ಮೊದಲ ಟೆಸ್ಟ್: ಶ್ರೀಲಂಕಾವನ್ನು 312ಕ್ಕೆ ನಿಯಂತ್ರಿಸಿದ ಪಾಕಿಸ್ತಾನ; ಡಿಸಿಲ್ವ ಶತಕ, ಮ್ಯಾಥ್ಯೂಸ್ ಅರ್ಧಶತಕ

Update: 2023-07-19 10:40 GMT

Photo: Twitter / @TheRealPCB

ಗಾಲೆ: ಧನಂಜಯ ಡಿಸಿಲ್ವ 122 ರನ್ ಗಳಿಸಿದ ಹೊರತಾಗಿಯೂ ಪಾಕಿಸ್ತಾನ ಕ್ರಿಕೆಟ್ ತಂಡ ಮೊದಲ ಟೆಸ್ಟ್ ಪಂದ್ಯದ 2ನೇ ದಿನವಾದ ಸೋಮವಾರ ಆತಿಥೇಯ ಶ್ರೀಲಂಕಾ ತಂಡವನ್ನು 312 ರನ್‌ಗೆ ಆಲೌಟ್ ಮಾಡಿದೆ.

ಮಳೆಬಾಧಿತ ಮೊದಲ ದಿನದಾಟದಲ್ಲಿ ಅಗ್ರ ಸರದಿಯ ಕುಸಿತಕ್ಕೆ ಒಳಗಾಗಿದ್ದ ಲಂಕೆಗೆ ಡಿಸಿಲ್ವ ಆಸರೆಯಾದರು. ಇಂದು 94 ರನ್‌ನಿಂದ ಬ್ಯಾಟಿಂಗ್‌ಮುಂದುವ ರಿಸಿದ ಡಿಸಿಲ್ವ ತನ್ನ 50ನೇ ಪಂದ್ಯದಲ್ಲಿ 10ನೇ ಶತಕ ದಾಖಲಿಸಿದರು. 2ನೇ ದಿನದಾಟವನ್ನು ಇಂದು ಬೇಗನೆ ಆರಂಭಿಸ ಲಾಯಿತು.

6 ವಿಕೆಟ್ ನಷ್ಟಕ್ಕೆ 242 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಲಂಕಾ 95.2 ಓವರ್‌ಗಳಲ್ಲಿ 312 ರನ್‌ಗೆ ಆಲೌಟಾಯಿತು. ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ(3-86), ನಸೀಮ್ ಶಾ (3-90) ಹಾಗೂ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ (3-68) ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿ ಸಂಘಟಿತ ಪ್ರದರ್ಶನ ನೀಡಿದರು.

ಕೆಳ ಕ್ರಮಾಂಕದ ಬ್ಯಾಟರ್‌ಗಳೊಂದಿಗೆ ಉಪಯುಕ್ತ ರನ್ ಗಳಿಸಿದ ಡಿಸಿಲ್ವ 214 ಎಸೆತಗಳ ಇನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಸಿಡಿಸಿದರು. 11ನೇ ಕ್ರಮಾಂಕದ ಬ್ಯಾಟರ್ ವಿಶ್ವ ಫೆರ್ನಾಂಡೊ ಔಟಾಗದೆ 21 ರನ್ ಗಳಿಸಿದರು.

ರವಿವಾರ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ಮೊದಲ ಅವಧಿಯಲ್ಲಿ 54 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು ರವಿವಾರ 2 ಬಾರಿ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದ್ದು, ಈ ಮಧ್ಯೆ ಐದನೇ ವಿಕೆಟ್‌ಗೆ 131 ರನ್ ಜೊತೆಯಾಟ ನಡೆಸಿದ ಆ್ಯಂಜೆಲೊ ಮ್ಯಾಥ್ಯೂಸ್(64 ರನ್)ಹಾಗೂ ಡಿಸಿಲ್ವ ತಂಡವನ್ನು ಆಧರಿಸಿದರು. ಮ್ಯಾಥ್ಯೂಸ್ ಔಟಾದ ನಂತರ ಸಮರವಿಕ್ರಮ (36 ರನ್)ಜೊತೆಗೆ ಡಿಸಿಲ್ವ 6ನೇ ವಿಕೆಟ್‌ಗೆ 57 ರನ್ ಸೇರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News