ಸುಡಾನ್ ಹಿಂಸಾಚಾರ: ಹೊಸ ತನಿಖೆಗೆ ಐಸಿಸಿ ಚಾಲನೆ

Update: 2023-07-14 17:34 GMT

Photo : PTI

 ನ್ಯೂಯಾರ್ಕ್: ಸುಡಾನ್ನಲ್ಲಿ ಹಿಂಸಾಚಾರ ಉಲ್ಬಣಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ(ಐಸಿಸಿ), ಯುದ್ಧಾಪರಾಧದ ಆರೋಪದ ಕುರಿತು ಹೊಸದಾಗಿ ತನಿಖೆ ಆರಂಭಿಸಿದೆ ಎಂದು ಐಸಿಸಿಯ ಮುಖ್ಯ ನ್ಯಾಯಾಧಿಕಾರಿ ಕರೀಂ ಖಾನ್ ಹೇಳಿದ್ದಾರೆ.

ಈಶಾನ್ಯ ಆಫ್ರಿಕಾದ ದೇಶ ಸುಡಾನ್ ಸೇನಾ ಪಡೆಯ ಮುಖಂಡ  ಅಬ್ದುಲ್ ಫತಾಹ್ ಅಲ್ಬರ್ಹಾನ್ ಮತ್ತು ಅರೆಸೇನಾ ಪಡೆಯ ಮುಖಂಡ ಮುಹಮ್ಮದ್ ಹಮ್ದನ್ ಡಾಗ್ಲೊ  ನಡುವೆ ಅಧಿಕಾರ ನಿಯಂತ್ರಣಕ್ಕಾಗಿ  ಕಳೆದ ಮೂರು ತಿಂಗಳಿಂದ ನಡೆಯುತ್ತಿರುವ ಯುದ್ಧವು ದೇಶವನ್ನು ಮತ್ತೆ ಅರಾಜಕತೆಯತ್ತ ನೂಕಿರುವಂತೆಯೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿರುವ ವರದಿಯಲ್ಲಿ ಐಸಿಸಿ ಘೋಷಣೆ ಮಾಡಿದೆ. ಸುಡಾನ್ ದರ್ಫುರ್ ಪ್ರದೇಶದಲ್ಲಿ 2005ರಿಂದ ನಡೆಯುತ್ತಿರುವ ಅಪರಾಧಗಳನ್ನು ಐಸಿಸಿ ತನಿಖೆ ನಡೆಸುತ್ತಿದೆ ಮತ್ತು ಮಾಜಿ ಅಧ್ಯಕ್ಷ ಉಮರ್ ಅಲ್ಬಾಶಿರ್ ವಿರುದ್ಧ ನರಮೇಧ ಸೇರಿದಂತೆ ಹಲವು ಅಪರಾಧ ಪ್ರಕರಣಗಳನ್ನು ವಿಶ್ವಸಂಸ್ಥೆಯ ಉಲ್ಲೇಖದ ಬಳಿಕ ಐಸಿಸಿ ದಾಖಲಿಸಿದೆ. ಇತ್ತೀಚೆಗೆ ಸೇನೆ ಮತ್ತು ಅರೆಸೇನಾ ಪಡೆಯ ನಡುವೆ ಯುದ್ಧ ತೀವ್ರಗೊಂಡಂದಿನಿಂದ ದೌರ್ಜನ್ಯಗಳ ಆರೋಪ ಮತ್ತೆ ಕೇಳಿಬಂದಿದೆ. ಸುಮಾರು 3 ಸಾವಿರ ಜನರು ಸಾವನ್ನಪ್ಪಿದ್ದು ಮೂರು ದಶಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ.

ಮಧ್ಯೆ, ದರ್ಫುರ್ ಪ್ರಾಂತದಲ್ಲಿ ಕಳೆದ ತಿಂಗಳು ಅರೆಸೇನಾ ಪಡೆಯಿಂದ ಹತರಾಗಿರುವ ಕನಿಷ್ಟ 87 ಜನರ ಮೃತದೇಹಗಳನ್ನು ಸಾಮೂಹಿಕವಾಗಿ ದಫನ ಮಾಡಿರುವ ಮಾಹಿತಿಯಿದ್ದು ಇಲ್ಲಿ ಸಂಭವನೀಯ ಹತ್ಯಾಕಾಂಡದ ಬಗ್ಗೆ ವಿಶ್ವಸಂಸ್ಥೆ ಗುರುವಾರ ಎಚ್ಚರಿಕೆ ನೀಡಿದೆ. ‘ಇಲ್ಲಿರುವ ಸರಳ ಸತ್ಯವೆಂದರೆ, ನಾವು ಅದೇ ಶೋಚನೀಯ ಇತಿಹಾಸವನ್ನು ಪುನರಾವರ್ತಿಸಲು ಅವಕಾಶ ನೀಡುವ ಅಪಾಯವಿದೆ. ಸುಮಾರು ಎರಡು ದಶಕಗಳಿಂದ ಅನಿಶ್ಚಿತತೆ ಮತ್ತು ಸಂಘರ್ಷದ ನೋವಿನೊಂದಿಗೆ ಬದುಕಿದ ದರ್ಫುರ್ ಜನತೆಯ ಸಂಕಷ್ಟವನ್ನು ಆಲಿಸಬೇಕಾಗಿದೆ. ಎಪ್ರಿಲ್ನಲ್ಲಿ ಯುದ್ಧ ಆರಂಭಗೊಂಡಂದಿನಿಂದ ಯುದ್ಧಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧದ ಬಗ್ಗೆ ವ್ಯಾಪಕ ವರದಿ, ಮಾಹಿತಿಯಿದೆ. ಅಪರಾಧ ಪ್ರಕರಣ ಹೆಚ್ಚಿರುವುದು ಸುಡಾನ್ ಸರಕಾರ ಹಾಗೂ ಸಂಬಂಧಿಸಿದ ಇತರ ಸಂಘಟನೆಗಳು ತಮ್ಮ ಜವಾಬ್ದಾರಿಯಿಂದ ವಿಮುಖವಾಗಿರುವುದನ್ನು ಸೂಚಿಸುತ್ತದೆ. ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರಗಳು ಹೊಸ ತನಿಖೆಯ ಕೇಂದ್ರ ಬಿಂದುವಾಗಲಿದೆಎಂದು ಖಾನ್ ಹೇಳಿದ್ದಾರೆ.

ಹಿಂದಿನಿಂದಲೂ ವಿಶ್ವಸಂಸ್ಥೆಯ ತನಿಖೆಗೆ ಸುಡಾನ್ ಸೂಕ್ತ ರೀತಿಯಲ್ಲಿ ಸಹಕಾರ ನೀಡುತ್ತಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಐಸಿಸಿಯ ಹೊಸ ತನಿಖೆಯನ್ನು ಅಮೆರಿಕದ ವಿದೇಶಾಂಗ ಇಲಾಖೆ ಸ್ವಾಗತಿಸಿದೆ. ‘ಸುಡಾನ್ ಅಥವಾ ಇತರೆಡೆ ಅಪರಾಧ ಎಸಗುವವರಿಗೆ ಇದೊಂದು ಸಂದೇಶವಾಗಲಿ. ಇಂತಹ ಅಪರಾಧಗಳು ಮಾನವೀಯತೆಗೆ ಅಪಮಾನಎಂದು ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ಹೇಳಿದ್ದಾರೆ. ವಿಶ್ವಸಂಸ್ಥೆಯಲ್ಲಿ ಸುಡಾನ್ ರಾಯಭಾರಿ  ಐಸಿಸಿ ಹೇಳಿಕೆಯನ್ನು ನಿರಾಕರಿಸಿದ್ದುಸುಡಾನ್ ಸರಕಾರ ಐಸಿಸಿಯೊಂದಿಗೆ ನಿರಂತರ ಸಹಕರಿಸುತ್ತಾ ಬಂದಿದೆಎಂದು ಪ್ರತಿಕ್ರಿಯಿಸಿದ್ದಾರೆ.

ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ಖಂಡನೆ

ಸುಡಾನ್ ಪಶ್ಚಿಮ ದಾರ್ಫುರ್ನಲ್ಲಿರುವ ಸಾಮೂಹಿಕ ಸಮಾಧಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಟ 87 ಜನರನ್ನು ಸಮಾಧಿ ಮಾಡಲಾಗಿದೆ. ಹತ್ಯೆಗೆ ಅರೆಸೇನಾ ಪಡೆ ಕಾರಣ ಎಂಬ ಬಗ್ಗೆ ಸ್ಪಷ್ಟ ಮತ್ತು ವಿಶ್ವಾಸಾರ್ಹ ಮಾಹಿತಿ ಲಭಿಸಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಕರ್ ಟರ್ಕ್ ಹೇಳಿದ್ದಾರೆ.

ಸಮಿತಿ ಸಂಗ್ರಹಿಸಿದ ವಿಶ್ವಾಸಾರ್ಹ ಮಾಹಿತಿಯ ಪ್ರಕಾರ ಸಾಮೂಹಿಕ ಇವರನ್ನು ಜೂನ್ 13ರಿಂದ 21 ನಡುವಿನ ಅವಧಿಯಲ್ಲಿ ಹತ್ಯೆ ಮಾಡಲಾಗಿದೆ. ಇದರಲ್ಲಿ ಕೆಲವರು ಗಾಯಕ್ಕೆ ಸೂಕ್ತ ಚಿಕಿತ್ಸೆ ಲಭಿಸದೆ ಮೃತಪಟ್ಟಿದ್ದಾರೆ ನಗರದ ಸಮೀಪದಲ್ಲಿರುವ ತೆರೆದ ಬಯಲಿನಲ್ಲಿ ಆಳವಿಲ್ಲದ ಸಮಾಧಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೃತದೇಹಗಳನ್ನು ವಿಲೇವಾರಿ ಮಾಡುವಂತೆ ಸ್ಥಳೀಯ ಜನರನ್ನು ಬಲವಂತಗೊಳಿಸಲಾಗಿದೆಎಂದವರು ಹೇಳಿದ್ದಾರೆ.

ಸೇನೆಯ ಎರಡು ಬಣಗಳ ನಡುವೆ ಎಪ್ರಿಲ್ನಲ್ಲಿ ಆರಂಭವಾದ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಜನಾಂಗೀಯ ಪ್ರೇರಿತ ರಕ್ತಪಾತವಾಗಿ ಬದಲಾಗುವ ಅಪಾಯದಲ್ಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News