ವಯನಾಡ್ | 5 ಕೋಟಿ ರೂ. ನೆರವು ಘೋಷಿಸಿದ ತಮಿಳುನಾಡು ಸಿಎಂ
ಚೆನ್ನೈ : ವಯಾನಾಡ್‌ನಲ್ಲಿ ಭೂಕುಸಿತ ಸಂಭವಿಸಿ ಕನಿಷ್ಠ 93 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ಕೇರಳಕ್ಕೆ 5 ಕೋಟಿ ರೂ. ನೆರವು ಘೋಷಿಸಿದ್ದಾರೆ.
ಸ್ಟಾಲಿನ್ ತನ್ನ ‘ಎಕ್ಸ್’ ಖಾತೆಯಲ್ಲಿ, ‘‘ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದ ಕೇರಳದ ಜನರಿಗೆ ತಮಿಳುನಾಡು ಸರಕಾರ ಬೆಂಬಲವಾಗಿ ನಿಲ್ಲುತ್ತದೆ. ನಾವು ಪರಿಹಾರ ಹಾಗೂ ಪುನರ್ವಸತಿಗೆ 5 ಕೋಟಿ ರೂ. ನೀಡುತ್ತಿದ್ದೇವೆ. ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವು ನೀಡಲು ಐಎಎಸ್ ಅಧಿಕಾರಿಗಳ ನೇತೃತ್ವದ ಎರಡು ತಂಡಗಳನ್ನು ನಿಯೋಜಿಸಲಿದ್ದೇವೆ. ವೈದ್ಯರು ಹಾಗೂ ನರ್ಸ್ಗಳನ್ನು ಒಳಗೊಂಡ ವೈದ್ಯಕೀಯ ತಂಡ, ಅಗ್ನಿ ಶಾಮಕದ ದಳ, ರಕ್ಷಣಾ ಸೇವೆಗಳ ತಂಡವನ್ನು ಕೂಡ ನೆರವು ನೀಡಲು ಕಳುಹಿಸಿ ಕೊಡಲಾಗಿದೆ’’ ಎಂದಿದ್ದಾರೆ.
‘‘ನಾನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಹಾಗೂ ಬೆಂಬಲ ನಿಲ್ಲುವುದಾಗಿ ತಿಳಿಸಿದ್ದೇನೆ. ಈ ಬಿಕ್ಕಟ್ಟನ್ನು ನಾವು ಸಂಘಟಿತವಾಗಿ ನಿಭಾಯಿಸಬೇಕು’’ ಎಂದು ಅವರು ಹೇಳಿದ್ದಾರೆ.