ಪಾಶ್ಚಿಮಾತ್ಯ ಟ್ಯಾಂಕ್ ಗಳನ್ನು ನಾಶಪಡಿಸಿದರೆ ಬೋನಸ್ ಪಾವತಿ: ರಶ್ಯ ಘೋಘಣೆ
ಮಾಸ್ಕೊ: ಉಕ್ರೇನ್ ಪಡೆ ಬಳಸುತ್ತಿರುವ ಜರ್ಮನಿ ನಿರ್ಮಿತ ಲಿಯೊಪಾರ್ಡ್ ಟ್ಯಾಂಕ್ ಗಳು ಮತ್ತು ಅಮೆರಿಕ ಒದಗಿಸಿರುವ ಶಸ್ತ್ರಸಜ್ಜಿತ ವಾಹನಗಳನ್ನು ನಾಶಗೊಳಿಸುವ ರಶ್ಯದ ಪಡೆಗಳು ಬೋನಸ್ ಪಡೆಯಲಿವೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಶುಕ್ರವಾರ ಘೋಷಿಸಿದೆ.
ಸುಮಾರು 16 ತಿಂಗಳ ಹಿಂದೆ ಯುದ್ಧ ಪ್ರಾರಂಭವಾದಂದಿನಿಂದ 10,000ಕ್ಕೂ ಅಧಿಕ ರಶ್ಯನ್ ಯೋಧರು ವೈಯಕ್ತಿಕ ಬೋನಸ್ ಪಡೆದಿರುವ ವ್ಯಾಪಕ ಬಹುಮಾನ ಯೋಜನೆಯ ಭಾಗ ಇದಾಗಿದೆ. ರಶ್ಯ ಗಣರಾಜ್ಯದ ಸಶಸ್ತ್ರ ಪಡೆಯ ಯೋಧರು ಲಿಯೊಪಾರ್ಡ್ ಟ್ಯಾಂಕ್ಗಳನ್ನು ನಾಶಗೊಳಿಸಿದರೆ ಅಥವಾ ಅಮೆರಿಕ ಹಾಗೂ ಇತರ ನೇಟೊ ದೇಶಗಳಲ್ಲಿ ನಿರ್ಮಿಸಿರುವ ಶಸ್ತ್ರಸಜ್ಜಿತ ವಾಹನಗಳನ್ನು ನಾಶಗೊಳಿಸಿದರೆ ಅವರಿಗೆ ಬೋನಸ್ ಪಾವತಿಸಲಾಗುತ್ತದೆ. ಮೇ 31ರವರೆಗೆ ಉಕ್ರೇನ್ ಹಾಗೂ ಪಾಶ್ಚಿಮಾತ್ಯ ಮಿಲಿಟರಿ ಸಾಧನಗಳನ್ನು ನಾಶಗೊಳಿಸಿದ 10,257 ಯೋಧರು ಪುರಸ್ಕಾರ ಪಡೆದಿದ್ದಾರೆ. ಶತ್ರುಪಾಳಯದ ಒಂದು ಶಸ್ತ್ರಸಜ್ಜಿತ ವಾಹನ ನಾಶಗೊಳಿಸಿದರೆ 50,000 ರೂಬಲ್(596 ಡಾಲರ್), ಒಂದು ಟ್ಯಾಂಕ್ ನಾಶಗೊಳಿಸಿದರೆ 1 ಲಕ್ಷ ರೂಬಲ್ ಬೋನಸ್ ಸಿಗುತ್ತದೆ. ಉಕ್ರೇನ್ನ ಯುದ್ಧವಿಮಾನ ಅಥವಾ ಹೆಲಿಕಾಪ್ಟರ್ ನಾಶಗೊಳಿಸುವ ಸೇನೆಯ ಪೈಲಟ್ಗಳು ಅಥವಾ ವಾಯುರಕ್ಷಣಾ ನಿರ್ವಾಹಕರಿಗೆ 3 ಲಕ್ಷ ರೂಬಲ್ ಬೋನಸ್ ಸಿಗುತ್ತದೆ. ಅಮೆರಿಕ ಪೂರೈಸಿರುವ ಹಿಮರ್ಸ್ ರಾಕೆಟ್ ವ್ಯವಸ್ಥೆಯನ್ನು ನಾಶಗೊಳಿಸಿದವರಿಗೂ ಇಷ್ಟು ಮೊತ್ತ ಸಿಗಲಿದೆ. ರಶ್ಯದ ಫೀಲ್ಡ್ ಕಮಾಂಡರ್ ಗಳು ನೀಡುವ ವರದಿಯ ಆಧಾರದಲ್ಲಿ ಬೋನಸ್ ಪಾವತಿಸಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.