ ಮಾತನಾಡಿದರು. ಆ ಕಥೆಗೆ ಪ್ರಶಸ್ತಿ ಬಂದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ವಡಿವೇಲು ಹೇಳಿದರು.
ದಲಿತ ಒಳನೋಟಗಳಿರುವ ಚಿತ್ರಗಳನ್ನು ನಿರ್ದೇಶಿಸಿ ಸಿನಿಪ್ರೇಮಿಗಳ ಗಮನ ಸೆಳೆದಿರುವ ಮಾರಿ ಸೆಲ್ವರಾಜ್ ಮಾಮಣ್ಣನ್ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ದಲಿತ ಸಮುದಾಯದ ಜನ ಪ್ರತಿನಿಧಿಯಾಗಿ ವಡಿವೇಲು ಅವರು ಈ ಚಿತ್ರದಲ್ಲಿ ನಟಿಸಿದ್ದು, ಫಹದ್ ಫಾಸಿಲ್ ಖಳ ನಾಯಕನ ಪಾತ್ರ ನಿರ್ವಹಿಸಿದ್ದಾರೆ. ವಡಿವೇಲು ಮಗನ ಪಾತ್ರದಲ್ಲಿ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ನಟಿಸಿದ್ದಾರೆ. ಎ.ಆರ್. ರಹಮಾನ್ ಸಂಗೀತ ಇರುವ ಈ ಚಿತ್ರ ಬಿಡುಗಡೆಯಾಗುವ ಮುನ್ನ ಇದ್ದ ನಿರೀಕ್ಷೆಯನ್ನು ಹುಸಿ ಮಾಡದೆ ವಿಮರ್ಶಕರಿಂದಲೂ ಮೆಚ್ಚುಗೆ ಪಡೆದು ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡಾ ಚೆನ್ನಾಗಿ ಮಾಡಿತ್ತು.