ಟೈಪಿಂಗ್ ಪ್ರಮಾದ:ಅಮೆರಿಕ ಮಿಲಿಟರಿಯ ರಹಸ್ಯ ಇ-ಮೇಲ್ ಮಾಲಿ ದೇಶಕ್ಕೆ ರವಾನೆ !
ವಾಷಿಂಗ್ಟನ್: ಟೈಪಿಂಗ್ ಸಂದರ್ಭ ಆದ ಸಣ್ಣ ಕಣ್ತಪ್ಪಿನಿಂದಾಗಿ ಅಮೆರಿಕ ಮಿಲಿಟರಿಯ ಅತ್ಯಂತ ರಹಸ್ಯವಾದ ಮಾಹಿತಿಯನ್ನು ರಶ್ಯದ ಮಿತ್ರದೇಶ ಮಾಲಿಗೆ ರವಾನಿಸಿರುವುದು ಬೆಳಕಿಗೆ ಬಂದಿದೆ ಎಂದು `ದಿ ಫೈನಾನ್ಶಿಯಲ್ ಟೈಮ್ಸ್' ವರದಿ ಮಾಡಿದೆ.
ಹೀಗೆ ಕಳುಹಿಸಲಾದ ಇ-ಮೇಲ್‍ನಲ್ಲಿ ರಾಜತಾಂತ್ರಿಕ ದಾಖಲೆಗಳು, ತೆರಿಗೆ ಪಾವತಿ ವಿವರ, ಪಾಸ್‍ವರ್ಡ್‍ಗಳು ಹಾಗೂ ಮಿಲಿಟರಿಯ ಉನ್ನತ ಅಧಿಕಾರಿಗಳ ಪ್ರವಾಸದ ವಿವರಗಳು ಒಳಗೊಂಡಿವೆ. ಪಶ್ಚಿಮ ಆಫ್ರಿಕಾದ ಮಾಲಿದೇಶವು ರಶ್ಯದ ಮಿತ್ರರಾಷ್ಟ್ರವಾಗಿದೆ.
ಡೊಮೇನ್(ಇಂಟರ್‍ನೆಟ್ ವಿಳಾಸ) ಹೆಸರು ಟೈಪ್ ಮಾಡುವಾಗ ಆಗಿರುವ ಪ್ರಮಾದ ಇದಕ್ಕೆ ಕಾರಣವಾಗಿದೆ. ಅಮೆರಿಕದ ಮಿಲಿಟರಿ ʼಎಂಐಎಲ್' ಎಂಬ ಡೊಮೇನ್ ಹೊಂದಿದ್ದರೆ ಮಾಲಿ ಸರಕಾರದ ಡೊಮೇನ್ `.ಎಂಎಲ್' ಎಂಬುದಾಗಿದೆ. ಸೇನೆಯ ಸಿಬಂದಿ ವರ್ಗ, ಅಮೆರಿಕ ಮಿಲಿಟರಿಯೊಂದಿಗೆ ಕಾರ್ಯನಿರ್ವಹಿಸುವ ಟ್ರಾವೆಲ್ ಏಜೆಂಟರು, ಅಮೆರಿಕ ಗುಪ್ತಚರ ಪಡೆ, ಖಾಸಗಿ ಗುತ್ತಿಗೆದಾರರು ಕಳುಹಿಸಿರುವ ಇ-ಮೇಲ್‍ಗಳನ್ನು ತಪ್ಪು ವಿಳಾಸಕ್ಕೆ ರವಾನಿಸಲಾಗಿದೆ.
ಒಂದು ಇ-ಮೇಲ್‍ನಲ್ಲಿ ಅಮೆರಿಕದ ಸೇನಾಸಿಬಂದಿಗಳ ಮುಖ್ಯಸ್ಥ ಜನರಲ್ ಜೇಮ್ಸ್ ಮೆಕಾನ್ವಿಲ್ ಈ ವರ್ಷದ ಆರಂಭದಲ್ಲಿ ಇಂಡೊನೇಶ್ಯಾಕ್ಕೆ ನೀಡಿದ್ದ ಭೇಟಿಯ ವಿವರಗಳಿದ್ದವು. ಈ ಪ್ರಮಾದವನ್ನು ಮಾಲಿ ಸರಕಾರದ ಇಂಟರ್‍ನೆಟ್ ಡೊಮೇನ್ ಅನ್ನು ನಿರ್ವಹಿಸುವ ಜೊಹಾನೆಸ್ ಝರ್ಬಿಯರ್ ಗಮನಿಸಿ ಅಮೆರಿಕ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ. ಈ ವರ್ಷದ ಜನವರಿಯಿಂದ ಜುಲೈ 15ರವರೆಗೆ 1,17,000 ಇ-ಮೇಲ್‍ಗಳನ್ನು ಅಮೆರಿಕವು ಮಾಲಿಗೆ ತಪ್ಪಾಗಿ ರವಾನಿಸಿದೆ ಎಂದು ವರದಿ ಹೇಳಿದೆ.
ಟೈಪಿಂಗ್ ಪ್ರಮಾದವನ್ನು ಗಮನಿಸಿದ್ದು ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೆಂಟಗಾನ್(ಅಮೆರಿಕ ರಕ್ಷಣಾ ಪಡೆಯ ಕೇಂದ್ರ ಕಚೇರಿ) ವಕ್ತಾರ ಲೆ| ಕ| ಟಿಮ್ ಗಾರ್ಮನ್ ಹೇಳಿದ್ದಾರೆ.