ಎರಡು ಅವಧಿಯಲ್ಲಿ ಆಗದ ವಿಕಾಸ ಮೂರನೇ ಅವಧಿಯಲ್ಲಿ ಆಗುತ್ತಾ ?

Update: 2024-02-27 06:41 GMT
Editor : Ismail | Byline : ಆರ್. ಜೀವಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ, ಮುಂದಿನ ಲೋಕಸಭಾ ಚುನಾವಣೆ ಮಹಾಭಾರತ ಯುದ್ದವಂತೆ. ಒಂದೆಡೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮೋದಿ ನೇತೃತ್ವದ ಎನ್​ ಡಿ ಎ ಇದೆಯಂತೆ, ಇನ್ನೊಂದೆಡೆ ಕುಟುಂಬ ರಾಜಕಾರಣದಲ್ಲಿ ತೊಡಗಿರುವ ಪಕ್ಷಗಳ ಇಂಡಿಯಾ ಮೈತ್ರಿಕೂಟವಿದೆಯಂತೆ. ಕಳೆದ 10 ವರ್ಷಗಳು ಅಭಿವೃದ್ಧಿಯ ಕಾಲ ಎಂದು ಬಲು ನಿರಾಯಾಸವಾಗಿ ಹೇಳಿಬಿಟ್ಟಿದ್ಧಾರೆ ಅಮಿತ್ ಶಾ.

ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರವೇ ಇಲ್ಲ ಎಂತಲೂ​, ಬಿಜೆಪಿಯನ್ನು ಮುನ್ನಡೆಸುತ್ತಿರುವ ಮೋದಿ ಕಳಂಕರಹಿತರೆಂದೂ ಅಮಿತ್ ಶಾ ಬಡಾಯಿ ಕೊಚ್ಚಿ​ಕೊಂಡಿದ್ದಾರೆ. ​ಅದೇ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಧಾನಿ ಮೋದಿಯವರು ನಾನು ರಾಜನೀತಿಗಾಗಿ ಅಲ್ಲ, ರಾಷ್ಟ್ರ ನೀತಿಗಾಗಿ ಕೆಲಸ ಮಾಡುತ್ತಿದ್ದೇನೆ. ವಿಕಸಿತ ಭಾರತಕ್ಕಾಗಿ ಬಿಜೆಪಿ ಮೂರನೇ ಬಾರಿ ಅಧಿಕಾರಕ್ಕೆ ಬರುವುದು ಅನಿವಾರ್ಯ ಎಂದಿದ್ದಾರೆ.

" ನಾನು ರಾಜಕೀಯ ಲಾಭವನ್ನು ನೋಡುತ್ತಿಲ್ಲ, ನಾನು ದೇಶದ ಲಾಭ ನೋಡುತ್ತಿದ್ದೇನೆ. ಭಾರತೀಯರ ಕನಸುಗಳು ನನ್ನ ಬದ್ಧತೆಗಳಾಗಿವೆ. 10 ವರ್ಷಗಳ ನಿಷ್ಕಳಂಕ ಆಡಳಿತ ನೀಡಿದ್ದೇವೆ. 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ್ದೇವೆ. ಇದೇನು ಸಣ್ಣ ಸಾಧನೆಯಲ್ಲ " ಎಂದಿದ್ದಾರೆ ಮೋದಿ.

​ಆದರೆ ಪ್ರಧಾನಿ ಮೋದಿ ಹಾಗು ಅಮಿತ್ ಶಾ ಹೇಳಿದ್ದಕ್ಕೂ ವಾಸ್ತವಕ್ಕೂ ಏನಾದರೂ ಸಂಬಂಧವಿದೆಯೇ ? ಬಿಜೆಪಿ ನೇತೃತ್ವದ ಎನ್ ಡಿ ಎ ಹತ್ತು ವರ್ಷಗಳ ಕಾಲ ಸ್ವಚ್ಛ, ಪಾರದರ್ಶಕ ಹಾಗು ಅಭಿವೃದ್ಧಿ ಸಾಧಿಸುವ ಆಡಳಿತ ನೀಡಿದೆಯೇ ? ಬಿಜೆಪಿಯಲ್ಲಿ ಅಮಿತ್ ಶಾ ಹೇಳಿದ ಹಾಗೆ ಕುಟುಂಬ ರಾಜಕಾರಣವೇ ಇಲ್ವಾ ? ಪ್ರತಿಪಕ್ಷಗಳನ್ನು ಯಾವ್ಯಾವ ವಿಷಯವಾಗಿ ಶಾ ದೂರಿದ್ದಾರೆಯೊ​, ಆ ವಿಷಯಗಳಲ್ಲಿಯೇ ಬಿಜೆಪಿ​ ಕಳೆದೊಂದು ದಶಕದಲ್ಲಿ ಮಾಡಿರುವುದೇನು ಎಂದು ನೋಡಿಕೊಂಡರೆ, ಬಿಜೆಪಿಯ, ಮೋದಿ ಸರ್ಕಾರದ ಬಣ್ಣ ಬಟಾ ಬಯಲಾಗುತ್ತದೆ.

ಆದರೂ ಸುಳ್ಳುಗಳನ್ನು ಸ್ವಲ್ಪವೂ ನಾಲಿಗೆ ತಡವರಿಸದಂತೆ ಹೇಳಬಲ್ಲ ಕಲೆಯಲ್ಲಿ ಪಳಗಿರುವ, ಸುಳ್ಳು ಹೇಳುವುದಕ್ಕೆ ಯಾವತ್ತೂ ಕಿಂಚಿತ್ ಲಜ್ಜೆಯನ್ನೂ ತೋರಿಸದ ಬಿಜೆಪಿಯ ಚಾಳಿಯಂತೆ​, ಅಮಿತ್ ಶಾ ಮತ್ತೊಮ್ಮೆ ಅದದೇ ಸುಳ್ಳುಗಳನ್ನು ಹೇಳುವ ಭಂಡತನ ತೋರಿಸಿದ್ದಾರೆ. ಅಭಿವೃದ್ಧಿಯ ಯುಗ ಎಂದು ಬಿಜೆಪಿ ಆಡಳಿತಾವಧಿಯ ಬಗ್ಗೆ ಹೇಳುವ ಅಮಿತ್ ಶಾಗೆ ಅವರದೇ ಸರ್ಕಾರದ​ ಘೋರ ವೈಫಲ್ಯಗಳು ಕಾಣಿಸುವುದಿಲ್ಲವೆ?

ಕಾಂಗ್ರೆಸ್ ಮಹಾ ಭ್ರಷ್ಟ ಎನ್ನುತ್ತಿರುವ ಅಮಿತ್ ಶಾಗೆ ಬಿಜೆಪಿಯ ​ಮಹಾ ಭ್ರಷ್ಟತೆ ಬಗ್ಗೆ ಜಗತ್ತೇ ಆಡಿಕೊಳ್ಳುತ್ತಿರುವ ಬಗ್ಗೆ ಸ್ವಲ್ಪವೂ ತಳಮಳಗಳಿಲ್ಲವೆ? ಕಾಂಗ್ರೆಸ್ನಲ್ಲಿ ಕುಟುಂಬ ರಾಜಕಾರಣವಿದೆ, ಹಾಗೆಯೇ ವಿಪಕ್ಷಗಳಲ್ಲಿ ಕುಟುಂಬ ರಾಜಕಾರಣವಿದೆ ಎನ್ನುವ ಅಮಿತ್ ಶಾ,

ರಾಷ್ಟ್ರ ಮತ್ತು ರಾಜ್ಯ ಮಟ್ಟಗಳಲ್ಲಿನ ಬಿಜೆಪಿಯ ಕುಟುಂಬ ರಾಜಕಾರಣದ ಬಗ್ಗೆ ಏಕೆ ಜಾಣಗುರುಡುತನ ತೋರಿಸುತ್ತಾರೆ?

​ಬಿಜೆಪಿ ದೇಶದ ಆಶಾಕಿರಣ ಎಂದು ಹೇಳುವ ಅಮಿತ್ ಶಾ , ಅದರ ಬೆನ್ನಿಗೆ ಗಟ್ಟಿಯಾಗಿ ನಿಂತ ಯುವಕರು, ಮಹಿಳೆಯರು, ರೈತರು, ಕಾರ್ಮಿಕರು ಈಗ ಅದೆಷ್ಟು ಹತಾಶರಾಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುತ್ತಿಲ್ಲ ಯಾಕೆ ? ದೇಶ ಮೊದಲು ಎಂದು ಯೋಚಿಸುವ ಪಕ್ಷ ಬಿಜೆಪಿ ಎಂದು ಹಸೀ ಹಸೀ ಸುಳ್ಳು ಹೇಳಬಲ್ಲ ಅಮಿತ್ ಶಾಗೆ, ರಾಷ್ಟ್ರೀಯ ಸುರಕ್ಷತೆಯಲ್ಲಿನ ಅವರ ಸರ್ಕಾರದ ಸತತ ವಿಫಲತೆ ಬಗ್ಗೆ ಕೊಂಚವೂ ಪಶ್ಚಾತ್ತಾಪ, ಪರಿತಾಪ ಆಗುತ್ತಿಲ್ಲವೆ?

ನ್ಯಾಯ ಕೇಳಲು ನಿಲ್ಲುವ ಯಾರನ್ನೇ ಆದರೂ ಜೈಲಿಗೆ ಅಟ್ಟಬಲ್ಲ, ಅನ್ಯಾಯವನ್ನೇ ಮೆರೆಯುತ್ತ ಬಂದಿರುವ ಸರ್ಕಾರ ಅವರದೆಂಬುದು ಅಮಿತ್ ಶಾಗೆ ಗೊತ್ತಿರಲೇಬೇಕಲ್ಲವೆ? ಕಂಗೆಟ್ಟ ರೈತರು ಮೋದಿ ಸರ್ಕಾರವೇ ಕೊಟ್ಟಿದ್ದ ಭರವಸೆ ಈಡೇರಿಸುವಂತೆ ಕೇಳಿ ದೆಹಲಿಗೆ ಬರುತ್ತಿದ್ದರೆ ಸಿಮೆಂಟಿನ ಗೋಡೆ ನಿಲ್ಲಿಸಿ, ರಸ್ತೆಯಲ್ಲಿ ಮೊಳೆ ನೆಟ್ಟು, ಪೋಲಿಸರನ್ನು ಬಿಟ್ಟು ರೈತರ ದಮನಕ್ಕೆ ನಿಂತಿರುವಾಗಲೇ ಅದೆಲ್ಲವನ್ನೂ ಮರೆಮಾ​ಚಿ ನಮ್ಮಂತ ಸರಕಾರ ಯಾವುದೂ ಇಲ್ಲ ಎಂದು ಶಾ ಥರದ ಬಿಜೆಪಿ ನಾಯಕರು ​ಅದೇಗೆ ಹೇಳ್ತಾರೆ ?

ಹತಾಶವಾಗಿರುವುದು ವಿಪಕ್ಷಗಳೊ ಅಥವಾ ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿ ಎಂಬುದನ್ನು ಬರೀ ಮಾತಲ್ಲಿ ಮಾತ್ರ ಮಾಡುತ್ತ, ಸುಳ್ಳುಗಳ ಮೇಲೆಯೇ ನಿಂತಿರುವ ಬಿಜೆಪಿಯೊ? ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಅಮಿತ್ ಶಾ ಏನೇನು ಹೇಳಿದ್ದಾರೆ ಮತ್ತು ಅದೆಷ್ಟು ಬಣ್ಣಗೇಡು ಎಂಬುದನ್ನು ಒಂದೊಂದಾಗಿ ನೋಡುತ್ತ ಹೋಗೋಣ.

ಅಭಿವೃದ್ಧಿ ಆಧರಿತ ಮತ್ತು ಕಳಂಕರಹಿತ ನಾಯಕನ ನೇತೃತ್ವದ ಮೈತ್ರಿ ಹಾಗೂ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಲ್ಲಿ ಮುಳುಗಿರುವ ಪಕ್ಷಗಳ ಮೈತ್ರಿ ​- ಇವೆರಡರ ನಡುವೆ ಜನರು ಆಯ್ಕೆ ಮಾಡಬೇಕಿದೆ ಎಂದಿದ್ದಾರೆ ಶಾ. ಆದರೆ ನಿಜವಾಗಿಯೂ ಹೀಗೆ ಗೆರೆ ಕೊರೆದಂತೆ ಹೇಳಲು ಸಾಧ್ಯವಾಗುವ ಮಟ್ಟಿಗೆ ಬಿಜೆಪಿ ಕಳಂಕ ರಹಿತವೆ?

ಮೋದಿ ಅಥವಾ ಮೋದಿ ಸರ್ಕಾರ ಮೆತ್ತಿಸಿಕೊಂಡಿರುವುದಾಗಿ ಹೇಳಲಾಗುವ ಕಳಂಕಗಳು ಮತ್ತು ಕೊಳಕುಗಳ ಬಗ್ಗೆ ಹೇಳಲು ಏನೂ ಇಲ್ಲವೆ?

ಅಭಿವೃದ್ಧಿಯನ್ನೇ ಮಾಡುತ್ತ ಬಂದಿದೆಯೆ ಬಿಜೆಪಿ? ಭ್ರಷ್ಟತೆ ಎಂಬುದು ಅದಕ್ಕೆ ಗೊತ್ತೇ ಇಲ್ಲವೆ? ಯಾರ ಕಿವಿಯ ಮೇಲೆ ಹೂವಿಡಲು ನೋಡುತ್ತಿದ್ಧಾರೆ ಅಮಿತ್ ಶಾ? ಶಾ ಹೇಳಿರುವ ಅಭಿವೃದ್ಧಿ, ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ಈ ಮೂರು ವಿಚಾರಗಳಲ್ಲಿ ಅವರು ವಿಪಕ್ಷಗಳ ಮೇಲೆ ಮಾಡುತ್ತಿರುವ ಆರೋಪಗಳು ಮಾತ್ರವೇ ಸತ್ಯವೆ?

ಬಿಜೆಪಿ ಮ ತ್ತು ಅವರ ಸರ್ಕಾರ ಮಾತ್ರ ಭಾರೀ ಸಾಚಾ ಆಗಿದೆಯೆ? ಮೊದಲನೆಯದಾಗಿ, ಅಭಿವೃದ್ಧಿಯ ವಿಚಾರವನ್ನೇ ತೆಗೆದುಕೊಳ್ಳೋಣ.

ಯಾವುದಕ್ಕಾಗಿ ಈ 10 ವರ್ಷವನ್ನು ಅಭಿವೃದ್ಧಿಯ ಕಾಲ ಎನ್ನುತ್ತಿದ್ದಾರೆ ಶಾ? ಯಾವುದರಲ್ಲಿ ಅವರ ಸರ್ಕಾರ ಅಭಿವೃದ್ಧಿ ಸಾಧಿಸಿದೆ? ರೈತರು ಮತ್ತೊಮ್ಮೆ ಪ್ರತಿಭಟನೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರದಿಂದಲೇ ಶುರು ಮಾಡೋಣ.

ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಿರುವ ಶಾ, ಈ ಹಿಂದೆ ಸತತ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದ ಈ ದೇಶದ ರೈತರು ಮತ್ತೇಕೆ ದೆಹಲಿಯತ್ತ ಬಂದಿದ್ದಾರೆ, ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎಂಬುದನ್ನೇಕೆ ಹೇಳುತ್ತಿಲ್ಲ? ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಅರ್ಹ ರೈತರಿಗೆ ಪ್ರತಿ ವಾರ್ಷಿಕ 6,000 ಕೊಡುತ್ತಿರುವ ಬಗ್ಗೆ ಕೊಚ್ಚಿಕೊಳ್ಳುವ ಶಾ, ಭಾರತದ ಕೃಷಿ ಕಾರ್ಮಿಕರಲ್ಲಿ ಕನಿಷ್ಠ ಶೇ.55ರಷ್ಟಿರುವ ಭೂರಹಿತ ರೈತರು ಆ ಯೋಜನೆಯ ವ್ಯಾಪ್ತಿಗೆ ಬರುತ್ತಿಲ್ಲ ಎಂಬುದನ್ನೇಕೆ ಮರೆಮಾಚುತ್ತಾರೆ?

ರೈತರ ಆದಾಯ​ 2022 ರೊಳಗೆ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರೈತರ ಆದಾಯ ಇನ್ನಷ್ಟು ಕುಸಿದಿರುವುದನ್ನೇ ಕಾಣುತ್ತಿದ್ದೇವೆ. ಅದನ್ನೇಕೆ ಶಾ ಹೇಳುತ್ತಿಲ್ಲ? ಮೋದಿ ಸರ್ಕಾರ ಹೇಳಿದ್ದಂತೆ ರೈತರ ಆದಾಯ ದ್ವಿಗುಣವಾಗಬೇಕಿದ್ದರೆ ಅದು ವಾರ್ಷಿಕ ಶೇ.10.4ರಷ್ಟು ಹೆಚ್ಚಬೇಕು ಎಂದು ಸರ್ಕಾರದ್ದೇ ಮಾರ್ಗಸೂಚಿ ಸಮಿತಿ ಹೇಳುತ್ತದೆ.

ಆದರೆ, ವಾಸ್ತವವಾಗಿ, 2021ರಲ್ಲಿ ಕಡೆಯದಾಗಿ ಬಿಡುಗಡೆಯಾದ ಸಾಂದರ್ಭಿಕ ಸಮೀಕ್ಷೆಯ ಪ್ರಕಾರ ರೈತರ ಆದಾಯದ ವಾರ್ಷಿಕ ಹೆಚ್ಚಳ ಶೇ.2.8ರಷ್ಟು ಮಾತ್ರ. ಇದು ಯುಪಿಎ ಸರ್ಕಾರದಲ್ಲಿನ ಸನ್ನಿವೇಶಕ್ಕೇ ಹತ್ತಿರವಾಗಿದೆ ಎಂದ ಮೇಲೆ ಮೋದಿ ಅವಧಿಯಲ್ಲಿ ಆಗಿರುವುದು ಯಾವ ಅಭಿವೃದ್ಧಿ? ಯಾರ ಅಭಿವೃದ್ಧಿ? ಈಗ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರಮುಖ ಬೇಡಿಕೆ ಎಂಎಸ್ ಸ್ವಾಮಿನಾಥನ್ ಸೂತ್ರದನ್ವಯದ ​ಕನಿಷ್ಟ ಬೆಂಬಲ ಬೆಲೆ.

ಆದರೆ ​​ಕನಿಷ್ಟ ಬೆಂಬಲ ಬೆಲೆ ಹೆಚ್ಚಳವಾಗಿದೆ ಎಂದು ಸುಮ್ಮನೆ ಪ್ರಚಾರ ಮಾಡಿಕೊಳ್ಳುತ್ತಿರುವ ಮೋದಿ ಸರ್ಕಾರದ ಅವಧಿಯಲ್ಲಿನ ವಾಸ್ತವವೇ ಬೇರೆ ಇದೆ. ಅಂಕಿಅಂಶಗಳ ಪ್ರಕಾರ, 2003ರಿಂದ 2014ರವರೆಗೆ 10 ವರ್ಷಗಳಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಎಂಎಸ್ಪಿ ಶೇ.122ರಷ್ಟು ಹೆಚ್ಚಳ ಕಂಡಿತ್ತು. ಈಗ ಎನ್ಡಿಎ ಸರ್ಕಾರದ 10 ವರ್ಷಗಳಲ್ಲಿ, ಅಂದರೆ 2014ರಿಂದ 2024ರ ಅವಧಿಯಲ್ಲಿ ಎಂಎಸ್ಪಿ ಏರಿಕೆ ಶೇ.63 ಮಾತ್ರ.

ಹಾಗಾದರೆ ಮೋದಿ ಸರ್ಕಾರ ಹೇಳಿಕೊಳ್ಳುತ್ತಿರುವ ಹೆಚ್ಚಳ ಯಾವುದು ಮತ್ತು ಎಲ್ಲಿದೆ? 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಮೋದಿಯವರು ಅವರ ಹತ್ತು ವರ್ಷಗಳ ಆಡಳಿತದ ಬಳಿಕವೂ 81 ಕೋಟಿ ಜನರಿಗೆ ಹೊಟ್ಟೆ ಹೊರೆಯಲು ಪಡಿತರ ಉಚಿತವಾಗಿ ನೀಡಬೇಕಾದ ಪರಿಸ್ಥಿತಿ ಯಾಕಿದೆ ಎಂದು ವಿವರಿಸುತ್ತಾರೆಯೇ ?

ತನ್ನ ಬುಡದಲ್ಲಿಯೇ ಹೀಗೆ ವಿಫಲತೆಗಳ ಸಾಲು ಸಾಲನ್ನೇ ಇಟ್ಟುಕೊಂಡು ಬಿಜೆಪಿ ಏಕೆ ವಿಪಕ್ಷಗಳನ್ನು ದೂಷಿಸುತ್ತಿದೆ? ಅಧಿಕಾರಕ್ಕೆ ಬರುವಾಗ ​ಕೋಟಿ ಕೋಟಿ ಉದ್ಯೋಗಗಳ ಭರವಸೆ ಕೊಟ್ಟಿದ್ದ ಮೋದಿ ಆಮೇಲೆ ಏನು ಮಾಡಿದರು ಎನ್ನುವುದು ಕೂಡ ದೇಶಕ್ಕೆ ಗೊತ್ತಿದೆ​. ಕಳೆದ ನಾಲ್ಕು ದಶಕಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗ ಪ್ರಮಾಣ ಮೋದಿ ಸರಕಾರದ ಅವಧಿಯಲ್ಲಿ ದಾಖಲಾಗಿದೆ. ಕೆಲವೇ ಸಾವಿರ ಸಂಖ್ಯೆಯ ಉದ್ಯೋಗಗಳಿಗಾಗಿ ಕೋಟಿಗಟ್ಟಲೆ ಯುವಕರು ಪೈಪೋಟಿಗಿಳಿಯಬೇಕಾದ​ ಹತಾಶ ಸ್ಥಿತಿ ಇದೆ.

ಹತಾಶ ನಿರುದ್ಯೋಗಿ ಯುವಕರು ಪ್ರತಿಭಟನೆ ಮಾಡುತ್ತ ದಣಿದಿದ್ದಾರೆ, ಹೈರಾಣಾಗಿದ್ದಾರೆ, ಪೊಲೀಸರ ಲಾಠಿಯೇಟಿನ ರುಚಿ ಕಂಡವರೆಷ್ಟೋ ಮಂದಿ ಇದ್ಧಾರೆ. ನಂಬಿ ಗೆಲ್ಲಿಸಿದ ಈ ದೇಶದ ಯುವಕರಿಗೆ ಇದೇ ಅಲ್ಲವಾ ಮೋದಿ ಸರ್ಕಾರದ ಬಳುವಳಿ​ ? ​ಹತಾಶ ಯುವಕರು ಪ್ರತಿಭಟನೆ ಮಾಡಿದರೆ ಅದರ ಸುದ್ದಿ ಪ್ರಕಟಿಸದಂತೆ ಚಾನಲ್ ಗಳಿಗೆ ನಿರ್ಬಂಧ ವಿಧಿಸುತ್ತದೆ ಮೋದಿ ಸರಕಾರ.

​ಶಾ ಹೇಳುವ ಹಾಗೆ ​ಮೋದಿ ಸರ್ಕಾರ ಅಭಿವೃದ್ಧಿಯ ಕಾಲವಾಗಿದ್ದರೆ, ಲಕ್ಷಾಂತರ ಯುವಕರು ಕೆಲಸಕ್ಕಾಗಿ ಇಸ್ರೇಲ್ಗೆ ಹೋಗಲು ಹೀಗೆ ಸರದಿಯಲ್ಲಿ ನಿಲ್ಲಬೇಕಿ​ತ್ತೇ ? ಇಲ್ಲಿ ಹಸಿದು ಸಾಯುವ ಬದಲು ಅಲ್ಲಿ ಹೋಗಿ ಸಾಯುವುದು ಎಷ್ಟೋ ಪಾಲು ಮೇಲು ಎಂದು ಯೋಚಿಸುವಂಥ ಸ್ಥಿತಿಯನ್ನು ಅವರಾರೂ ಮುಟ್ಟುತ್ತಿರಲಿಲ್ಲ.

ದೇಶದ ರೈತರು, ಯುವಕರು, ಕಾರ್ಮಿಕರು ಅದೆಷ್ಟು ಹತಾಶ ಸ್ಥಿತಿ ಮುಟ್ಟಿದ್ಧಾರೆ ಎಂಬುದು ನಿತ್ಯವೂ ಕಾಣಿಸುತ್ತಿದೆ. ಭಾರೀ ಆಕರ್ಷಕ ಹೆಸರನ್ನಿಟ್ಟುಕೊಂಡು ಬಂದಿದ್ದ ಮೋದಿ ಸರ್ಕಾರದ ಯೋಜನೆಗಳೆಲ್ಲ ಎಲ್ಲಿವೆ​ ? ಯಾಕೆ ಅವು ಬರೀ ಭಾಷಣಗಳ, ಪೋಸ್ಟರುಗಳ ಸರಕು ಮಾತ್ರವಾಗಿವೆ? ​ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ದಂತಹ ಯೋಜನೆಗಳ ಬಗ್ಗೆ ಯಾಕೆ ಈಗ ಮೋದಿ ಎಲ್ಲೂ ಮಾತಾಡುತ್ತಿಲ್ಲ ?

ಬೇಟಿ ಬಚಾವೋದಂಥ ಯೋಜನೆಯನ್ನು ಕೂಡ ಬರೀ ಪ್ರಚಾರಕ್ಕೆ ಮಾತ್ರವೇ ಬಳಸಿಕೊಂಡಿರುವ ಮೋದಿ ಸರ್ಕಾರ,

ಹೇಗೆ ಆ ಯೋಜನೆಯನ್ನು ಹಾಳುಗೆಡವಿದೆ? ಮೋದಿ ಸರ್ಕಾರದ ಮಂದಿಯೇ ಅದೆಷ್ಟು ಸ್ತ್ರೀದ್ವೇಷಿಗಳಾಗಿ ಅಟ್ಟಹಾಸ ಗೈಯುತ್ತಿದ್ದಾರೆ?

ಮೋದಿ ಅಧಿಕಾರಕ್ಕೆ ಬರುವ ಮೊದಲು ಇದ್ದ ಈ ದೇಶದ ಸಾಲ 55.8 ಲಕ್ಷ ಕೋಟಿ. ಮೋದಿ ಅಧಿಕಾರಕ್ಕೆ ಬಂದ ನಂತರದ 9 ವರ್ಷಗಳಲ್ಲೇ ದೇಶದ ಸಾಲ 100 ಲಕ್ಷ ಕೋಟಿ ಹೆಚ್ಚಿದೆ. ​ಈಗ ​ಸಾಲ 155.8 ಲಕ್ಷ ಕೋಟಿ ದಾಟಿದೆ.

ಇದು ಶಾ ಹೇಳುವ ಅಭಿವೃದ್ಧಿಯೆ? ಇವೆಲ್ಲವನ್ನೂ ಅಭಿವೃದ್ಧಿಯ ಬಗ್ಗೆ ಸುಳ್ಳಿನ ಕಥೆ ಹೇಳುವಾಗ ಶಾ ಯಾಕೆ ಅಡಗಿಸುತ್ತಾರೆ?

ಇನ್ನು ಭ್ರಷ್ಟಾಚಾರದ ವಿಚಾರ. ಮೋದಿ ಸರ್ಕಾರದ ಚುನಾವಣಾ ಬಾಂಡ್ ಯೋಜನೆ ಅಸಾಂವಿಧಾನಿಕ ಎಂದು ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿತು. ಬಿಜೆಪಿಯ ಬೊಕ್ಕಸ ತುಂಬಲೆಂದೇ ದೇಶದ ಜನರನ್ನು ಕತ್ತಲೆಯಲ್ಲಿಟ್ಟು ಹೇಗೆ ಚುನಾವಣಾ ಬಾಂಡ್ ಬಳಸಿಕೊಳ್ಳಲಾಯಿತು ಎಂಬುದು ಬಯಲಾಗಿದೆ.

ಭ್ರಷ್ಟಾಚಾರದ ಆರೋಪದಲ್ಲಿ ವಿಪಕ್ಷ ನಾಯಕರ ಬೆನ್ನು ಹತ್ತುವ, ಮನಿ ಲಾಂಡರಿಂಗ್ ಕಾಯ್ದೆಯಡಿ ಅವರನ್ನು ಜೈಲಿಗಟ್ಟುವ ಮೋದಿ ಸರ್ಕಾರ ಈ ಚುನಾವಣಾ ಬಾಂಡ್ಗಳ ಮೂಲಕ ಮಾಡಿದ್ದು ಕೂಡ ಮನಿ ಲಾಂಡರಿಂಗ್ ಅನ್ನೇ ಎನ್ನುವುದನ್ನು ಪರಿಣಿತರೆಲ್ಲರೂ ವಾದಿಸಿದ್ದಾರೆ. ಬಿಜೆಪಿಯ ​ಬಣ್ಣ ಅಲ್ಲೂ ಬಯಲಾಗಿದೆ. 2023ನೇ ಸಾಲಿನ ಜಾಗತಿಕ ಕರಪ್ಷನ್ ಇಂಡೆಕ್ಸ್ ನಲ್ಲಿ ಜಾಗತಿಕ 180 ದೇಶಗಳಲ್ಲಿ93ನೇ ಸ್ಥಾನದಲ್ಲಿದೆ ಭಾರತ.

ಹೇಗೆ ಮೋದಿ ಸರ್ಕಾರ ಅಂಬಾನಿ ಅದಾನಿಗಳಿಗೆ ಎಲ್ಲವನ್ನೂ ಮಾರಿಕೊಳ್ಳುತ್ತಿದೆ, ಹೇಗೆ ಅದಾನಿಯ ಅಕ್ರಮಗಳಿಗೆಲ್ಲ ರಕ್ಷಣೆಯಾಗಿ ನಿಂತಿದೆ,

ಈ ದೇಶದ ವಿಮಾನ ನಿಲ್ದಾಣಗಳು, ಬಂದರುಗಳೆಲ್ಲ ಹೇಗೆ ಅದಾನಿ ಸಾಮ್ರಾಜ್ಯದ ನೆರಳಿನಡಿ ಹೋಗಿವೆ ​-​ ಇದೆಲ್ಲ ಅಭಿವೃದ್ಧಿಯ ಲೆಕ್ಕಕ್ಕೆ ಬರುತ್ತದೆಯೇ ?

ಅದಾನಿ ವಿಮಾನದಲ್ಲಿ ಚುನಾವಣಾ ರ್ಯಾಲಿಗಾಗಿ ಪ್ರಯಾಣಿಸುವ ಮೋದಿ ಕಳಂಕರಹಿತರೆ​ ? ಅದಾನಿ ಕಲ್ಲಿದ್ದಲು ವ್ಯವಹಾರಕ್ಕೆ ಸಾಥ್ ಕೊಟ್ಟ ಮೋದಿ ಸರ್ಕಾರ ಮೆತ್ತಿಕೊಂಡ ಮಸಿಯೆಷ್ಟು? ಅದಾನಿ ವಿರುದ್ಧ ಭ್ರಷ್ಟಾಚಾರದ ಇಷ್ಟೆಲ್ಲ ಗಂಭೀರ ಆರೋಪಗಳು ಕೇಳಿ ಬಂದರೂ ಅವರ ವಿರುದ್ಧ ಸೂಕ್ತ ತನಿಖೆ ನಡೆಯಲಿಲ್ಲ ಯಾಕೆ ? ದೇಶ ಮೊದಲು ಎನ್ನುವವರು, ದೇಶದ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದೇವೆ ಎಂದು ಹೇಳಿಕೊಳ್ಳುವವರು ದೇಶದ ರಕ್ಷಣೆಗೆ ಸಂಬಂಧಿಸಿದಂತೆ ಭಾರೀ ಅಪಾಯವೊಡ್ಡುವಂತಿದ್ದ ರಫೇಲ್ ಹಗರಣದ ಹಿಂದೆ ನಿಂ​ತಿದ್ದನ್ನು ಇಡೀ ದೇಶವೇ ನೋಡಿಲ್ಲವೇ ?

ರಕ್ಷಣಾ ವಹಿವಾಟಿನಲ್ಲಿ ತೊಡಗಿಸಿಕೊಳ್ಳಲು​ ಯಾವುದೇ ಅನುಭವ ಇಲ್ಲದ, ಸಾಕಷ್ಟು​ ಹಣವೂ ಇದ್ದಿರದ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಕಂಪನಿ ರಫೇಲ್ ಖರೀದಿಯಲ್ಲಿ ಭಾರತೀಯ ಪಾಲುದಾರ ಕಂಪನಿಯಾಗಿ ಸೇರಿದ ಮ್ಯಾಜಿಕ್ ​ಹೇಗೆ ನಡೆಯಿತು ?

ಅದು ಪಾರದರ್ಶಕ ಆಡಳಿತಕ್ಕೆ ಮಾದರಿಯೇ ?

ಮೋದಿ ಜೊತೆ ಕಾಣಿಸಿಕೊಂಡು ಪೋಸು ಕೊಟ್ಟಿದ್ದ ಅದೆಷ್ಟು ಉದ್ಯಮಿಗಳು ಕ​ಡೆಗೆ​ ಈ ದೇಶದ ಬ್ಯಾಂಕುಗಳಿಗೆ ದೊಡ್ಡ ಪಂಗನಾಮ ಹಾಕಿ, ಕೋಟಿಗಟ್ಟಲೆ ವಂಚಿಸಿ ದೇಶ ಬಿಟ್ಟು ಪರಾರಿಯಾಗಿಲ್ಲ? ಮಲ್ಯ, ಚೋಕ್ಸಿ, ನೀರವ್ ಮೋದಿಗಳಿಂದಲೇ ಬ್ಯಾಂಕ್ಗಳಿಗೆ ಅಂದಾಜು 30 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಪಂಗನಾಮ ಬಿದ್ದಿದೆ.

ಮೋದಿಯವರ ಪರಮಾಪ್ತ ರಾಮ್ದೇವ್ ಒಡೆತನದ ಕಂಪನಿ​ಯ ವಿರುದ್ಧವೂ ಅದೆಷ್ಟು ಭ್ರಷ್ಟಾಚಾರದ ಆರೋಪಗಳು ಬಂದವು ? ಆದರೆ ಅವರ ವಿರುದ್ಧವೂ ಮೋದಿ ಸರ್ಕಾರ ಕ್ರಮ ಕೈಗೊಂಡಿಲ್ಲವೆಂದರೆ ಏನರ್ಥ? ಇಂಥವರೆಲ್ಲರ ಸಾಲ ರೈಟ್ ಆಫ್ ಮಾಡಿ ಕೂತಿರುವ ಮೋದಿ ಸರ್ಕಾರ ಕಳಂಕರಹಿತವೆ? ಕಳೆದ ಮೂರು ವರ್ಷಗಳಲ್ಲಿ ಬ್ಯಾಂಕ್ಗಳು ರೈಟ್ ಆಫ್ ಮಾಡಿರುವ ಸಾಲದ ಪ್ರಮಾಣ ನೋಡಿ.

2021ರ ಮಾರ್ಚ್ ಗೆ ರೈಟ್ ಆಫ್ ಆದ ಮೊತ್ತ 2,02,781 ಕೋಟಿ ರೂ. ಇತ್ತು.

2022ರ ಮಾರ್ಚ್ ಗೆ ಅದರ ಪ್ರಮಾಣ 1,74,966 ಕೋಟಿ ರೂ. ಇತ್ತು.

2023ರ ಮಾರ್ಚ್ ಗೆ 2,09,144 ಕೋಟಿ ರೂ.ಗೆ ಏರಿಕೆಯಾಯಿತು.

ಇದೆಲ್ಲ ಭ್ರಷ್ಟತೆಯಲ್ಲಿ ಮೋದಿ ಸರ್ಕಾರದ ಪಾಲಿಲ್ಲವೆ? ​ನೋಟು ನಿಷೇಧವನ್ನು ಯಾಕೆ ಬಿಜೆಪಿಯಾಗಲಿ, ಮೋದಿಯಾಗಲಿ, ಅಮಿತ್ ಶಾ ಆಗಲಿ ಈಗ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿಲ್ಲ ? ಪ್ರಜಾತಂತ್ರದ ದಾರಿ ಬಿಟ್ಟು ಅಡ್ಡದಾರಿಯಲ್ಲಿ ಕುದುರೆ ವ್ಯಾಪಾರದ ಮೂಲಕ ಅಧಿಕಾರ ಹಿಡಿಯುವ ಬಿಜೆಪಿಯ ನಡೆ ಭ್ರಷ್ಟವಾದುದಲ್ಲವೆ? ಕಳೆದೊಂದು ದಶಕದಲ್ಲಿ ದೇಶಾದ್ಯಂತ ಜನಾದೇಶ ಪಡೆಯದೆಯೇ ವಿಪಕ್ಷ ನಾಯಕರನ್ನು ಖರೀದಿಸಿ, ಅಥವಾ ಬೆದರಿಸಿ ತಮ್ಮ ಸರಕಾರ ಸ್ಥಾಪಿಸಿದ್ದು ಸ್ವಚ್ಛ, ಪಾರದರ್ಶಕ ಆಡಳಿತಕ್ಕೆ ಉದಾಹರಣೆಯೇ ?

ಇನ್ನು ಕುಟುಂಬ ರಾಜಕಾರಣ. ಅದೇಕೆ ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳ ಕುಟುಂಬ ರಾಜಕಾರಣ ಮಾತ್ರವೇ ಶಾ ಥರದವರ ಕಣ್ಣಿಗೆ ಕಾಣಿಸುತ್ತಿದೆ?ಅವರದೇ ಬಿಜೆಪಿಯಲ್ಲಿನ ಕುಟುಂಬ ರಾಜಕಾರಣ ದೇಶಕ್ಕೆ ಗೊತ್ತಿರುವಾಗ, ಅವರ ಪಕ್ಷದಲ್ಲೂ​ ಯಾವುದೇ ಎಗ್ಗಿಲ್ಲದೆ ಕುಟುಂಬ ರಾಜಕಾರಣ ನಡೆದೇ ಇರುವಾಗ ಇದೇಕೆ ಬೇರೆ ಪಕ್ಷಗಳ ಕಡೆಗೆ ಮಾತ್ರವೇ ಕೈತೋರಿಸುವ ಭಂಡತನ? ಹೇಗೆ ಶಾ ಪುತ್ರ ​ದಿಢೀರನೇ ಬಿಸಿಸಿಐ ​ನ ಆಯಕಟ್ಟಿನ ಜಾಗದಲ್ಲಿ ಬಂದು ಕೂತುಕೊಳ್ಳುವುದು ಸಾಧ್ಯವಾಗುತ್ತದೆ? ಅದು​ ಕುಟುಂಬ ರಾಜಕಾರಣದ ಭಾಗವೇ ಅಲ್ಲವೆ?

ಹೇಗೆ ಯಡಿಯೂರಪ್ಪನವರ ಪುತ್ರನನ್ನು ದೂರವಿಡದೆ ಪಕ್ಷದ ಹೊಣೆಗಾರಿಕೆ ವಹಿಸುತ್ತಾರೆ ಇದೇ ಶಾ ಥರದ ಬಿಜೆಪಿ ನಾಯಕರುಗಳು? ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅದೆಷ್ಟು ಮಟ್ಟಿಗೆ ಬಿಜೆಪಿ ಕುಟುಂಬ ರಾಜಕಾರಣವಿಲ್ಲ? ಇನ್ನು ಒಬಿಸಿಗಳ ಬಗ್ಗೆ ಕಾಂಗ್ರೆಸ್ ಏನನ್ನೂ ಮಾಡಿಲ್ಲ ಎನ್ನುವ ಶಾ, ಅದೇ ಒಬಿಸಿಗಳು, ದಲಿತರು, ಆದಿವಾಸಿಗಳ ವಿಚಾರದಲ್ಲಿ ಮಾಡಿರುವುದೇನು? ಅವರ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಬೇಕಾದ ಮಸಲತ್ತುಗಳನ್ನು ಮಾತ್ರವೆ ಅಲ್ಲವೆ ಬಿಜೆಪಿ ಮಾಡಿರುವುದು? ಮಂಡಲ್ ವಿರುದ್ಧ ಕಮಂಡಲ್ ರಾಜಕಾರಣ ಮಾಡಿದವರು ಯಾರು? ಒಂದು ವರ್ಗದ ತುಷ್ಟೀಕರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಅನ್ನು ದೂಷಿಸುವ ಶಾ, ಬಿಜೆಪಿ ಏನು ಮಾಡುತ್ತಿದೆ ಎಂಬುದನ್ನೂ ಹೇಳಬೇಕಲ್ಲವೆ?

ಅಲ್ಪಸಂಖ್ಯಾತರಿಗಾಗಲಿ, ದುರ್ಬಲ ವರ್ಗದವರಿಗಾಗಲೀ ಅನ್ಯಾಯವಾಗದಂತೆ ಯೋಚಿಸುವುದು, ಕಳಕಳಿ ತೋರಿಸುವುದು ಬಿಜೆಪಿಯ ದೃಷ್ಟಿಯಲ್ಲಿ ತುಷ್ಟೀಕರಣವಾಗುವುದಾದರೆ, ಪ್ರಬಲರ ಪರ ವಹಿಸಿ ನಿಲ್ಲುವ ಬಿಜೆಪಿಯದ್ದು ಏನು?

ಸನಾತನ ಧರ್ಮವನ್ನು ಕಾಂಗ್ರೆಸ್ ಅವಮಾನಿಸುತ್ತದೆ ಎಂದು ಶಾ ಸೇರಿದಂತೆ ಬಿಜೆಪಿಯವರು ದೂಷಿಸುವುದರ ಹಿಂದಿನ ಉದ್ದೇಶವೇನು? ರಾಷ್ಟ್ರೀಯ ಸುರಕ್ಷತೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಬಿಜೆಪಿಯ ಆಡಳಿತದಲ್ಲಿಯೇ ಪುಲ್ವಾಮಾ​ ಭಯೋತ್ಪಾದಕ ದಾಳಿಯಾಗುತ್ತದೆ. ಮತ್ತು ಅದೇ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುವ ಮೋದಿ ಸರ್ಕಾರ ತನ್ನ ಗೆಲುವಿಗೆ ಬಳಸಿಕೊಳ್ಳುತ್ತದೆ. ​

ಆದರೆ ಬಲಿಯಾದ ಯೋಧರಿಗೆ ಇವತ್ತಿಗೂ ನ್ಯಾಯ ಸಿಕ್ಕಿಲ್ಲವೇಕೆ ? ಆ ದಾಳಿಗೆ ಯಾವ ವೈಫಲ್ಯದಿಂದ ನಡೆಯಿತು ಎಂಬುದು ಇವತ್ತಿಗೂ ಬಹಿರಂಗವಾಗಿಲ್ಲ ಯಾಕೆ ? ನೆಹರೂ ಅವರ ಕುರಿತಲ್ಲಿಂದ ಶುರುವಾಗುವ ಬಿಜೆಪಿಯ ದ್ವೇಷ ಮತ್ತು ಅವಹೇಳನ,

ಈಗ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದವರೆಗೂ ವ್ಯಾಪಿಸುತ್ತದೆ.

ನೆಹರು ಮೀಸಲಾತಿಯನ್ನು ವಿರೋಧಿಸಿದರು. ಇಂದಿರಾಗಾಂಧಿ ಅವರು ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತರಲಿಲ್ಲ ಎನ್ನುವಲ್ಲಿಂದ ಹಿಡಿದು, ಇಂಡಿಯಾ ಮೈತ್ರಿ ಒಂದು ವಿಚಿತ್ರ ಸಮ್ಮಿಲನ. ಕಾಂಗ್ರೆಸ್ ಬಡವರ ವಿರೋಧಿ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿವೆ. ಕಾಂಗ್ರೆಸ್ ನೀತಿಗಳು ಭಾರತೀಯ ಸಂಸ್ಕೃತಿಗೆ ಹಾನಿಕಾರಕ. ಪ್ರತಿ ಪ್ರಗತಿಪರ ಹೆಜ್ಜೆಗೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ ಎನ್ನು​ತ್ತಾರೆ ಅಮಿತ್ ಶಾ​.

ಆದರೆ ಬಿಜೆಪಿ ಭ್ರಷ್ಟಾಚಾರದ ಬಗ್ಗೆ, ಬಿಜೆಪಿಯ ಒಡೆದು ಆಳುವ ನೀತಿಯ ಬಗ್ಗೆ, ಬಿಜೆಪಿ ಈ ದೇಶವನ್ನು ಮತ್ತೆ ​ನೂರಾರು ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುವ ಮೌಢ್ಯದಲ್ಲಿ ಬಿದ್ದಿರುವುದರ ಬಗ್ಗೆ ಮರೆಮಾಚುತ್ತಾರೆ. ಅಂದಹಾಗೆ, ಮುಂದಿನ ಲೋಕಸಭೆ ಚುನಾವಣೆಯನ್ನು ಕೌರವರು ಮತ್ತು ಪಾಂಡವರ ನಡುವಿನ ಮಹಾಭಾರತ ಯುದ್ಧಕ್ಕೆ ಹೋಲಿಸಿರುವ ಶಾ, ಯಾರು ಕೌರವರು ಮತ್ತು ಯಾರು ಪಾಂಡವರೆಂದೇನೂ ಹೋಲಿಸಿ ಹೇಳಿಲ್ಲ. ಬಲದ ಆಧಾರದಲ್ಲಿ ಹೇಳುವುದಾದರೆ, ಕೌರವರೇ ಬಲಾಢ್ಯರಾಗಿದ್ದರು. ತಾವು ಆಡಿದ್ದೇ ಆಟ ಎಂದುಕೊಂಡವರಾಗಿದ್ದರು. ಜನ, ದುಡ್ಡು, ಅಧಿಕಾರ, ತನಿಖಾ ಏಜನ್ಸಿಗಳು ಈ ಎಲ್ಲ ಅಕ್ಷೋಹಿಣಿ ಬಲ ಇರುವ ಬಿಜೆಪಿ ನಿಜವಾಗಿಯೂ ಏನು ಹಾಗಾದರೆ​ ?

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!