ಭಾರತದ ಶತ ಕೋಟ್ಯಧಿಪತಿಗಳ ಸಂಪತ್ತು ವರ್ಷದಲ್ಲಿ ಶೇ. 42 ರಷ್ಟು ಹೆಚ್ಚಳ

Update: 2024-12-09 03:17 GMT

PC: x.com/Reuters

ಮುಂಬೈ: ಭಾರತದ ಶತ ಕೋಟ್ಯಧಿಪತಿಗಳ ಸಂಪತ್ತು ಕಳೆದ ಒಂದು ವರ್ಷದ ಅವಧಿಯಲ್ಲಿ ಶೇಕಡ 42ರಷ್ಟು ಏರಿಕೆ ಕಂಡು 905 ಶತಕೋಟಿ ಡಾಲರ್ ತಲುಪಿದೆ. ಅಮೆರಿಕ ಮತ್ತು ಚೀನಾವನ್ನು ಹೊರತುಪಡಿಸಿದರೆ ಭಾರತದ ಶತ ಕೋಟ್ಯಧಿಪತಿಗಳ ಸಂಪತ್ತು ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ ಎಂದು ಸ್ವಿಸ್ ಬ್ಯಾಂಕ್ ಯುಬಿಎಸ್ ವರದಿ ಹೇಳಿದೆ. ಇದಕ್ಕೆ ತದ್ವಿರುದ್ಧವಾಗಿ ಚೀನಾದಲ್ಲಿ ಕ್ಸಿ ಜಿಂಗ್ ಪಿಂಗ್ ಆಡಳಿತ ವಹಿವಾಟು ಕ್ಷೇತ್ರಕ್ಕೆ ಇಳಿದ ಬಳಿಕ ಶತಕೋಟ್ಯಧಿಪತಿಗಳ ಸಂಪತ್ತು ಸವಕಳಿ ಕಂಡಿದೆ.

ಕಳೆದ ಹತ್ತು ವರ್ಷಗಳಲ್ಲಿ ಭಾರತದ ಶತ ಕೋಟ್ಯಧಿಪತಿಗಳ ಸಂಖ್ಯೆ ದ್ವಿಗುಣಗೊಂಡು 2024ರ ಏಪ್ರಿಲ್ ವೇಳೆಗೆ 185ಕ್ಕೇರಿದೆ. ಇವರ ಒಟ್ಟು ಸಂಪತ್ತು ಮೂರು ಪಟ್ಟು (ಶೇಕಡ 263) ಏರಿಕೆ ಕಂಡಿದೆ. ಕುಟುಂಬ ನೇತೃತ್ವದ ವ್ಯವಹಾರಗಳು ಭಾರತದ ಸಂಪತ್ತು ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಅಗ್ರಗಣ್ಯ ಜಾಗತಿಕ ಆರ್ಥಿಕತೆ ವರ್ಗಕ್ಕೆ ಲಗ್ಗೆ ಇಟ್ಟಿರುವ ಭಾರತ, ಹಲವು ತಲೆಮಾರುಗಳಿಂದ ಗರಿಷ್ಠ ಸಂಖ್ಯೆಯ ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕುಟುಂಬ ವಹಿವಾಟುಗಳನ್ನು ಹೊಂದಿದೆ ಎಂದು ವರದಿ ವಿವರಿಸಿದೆ. ಈ ಅಂಶ ಕಳೆದ ಒಂದು ದಶಕದಲ್ಲಿ ಮಹತ್ವದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದೆ. ಕುಟುಂಬ ವಹಿವಾಟುಗಳು ಪ್ರಮುಖವಾಗಿ ಫಾರ್ಮಸ್ಯೂಟಿಕಲ್, ಶಿಕ್ಷಣ ತಂತ್ರಜ್ಞಾನ, ಹಣಕಾಸು ತಂತ್ರಜ್ಞಾನ ಹಾಗೂ ಆಹಾರ ವಿತರಣಾ ವಲಯಗಳನ್ನು ಒಳಗೊಂಡಿವೆ.

ಜಾಗತಿಕವಾಗಿ ಶತಕೋಟ್ಯಧಿಪತಿಗಳ ಸಂಪತ್ತು ವೃದ್ಧಿ ಪ್ರಮಾಣ ನಿಧಾನಗತಿಯಲ್ಲಿದ್ದರೆ, ಭಾರತ ಮಾತ್ರ ಇದಕ್ಕೆ ಹೊರತಾಗಿದೆ. ಇದು ದೇಶದ ಉದ್ಯಮಶೀಲರ ಕ್ರಿಯಾಶೀಲತೆ ಮತ್ತು ದೇಶದ ಅನುಕೂಲಕರ ಆರ್ಥಿಕ ವಾತಾವರಣದಿಂದ ಸಾಧ್ಯವಾಗಿದೆ ಎಂದು ವರದಿ ವಿವರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News