ವಿ.ವಿ.ಯಲ್ಲಿ ಅಂದು ಜವಾನ.. ಇಂದು ಸಿಂಡಿಕೇಟ್ ಸದಸ್ಯ

ತನ್ನದೇ ಕಾಡುಗೊಲ್ಲ ಸಮುದಾಯದ ಸಾಂಸ್ಕೃತಿಕ ಗುರುತುಗಳನ್ನು ಜತನದಿಂದ ಸಂಗ್ರಹಿಸುವ ಕೆಲಸದಲ್ಲಿ ತೊಡಗಿರುವ ಮೋಹನ್ ಕುಮಾರ್ ಇದೀಗ ತಾನು ಜವಾನನಾಗಿ ತಲೆ ತಗ್ಗಿಸಿ ನಡೆದಿದ್ದ ವಿಶ್ವವಿದ್ಯಾನಿಲಯದಲ್ಲಿಯೇ ಎದೆ ಸೆಟೆಸಿ ನಡೆಯುತ್ತಾ ವಿಶ್ವವಿದ್ಯಾನಿಲಯಗಳ ಕಾರ್ಯಕಲಾಪಗಳನ್ನು ನಿರ್ಧರಿಸುವ ಜವಾಬ್ದಾರಿ ಇರುವ ಸಿಂಡಿಕೇಟ್ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಮೋಹನ್‌ರಂತಹ ಅಂಚಿನ ಸಮುದಾಯದ ಯುವಕನನ್ನು ಸಿಂಡಿಕೇಟಿಗೆ ಸದಸ್ಯರನ್ನಾಗಿಸಿದ ಕರ್ನಾಟಕ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನಾರ್ಹರು.

Update: 2024-09-03 05:40 GMT

ಕುಲಪತಿಗಳ ಕಚೇರಿಯ ಬಾಗಿಲ ಬಳಿ ನಿಂತಿದ್ದ ಆ ಹುಡುಗ ತೆಳ್ಳನೆಯ ಸಾಧಾರಣ ಬಟ್ಟೆ ತೊಟ್ಟ ಜವಾನ. ಯಾರಾದರೂ ಕುಲಪತಿಗಳ ಭೇಟಿಗೆ ಬಂದರೆ ಅವರಿಂದ ಸಂದರ್ಶನ ಚೀಟಿ ಪಡೆದು ವಿಧೇಯನಾಗಿ ಒಳಗೆ ಹೋಗಿ ಕುಲಪತಿಗಳ ಒಪ್ಪಿಗೆ ಪಡೆದು ಸಂದರ್ಶಕರನ್ನು ಒಳಬಿಡುತ್ತಿದ್ದ. ಸ್ವಲ್ಪ ಹೊತ್ತಿನ ನಂತರ ಅದೇ ವಿಶ್ವವಿದ್ಯಾನಿಲಯದಲ್ಲಿ ಕಾರ್ಯಕ್ರಮವೊಂದು ಆಯೋಜನೆಗೊಂಡಿತ್ತು. ಆ ಕಾರ್ಯಕ್ರಮಕ್ಕೆ ಜವಾನನಾಗಿ ಕುಲಪತಿಗಳ ಕಚೇರಿಯ ಬಾಗಿಲಲ್ಲಿ ನಿಂತ ಹುಡುಗನೇ ಕಾಡುಗೊಲ್ಲರ ಸೋಬಾನೆ ಗೀತೆಯ ಮೂಲ ಮಟ್ಟುಗಳನ್ನು ಎಲ್ಲರೂ ತಲೆತೂಗುವಂತೆ ಹಾಡಿದ. ಜಾನಪದ ವಿದ್ವಾಂಸರೆಲ್ಲ ಮೆಚ್ಚಿ ಹೊಗಳಿದರು. ಆ ದಿನ ಮಧ್ಯಾಹ್ನ ಸಿಂಡಿಕೇಟ್ ಮೀಟಿಂಗ್. ಹೀಗೆ ಹಾಡಿದ ಗಾಯಕ ಮತ್ತೆ ಜವಾನನಾಗಿ ಸಿಂಡಿಕೇಟ್ ಸದಸ್ಯರ ಬೇಕು ಬೇಡಗಳನ್ನು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದ. ಸಣ್ಣ ದನಿಯಲ್ಲಿ ಸದಸ್ಯರೊಬ್ಬರಿಗೆ ‘‘ನೋಡಿ ಸರ್ ನಮ್ಮನ್ನು ಪರ್ಮನೆಂಟ್ ಮಾಡುವ ಹಾಗೆ ಮಾಡಿ’’ ಎಂದು ಕೇಳಿಕೊಂಡಿದ್ದ. ಇದು ಜಾನಪದ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟನೆ. ಈ ಹುಡುಗನೇ ಇದೀಗ ಕರ್ನಾಟಕ ಸರಕಾರ ಜಾನಪದ ವಿವಿಗೆ ನಾಮನಿರ್ದೇಶನ ಮಾಡಿರುವ ಸಿಂಡಿಕೇಟ್ ಸದಸ್ಯ ಮೋಹನ್ ಕುಮಾರ್.

ಕಳೆದ 15 ವರ್ಷದಿಂದ ತುಂಬಾ ಆತ್ಮೀಯವಾಗಿ ಗೊತ್ತಿರುವ ಮೋಹನ್, ನಾನು ಜಾನಪದ ವಿವಿಗೆ ಹೋದಾಗಲೆಲ್ಲಾ ಆತ ಅತಿ ವಿನಯ, ಸಜ್ಜನಿಕೆ ತೋರುವುದನ್ನು ನೋಡಿ, ‘‘ನೀನು ಹೀಗೆ ಬಗ್ಗಿ ನಡೆಯಬೇಡ ಗೂನುಬೆನ್ನಿನವ ಆಗಿಬಿಟ್ಟೀಯ’’ ಎಂದು ಹೇಳುತ್ತಿದ್ದೆ. ಮೋಹನ್ ಒಂದು ನಗೆ ನಕ್ಕು ‘‘ಅಯ್ಯೋ ಬಿಡಿ ಸಾ’’ ಎಂದಷ್ಟೇ ಆತ್ಮೀಯವಾಗಿ ಪ್ರತಿಕ್ರಿಯಿಸುತ್ತಿದ್ದರು. ಯಾವ ವಿಶ್ವವಿದ್ಯಾನಿಲಯದಲ್ಲಿ ಕುಲಪತಿಗಳಿಗೂ, ಸಿಂಡಿಕೇಟ್ ಸದಸ್ಯರಿಗೂ ಜವಾನನಾಗಿದ್ದರೋ ಅಂತಹ ಮೋಹನ್ ಇದೀಗ ಇದೇ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯನಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಇದುವೇ ಸಂವಿಧಾನದ ಸೌಂದರ್ಯ.

ಮೋಹನ್, ತುಮಕೂರು ಜಿಲ್ಲೆ ಮತ್ತು ತಾಲೂಕಿನ ಬಳ್ಳಾವಿ ಓಬಳಿಯ ಸೋರೆಕುಂಟೆ ಸಮೀಪದ ತಂಬುಗನಹಟ್ಟಿ (ಬಿ.ಗೊಲ್ಲಳ್ಳಿ ಹಟ್ಟಿ)ಯ ಕಾಡುಗೊಲ್ಲರ ಹುಡುಗ. ಪಿ.ಗೊಲ್ಲಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಕೋರಾದ ಶ್ರೀ ಮಹಾಲಿಂಗೇಶ್ವರ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಓದಿ ಆನಂತರ ಇಂಗ್ಲಿಷ್ ಮೀಡಿಯಂನಲ್ಲಿ ಆಟೋಮೊಬೈಲ್ ಡಿಪ್ಲೊಮಾ ಓದಲು ಶುರುಮಾಡಿದವರು. ಇದ್ಯಾಕೋ ಮೋಹನ್‌ಗೆ ಕಷ್ಟವಾಗಿ ಅರ್ಧಕ್ಕೆ ಕೈಬಿಟ್ಟರು. ನಂತರ ಮೋಹನ್‌ರನ್ನು ಕೈಬೀಸಿ ಕರೆದದ್ದು ರಾಮನಗರದ ಜಾನಪದ ಲೋಕ. ಲೋಕದಲ್ಲಿನ ಜಾನಪದ ಸರ್ಟಿಫಿಕೇಟ್ ಕೋರ್ಸ್(2008) ಮತ್ತು ಜಾನಪದ ಡಿಪ್ಲೊಮಾ ಕೋರ್ಸ್(2009) ಪೂರೈಸಿದ್ದರು. ಇದಾದ ನಂತರ 2010ರಲ್ಲಿ ಸಾಣೆಹಳ್ಳಿಯಲ್ಲಿ ರಂಗಶಿಕ್ಷಣ ಡಿಪ್ಲೊಮಾ ಮಾಡಿದ್ದರು. ಹೀಗೆ ಜಾನಪದದ ಬಗೆಗೆ ಪ್ರಾಥಮಿಕ ಅರಿವು ಮತ್ತು ರಂಗಭೂಮಿಯ ತರಬೇತಿಯಿಂದ ತನ್ನದೇ ಅವ್ವನ ಹಾಡುಗಳು, ತನ್ನದೇ ಪ್ರದೇಶದ ಜನಸಂಸ್ಕೃತಿ ವಿಶಿಷ್ಟವಾಗಿ ಕಾಣತೊಡಗುತ್ತದೆ. ಇದೇ ಸಂದರ್ಭದಲ್ಲಿ ಜಾನಪದ ಅಕಾಡಮಿಯಲ್ಲಿ ಜಾನಪದ ನಿಘಂಟು ಯೋಜನೆ ನಡೆಯುತ್ತಿತ್ತು. ಆಗ ಮೋಹನ್ ನಿಘಂಟು ರಚನಾ ಕಾರ್ಯದಲ್ಲಿ ಕ್ಷೇತ್ರ ಸಹಾಯಕನಾಗಿ ಸೇರುತ್ತಾರೆೆ. ಇದು ಕರ್ನಾಟಕ ಜಾನಪದ ವಿವಿಯ ಆರಂಭದ ಬಗೆಗೆ ಚರ್ಚೆಗಳು ನಡೆಯುತ್ತಿದ್ದ ಕಾಲ. ಗೊ.ರು.ಚನ್ನಬಸಪ್ಪ ಅವರು ಜಾನಪದ ಅಕಾಡಮಿ ಅಧ್ಯಕ್ಷರಾಗಿದ್ದಾಗಲೇ ಜಾನಪದ ವಿವಿ ರಚನೆಗಾಗಿ ಒಂದು ಸಮಿತಿ ರಚಿಸಿದ್ದರು.

ಈ ಸಂಬಂಧ ಮೀಟಿಂಗ್‌ಗಳು ನಡೆಯುವ ಸಂದರ್ಭದಲ್ಲಿ ಮೋಹನ್ ಗೊಲ್ಲಸಮುದಾಯದ ಮೂಲ ಮಟ್ಟುಗಳನ್ನು ಹಾಡಿ ವಿದ್ವಾಂಸರ ಗಮನ ಸೆಳೆಯುತ್ತಾರೆ. ಜಾನಪದ ವಿವಿಯ ಆರಂಭಕ್ಕೆ ಬೆಂಗಳೂರಿನಲ್ಲಿ ಒಂದು ಪುಟ್ಟ ಕಚೇರಿ ಶುರುಮಾಡಿದರು. ಆಗ ಗೋರುಚ ಅವರು ‘‘ನೋಡಿ, ಜಾನಪದ ಮೂಲ ಮಟ್ಟುಗಳನ್ನು ಹಾಡುವ ಈ ಯುವಕ ಜಾನಪದ ವಿವಿಯಲ್ಲಿರಬೇಕು. ಈತನನ್ನು ಇಟ್ಕೊಳ್ಳಿ, ಯಾವುದಾದರೂ ಪೋಸ್ಟ್ ಕೊಡಿ’’ ಎನ್ನುತ್ತಾರೆ. ಆಗ ಜಾನಪದ ವಿವಿ ಗರಿಗಟ್ಟುತ್ತಿರುವ ಸಂದರ್ಭಗಳಲ್ಲಿಯೇ ಮೋಹನ್ ಹಾಡಿಕೆಯ ನೆಲಮೂಲದ ದನಿ ಬೆರೆಯುತ್ತದೆ.

ಜಾನಪದ ವಿವಿಗೆ ವಿಶೇಷ ಅಧಿಕಾರಿಯಾಗಿ ಬಂದ ಪ್ರೊ.ಅಂಬಳಿಕೆ ಹಿರಿಯಣ್ಣ ಅವರು ಜಾನಪದ ವಿವಿಗಾಗಿ ತಾತ್ಕಾಲಿಕವಾಗಿ ನೇಮಿಸಿಕೊಂಡ ಆರಂಭಿಕ ನೌಕರರಲ್ಲಿ ‘ಡಿ ದರ್ಜೆ ನೌಕರನನ್ನಾಗಿ ಮೋಹನ್‌ರನ್ನು ನೇಮಿಸಿಕೊಂಡರು. ವಿವಿ ಕಚೇರಿಗೆ ಬಂದ ವಿದ್ವಾಂಸರಿಗೆ ಟೀ ತರುವುದು, ಊಟ ತಂದು ಕೊಟ್ಟು ಉಪಚರಿಸುವ ಕೆಲಸ ಮಾಡುತ್ತಾ ಎಲ್ಲರ ಪ್ರೀತಿ ವಿಶ್ವಾಸ ಗಳಿಸುತ್ತಾರೆೆ.

ಆರಂಭದ ಮೂರು ತಿಂಗಳು ಜಾನಪದ ಅಕಾಡಮಿಯ ಒಂದು ಕೋಣೆಯಲ್ಲಿ ಜಾನಪದ ವಿವಿಯ ಕೆಲಸಗಳು ಆರಂಭವಾದವು. ಆನಂತರ ವಿಜಯನಗರದಲ್ಲಿ ಒಂದು ಕಚೆೇರಿ ಶುರುವಾಯಿತು. 2011ರಲ್ಲಿ ಜಾನಪದ ವಿವಿ ಶಿಗ್ಗಾವಿ ಸಮೀಪದ ಗೊಟಗೋಡಿ ಪಕ್ಕದ ಪ್ರವಾಸೋದ್ಯಮ ಇಲಾಖೆಯ ಕಟ್ಟಡಕ್ಕೆ ವರ್ಗಾವಣೆಯಾಯಿತು. ಸದಾನಂದಗೌಡರು ಮುಖ್ಯಮಂತ್ರಿ ಇರುವಾಗ ವಿವಿ ಉದ್ಘಾಟನೆಯಾಯಿತು. ಮೋಹನ್ ಡಿ ದರ್ಜೆ ನೌಕರನಾಗಿ ಗೊಟಗೋಡಿಯಲ್ಲಿಯೂ ಮುಂದುವರಿದರು. ಮುಂದೆ ಜಾನಪದ ವಿವಿನಲ್ಲಿ ಮೋಹನ್ ಅವರ ಮೂರು ಪುಸ್ತಕಗಳು ಪ್ರಕಟವಾಗುತ್ತವೆ. ‘ಕಾಡುಗೊಲ್ಲರ ಕೋಲಾಟದ ಪದಗಳು’(ಜಾನಪದ ಅಕಾಡಮಿ ಪುಸ್ತಕ ಬಹುಮಾನ ಪಡೆದ ಕೃತಿ, 2013) ಶ್ವೇತ ಮಡಪ್ಪಾಡಿ ಅವರ ಸಹ ಸಂಪಾದಕತ್ವದಲ್ಲಿ 2016ರಲ್ಲಿ ‘ಕಾಡುಗೊಲ್ಲರ ಬೆಡಗಿನ ಪದಗಳು’ ಕೃತಿ ಪ್ರಕಟವಾಗುತ್ತದೆ.

ಜಾನಪದ ವಿವಿ ಹಂಗಾಮಿ ಕುಲಪತಿ ಕೆ. ಪ್ರೇಮಕುಮಾರ್ ಅವರನ್ನು ಒಳಗೊಂಡಂತೆ ವಿವಿಯ ನಾಲ್ಕು ಜನ ಕುಲಪತಿಗಳ ಬಳಿ ಮೋಹನ್ ಜವಾನರಾಗಿದ್ದರು. ಡಿ.ಬಿ. ನಾಯಕ ಅವರು ಕುಲಪತಿಗಳಾಗಿದ್ದ ಸಂದರ್ಭದಲ್ಲಿ ಖಾಯಂ ನೌಕರಿಯೂ ಇಲ್ಲದೆ ಬದುಕಿನ ಅಭದ್ರತೆಯಲ್ಲಿದ್ದ ಮೋಹನ್ ಗಟ್ಟಿ ಧೈರ್ಯ ಮಾಡಿ 2017ರಲ್ಲಿ ವಿಶ್ವವಿದ್ಯಾನಿಲಯ ತೊರೆದರು. ಆನಂತರ ತನ್ನ ಹಾಡಿಕೆಯನ್ನೇ ವೃತ್ತಿಯನ್ನಾಗಿಸಿಕೊಳ್ಳುವ ಹುಡುಕಾಟ ಶುರು ಮಾಡಿದರು.

ಇಂಡಿಯಾ ಫೌಂಡೇಶನ್ ಫಾರ್ ದ ಆರ್ಟ್ಸ್ (ಐಎಫ್‌ಎ) ಜತೆ ಕೆಲಸ ಮಾಡಲು ಶುರುಮಾಡುವ ಈ ಮೂಲಕ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಮೂಲ ಜನಪದ ಮಟ್ಟುಗಳನ್ನು ಕಲಿಸುವ ಸಂಪನ್ಮೂಲ ವ್ಯಕ್ತಿಯಾಗಿ, ಕಲಾವಿದರಾಗಿ ಬದಲಾದರು. ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ಶಿಕ್ಷಕರಿಗೆ ಜಾನಪದ ಹಾಡುಗಾರಿಕೆ, ಕುಣಿತದ ಬಗ್ಗೆ ತರಬೇತಿ ನೀಡಿದ್ದಾರೆೆ. ನೂರಾರು ಶಾಲೆಗಳಲ್ಲಿ ಜಾನಪದ ಗೀತೆ ಮತ್ತು ನೃತ್ಯದ ತರಬೇತಿ ನೀಡಿದ್ದಾರೆ. ಐಎಫ್‌ಎ ಕಲಾಶಿಕ್ಷಣದ ಹಿರಿಯ ಅಧಿಕಾರಿಯಾದ ಕೃಷ್ಣಮೂರ್ತಿ ಅವರು ಮೋಹನ್ ಕುರಿತಂತೆ ‘‘ಎಲ್ಲರನ್ನೂ ಒಳಗೊಂಡು ಜಾನಪದ ಸಂಪನ್ಮೂಲಗಳನ್ನು ಜತನದಿಂದ ಕಾಪಾಡುವ ಮೋಹನ್ ಗುಣ ನನಗೆ ಬಹಳ ಇಷ್ಟ. ಇದೀಗ ನಮ್ಮ ಸಂಸ್ಥೆಯ ಸಂಶೋಧನಾ ಯೋಜನೆಗಾಗಿ ಕೆಲಸ ಮಾಡುತ್ತಿದ್ದಾರೆ’’ ಎನ್ನುತ್ತಾರೆ. ಮೋಹನ್, ಮುಂದೆ ಈವೆಂಟ್ ಮ್ಯಾನೇಜ್‌ಮೆಂಟ್‌ಗಳ ಜತೆ ಕೆಲಸ ಮಾಡಲು ಶುರುಮಾಡುತ್ತಾರೆ. ಸರಕಾರಿ/ಖಾಸಗಿ ಕಾರ್ಯಕ್ರಮಗಳಿಗೆ ಜಾನಪದ ಕಲಾತಂಡಗಳನ್ನು ನಿಯೋಜನೆ ಮಾಡುವ ಜವಾಬ್ದಾರಿ ವಹಿಸಿಕೊಂಡರು. ಕರ್ನಾಟಕ ಪ್ರೀಮಿರ್ ಲೀಗ್ (ಕೆಪಿಎಲ್) ಕ್ರಿಕೆಟ್‌ಗೆ ಚಿಯರ್ ಗರ್ಲ್ಸ್ ಬದಲಾಗಿ ಜನಪದ ಕಲಾವಿದರ ನಿಯೋಜನೆ ಮಾಡುವಲ್ಲಿ ಮೋಹನ್ ಶ್ರಮವಿದೆ.

ಮೋಹನ್ ಮುಂದೆ ಸಿನೆಮಾ ಕ್ಷೇತ್ರಕ್ಕೂ ಪ್ರವೇಶಿಸಿದ. ಶಿವರಾಜಕುಮಾರ್ ನಟರಾಗಿ ಅಭಿನಯಿಸಿರುವ ‘ವೇದ’ ಸಿನೆಮಾಕ್ಕೆ ಮೋಹನ್ ಹಾಡಿದ ಜುಂಜಪ್ಪನ ಹಾಡು ಹೆಚ್ಚು ಜನಪ್ರಿಯವಾಯಿತು. ಇಲ್ಲಿಂದ ಮೋಹನ್ ಬದುಕಿನ ಮತ್ತೊಂದು ಮಗ್ಗಲು ತೆರೆಯಿತು. ಈ ಮೊದಲು ‘ಅಂತರ್ಜಲ’ ಎನ್ನುವ ಸಿನೆಮಾಕ್ಕೆ ಹಾಡಿದ್ದರೂ ಅದು ಜನಪ್ರಿಯವಾಗಿರಲಿಲ್ಲ. ‘ವೇದ’ ಸಿನೆಮಾ ದೊಡ್ಡ ಹೆಸರು, ಜನಪ್ರಿಯತೆ ತಂದುಕೊಟ್ಟಿತು. ಈಗ ‘ರಾನಿ’ ಎನ್ನುವ ಸಿನೆಮಾಕ್ಕೂ, ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ‘ಸ್ವಪ್ನ ಮಂಟಪ’ ಎನ್ನುವ ಸಿನೆಮಾಕ್ಕೂ ಮೋಹನ್ ಹಾಡಿದ್ದಾರೆ. ವೇದ ಸಿನೆಮಾದ ಜನಪ್ರಿಯತೆ ಕಾಡುಗೊಲ್ಲ ಸಮುದಾಯದಲ್ಲಿ ಮೋಹನ್‌ರನ್ನು ಸೆಲೆಬ್ರಿಟಿಯನ್ನಾಗಿ ಬದಲಾಯಿಸಿತು. ನೂರಾರು ಗೊಲ್ಲರ ಹಟ್ಟಿಗಳಿಗೆ ಮೋಹನ್‌ರನ್ನು ಕರೆಸಿ ಹಾಡಿಸಿ ಸನ್ಮಾನ ಮಾಡಿ ಪ್ರೀತಿ ತೋರಿದ್ದಾರೆ.

ಈ ಜನಪ್ರಿಯತೆಯ ಪರಿಣಾಮ ಮೋಹನ್ 2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿಯೂ, 2024ರ ಲೋಕಸಭೆಯ ಚುನಾವಣೆಯಲ್ಲೂ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದರು. ಮೋಹನ್ ತನ್ನದೇ ಯೂಟ್ಯೂಬ್ ಚಾನೆಲ್ ತೆರೆದು ಜಾನಪದ ಮೂಲ ಮಟ್ಟುಗಳನ್ನು ಹಾಡತೊಡಗಿದ್ದಾರೆೆ. ಯೂಟ್ಯೂಬ್ ಮೂಲಕ ಲಕ್ಷಾಂತರ ಜನರನ್ನು ತಲುಪಿದ್ದಾರೆ. ತನ್ನದೇ ಕಾಡುಗೊಲ್ಲ ಸಮುದಾಯದ ಸಾಂಸ್ಕೃತಿಕ ಗುರುತುಗಳನ್ನು ಜತನದಿಂದ ಸಂಗ್ರಹಿಸುವ ಕೆಲಸದಲ್ಲಿಯೂ ತೊಡಗಿದ್ದಾರೆೆ. ಕಾಡುಗೊಲ್ಲ ಸಮುದಾಯ ಮೋಹನ್ ಕುಮಾರ್‌ರನ್ನು ತಮ್ಮ ಸಮುದಾಯದ ಹೀರೋ ಎನ್ನುವ ಹಾಗೆ ಸಂಭ್ರಮಿಸುತ್ತಿದೆ. ಈ ಬಗೆಯ ಬದುಕಿನ ತಿರುವುಗಳಲ್ಲಿ ಇದೀಗ ತಾನು ಜವಾನನಾಗಿ ತಲೆ ತಗ್ಗಿಸಿ ನಡೆದಿದ್ದ ವಿಶ್ವವಿದ್ಯಾನಿಲಯದಲ್ಲಿಯೇ ಎದೆ ಸೆಟೆಸಿ ನಡೆಯುತ್ತಾ ವಿಶ್ವವಿದ್ಯಾನಿಲಯಗಳ ಕಾರ್ಯಕಲಾಪಗಳನ್ನು ನಿರ್ಧರಿಸುವ ಜವಾಬ್ದಾರಿ ಇರುವ ಸಿಂಡಿಕೇಟ್ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಮೋಹನ್‌ರಂತಹ ಅಂಚಿನ ಸಮುದಾಯದ ಯುವಕನನ್ನು ಸಿಂಡಿಕೇಟಿಗೆ ಸದಸ್ಯರನ್ನಾಗಿಸಿದ ಕರ್ನಾಟಕ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನಾರ್ಹರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಅರುಣ್ ಜೋಳದಕೂಡ್ಲಿಗಿ

contributor

Similar News