ನಾವು ‘‘ಲಾಪತಾ ಜಂಟಲ್ಮನ್’’ಗಳಲ್ಲ ; ಎಲ್ಲಿಗೂ ಹೋಗಿಲ್ಲ, ಇಲ್ಲೇ ಇದ್ದೇವೆ : ಚುನಾವಣಾ ಆಯುಕ್ತ ರಾಜೀವ್ ಕುಮಾರ್

Update: 2024-06-03 16:27 GMT

 ರಾಜೀವ್‌ ಕುಮಾರ್‌ | PC: PTI

ಹೊಸದಿಲ್ಲಿ: ಚುನಾವಣಾ ಆಯೋಗವನ್ನು ‘‘ಲಾಪತಾ ಜಂಟಲ್ಮನ್’’ (ನಾಪತ್ತೆಯಾಗಿರುವ ಮಹನೀಯರು) ಎಂಬುದಾಗಿ ಬಣ್ಣಿಸುವ ವ್ಯಂಗ್ಯ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದಕ್ಕೆ ಸೋಮವಾರ ಪ್ರತಿಕ್ರಿಯಿಸಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ನಾನು ಮತ್ತು ಸಹ ಕಮಿಶನರ್ಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖ್ಬೀರ್ ಸಿಂಗ್ ಸಂದು ‘‘ಎಲ್ಲಿಗೂ ಹೋಗಿಲ್ಲ, ಇಲ್ಲೇ ಇದ್ದೇವೆ’’ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಪ್ರಚಾರದ ಅವಧಿಯಲ್ಲಿ ಉನ್ನತ ನಾಯಕರು ನೀತಿ ಸಂಹಿತೆ ಉಲ್ಲಂಘನೆ ಮಾಡುವಾಗ ಆಯೋಗವು ನಾಪತ್ತೆಯಾಗಿತ್ತು ಎಂಬುದಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ಕಿಡಿಗಾರಿದ್ದರು. ‘ಲಾಪತಾ ಲೇಡೀಸ್’ ಎಂಬ ಇತ್ತೀಚಿನ ಚಿತ್ರವನ್ನು ಆಧರಿಸಿ ವ್ಯಂಗ್ಯ ಸಂದೇಶಗಳನ್ನು ಸೃಷ್ಟಿಸಲಾಗಿದೆ.

ಮತ ಎಣಿಕೆಯ ಮುನ್ನಾ ದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜೀವ್ ಕುಮಾರ್, ಇನ್ನು ‘ಲಾಪತಾ ಜಂಟಲ್ಮನ್’ ಮರಳಿದ್ದಾರೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ ಗಳು ಬರಬಹುದು ಎಂದು ಲಘು ಧಾಟಿಯಲ್ಲಿ ಹೇಳಿದರು.

‘‘ನಾವು ಯಾವತ್ತೂ ಹೋಗಿಲ್ಲ, ನಾವು ಇಲ್ಲೇ ಇದ್ದೆವು. ನಾವು ನಮ್ಮ ಪತ್ರಿಕಾ ಹೇಳಿಕೆಗಳ ಮೂಲಕ ನಿಮ್ಮೊಂದಿಗೆ ಸಂವಹನ ನಡೆಸಲು ಬಯಸಿದ್ದೆವು. ಒಟ್ಟು ಸುಮಾರು 100 ಪತ್ರಿಕಾ ಹೇಳಿಕೆಗಳನ್ನು ನಾವು ಹೊರಡಿಸಿರುವುದು ಇದೇ ಮೊದಲು’’ ಎಂದರು.

ಚುನಾವಣಾ ಆಯೋಗವು ನೇಪಥ್ಯದಿಂದ ಸಂವಹನ ನಡೆಸುತ್ತಿತ್ತು ಹಾಗೂ ಸೋಮವಾರ ಪತ್ರಿಕಾಗೋಷ್ಠಿ ನಡೆಸಲು ಅವರು ನಿರ್ಧರಿಸಿದ್ದಾರೆ ಎಂದು ಮುಖ್ಯ ಚನಾವಣಾ ಆಯುಕ್ತರು ಹೇಳಿದರು.

ಮತದಾರರ ಪಟ್ಟಿಯ ಲೋಪದೋಷಗಳು, ಇಲೆಕ್ಟ್ರಾನಿಕ್ ಮತಯಂತ್ರಗಳ ಪರಿಣಾಮಕಾರಿತ್ವ ಮತ್ತು ಮತದಾನದ ಅಂಕಿ ಅಂಶಗಳಲ್ಲಿ ಹಸ್ತಕ್ಷೇಪ ನಡೆದಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು ಎಂದು ಅವರು ತಿಳಿಸಿದರು. ಆರೋಪಗಳನ್ನು ಮಾಡುವ ವ್ಯಕ್ತಿಯು ನ್ಯಾಯಾಲಯಕ್ಕೆ ಹೋದರೂ, ಅದಕ್ಕೆ ಸಾಕ್ಷಿ ಯಾರೂ ಇರಲಿಲ್ಲ ಎಂದರು.

‘‘ಅಭ್ಯರ್ಥಿಗಳು ಮತ್ತು 17ಸಿ ಫಾರ್ಮನ್ನು ಪಡೆದಿರುವವರಿಂದ ಯಾವುದೇ ದೂರು ಇರಲಿಲ್ಲ. ನನ್ನ ಮನಸ್ಸಿನಲ್ಲಿ ಒಂದು ವಿಷಯವಿದೆ. ಆದರೆ, ಅದನ್ನು ನಾನು ಹೇಳುವುದಿಲ್ಲ’’ ಎಂದು ಚುನಾವಣಾ ಆಯೋಗದ ವಿರುದ್ಧದ ವಿವಿಧ ಆರೋಪಗಳ ಬಗ್ಗೆ ಮಾತನಾಡಿದ ಅವರು ಹೇಳಿದರು.

*ತೆರೆಮರೆಯ ಹೀರೋಗಳು

ಒಂದು ಕೋಟಿಗೂ ಅಧಿಕ ಚುನಾವಣಾ ಸಿಬ್ಬಂದಿಯ ಬಗ್ಗೆ ಮತನಾಡಿದ ಮುಖ್ಯ ಚುನಾವಣಾ ಆಯುಕ್ತರು, ಅವರು ಈ ಚುನಾವಣೆಯ ತೆರೆಮರೆಯ ಹೀರೋಗಳು ಎಂದರು.

ಜನರು ಹೂವುಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಯಾರೂ ತೋಟದ ಮಾಲಿಯನ್ನು ನೆನಪಿಸುವುದಿಲ್ಲ ಎಂದು ಕವಿತೆಯೊಂದನ್ನು ಉದ್ಧರಿಸುತ್ತಾ ಅವರು ಹೇಳಿದರು.

‘‘ಸೋಲು-ಗೆಲುವು ಪ್ರಜಾಪ್ರಭುತ್ವದ ಭಾಗವಾಗಿದೆ. ಈ ಬೇಸಿಗೆಯ ಶಾಖದಲ್ಲಿ ಲೋಪದೋಷಗಳಿಲ್ಲದ ಚುನಾವಣೆ ನಡೆಸಿಕೊಟ್ಟ ಚುನಾವಣಾ ಮತ್ತು ಭದ್ರತಾ ಸಿಬ್ಬಂದಿಯ ಬಗ್ಗೆ ಯಾರೂ ಮಾತನಾಡುವುದಿಲ್ಲ’’ ಎಂದು ಅವರು ನುಡಿದರು.

► ಇದು ಈ ಚುನಾವಣೆಯ ವಿಶೇಷ

► 2024ರ ಲೋಕಸಭಾ ಚುನಾವಣೆಗಳನ್ನು ನಿಭಾಯಿಸಲು ಸುಮಾರು 4 ಲಕ್ಷ ವಾಹನಗಳು ಮತ್ತು 135 ವಿಶೇಷ ರೈಲುಗಳನ್ನು ಬಳಸಲಾಗಿದೆ ಮತ್ತು 1,692 ವಿಮಾನ ಹಾರಾಟಗಳನ್ನು ಕೈಗೊಳ್ಳಲಾಗಿದೆ.

► ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ 495 ದೂರುಗಳು ಬಂದಿದ್ದು, ಆ ಪೈಕಿ 90 ಶೇಕಡಕ್ಕೂ ಅಧಿಕ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

► ಚುನಾವಣಾ ಆಯೋಗವು ಉನ್ನತ ನಾಯಕರಿಗೆ ನೋಟಿಸ್ ಗಳನ್ನು ನೀಡಿದೆ, ಹಲವರ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಮತ್ತು ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯವನ್ನು ಕಾಪಾಡಲು ಉನ್ನತ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.

► ಡೀಪ್ ಫೇಕ್ (ನಕಲಿ ವೀಡಿಯೊಗಳು ಮತ್ತು ಮಾತುಗಳು) ಮತ್ತು ಕೃತಕ ಬುದ್ಧಿಮತ್ತೆ ಮೂಲಕ ಸೃಷ್ಟಿಸಲಾಗಿರುವ ನಕಲಿ ಸಂದೇಶಗಳನ್ನು ಹೆಚ್ಚು ಕಡಿಮೆ ನಿಭಾಯಿಸಿದ್ದೇವೆ.

► ಇಡೀ ಮತ ಎಣಿಕೆ ಪ್ರಕ್ರಿಯೆ ಬಿಗಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News