ವಿವಿಪ್ಯಾಟ್ ಸಮಗ್ರ ಎಣಿಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್
ಹೊಸದಿಲ್ಲಿ: ವೋಟರ್ ವೆರಿಫೈಯ್ಡ್ ಪೇಪರ್ ಆಡಿಟ್ ಟ್ರಯಲ್ (VVPAT) ಕಾಗದ ಚೀಟಿಗಳ ಸಮಗ್ರ ಎಣಿಕೆಗೆ ಆದೇಶಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅರುಣ್ ಕುಮಾರ್ ಅಗರ್ವಾಲ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಸಂಬಂಧ ಭಾರತದ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಲೋಕಸಭಾ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಯಾದೃಚ್ಛಿಕವಾಗಿ ಆಯ್ಕೆ ಮಾಡಿದ 5 ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಗಳನ್ನು ಮಾತ್ರ ವಿವಿಪ್ಯಾಟ್ ಚೀಟಿಗಳ ಜತೆ ತಾಳೆ ಮಾಡಲಾಗುತ್ತದೆ.
ಇಂತಹದ್ದೇ ಮನವಿ ಮಾಡಿದ ಅರ್ಜಿಗಳು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇದ್ದು, ಅವುಗಳ ಜತೆ ಈ ಅರ್ಜಿಯನ್ನೂ ಪರಿಗಣಿಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ನೇತೃತ್ವದ ನ್ಯಾಯಪೀಠ ಈ ನೋಟಿಸ್ ಜಾರಿಗೊಳಿಸಿದೆ.
ಏಕಕಾಲದಲ್ಲಿ ವಿವಿಪ್ಯಾಟ್ ದೃಢೀಕರಣವನ್ನೂ ನಡೆಸಿದಲ್ಲಿ ಮತ್ತು ಹೆಚ್ಚು ಅಧಿಕಾರಿಗಳನ್ನು ಎಣಿಕೆಗೆ ನಿಯೋಜಿಸಿದಲ್ಲಿ, ಸಂಪೂರ್ಣವಾಗಿ ವಿವಿಪಿಎಟಿ ದೃಢೀಕರಣವನ್ನು 5-6 ಗಂಟೆಗಳಲ್ಲಿ ಪೂರ್ಣಗೊಳಿಸಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.
ಚುನಾವಣಾ ಆಯೋಗ 5000 ಕೋಟಿ ರುಪಾಯಿ ವೆಚ್ಚದಲ್ಲಿ ಸುಮಾರು 24 ಲಕ್ಷ ವಿವಿಪ್ಯಾಟ್ ಗಳನ್ನು ಖರೀದಿಸಿದೆ. ಪ್ರಸ್ತುತ ಕೇವಲ 20 ಸಾವಿರ ವಿವಿಪಿಎಟಿ ಚೀಟಿಗಳನ್ನು ಮಾತ್ರ ದೃಢೀಕರಿಸಲಾಗುತ್ತಿದೆ. ವಿವಿಪ್ಯಾಟ್ ಮತ್ತು ಇವಿಎಂಗಳ ನಡುವೆ ದೊಡ್ಡ ಪ್ರಮಾಣದ ವ್ಯತ್ಯಯಗಳು ಬರುತ್ತಿರುವ ಹಿನ್ನೆಲೆಯಲ್ಲಿ ತಜ್ಞರು ಪ್ರಶ್ನೆಗಳನ್ನು ಎತ್ತಿದ್ದಾರೆ. ಆದ್ದರಿಂದ ಮತದಾರರಿಗೆ ವಿವಿಪ್ಯಾಟ್ ಚೀಟಿಗಳನ್ನು ಮತಪೆಟ್ಟಿಗೆಯಲ್ಲಿ ಹಾಕಲು ಅವಕಾಶ ಇರಬೇಕು ಎನ್ನುವ ವಾದ ಮಂಡಿಸಿದ್ದಾರೆ.