ರಾಹುಲ್ ಮೇಲಿನ ಪ್ರಕರಣಗಳು ಬಿಜೆಪಿಗೇ ದುಬಾರಿಯಾಗುತ್ತಿದೆಯೇ?

Update: 2024-07-30 07:17 GMT

ಈ ದೇಶದಲ್ಲಿ ವಿಪಕ್ಷ ನಾಯಕನೊಬ್ಬ ತನ್ನ ವಿರುದ್ಧದ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ದೇಶದ ವಿವಿಧೆಡೆಯ ಕೋರ್ಟ್‌ಗಳಿಗೆ ಅಲೆದಾಡಬೇಕಾಗಿದೆ.

‘ಮೋದಿ’ ಎಂಬ ಹೆಸರು ತೆಗೆದುಕೊಂಡು ಮಾತಾಡಿದ್ದಕ್ಕೂ ಮಾನನಷ್ಟ ಮೊಕದ್ದಮೆಯನ್ನು ರಾಹುಲ್ ಎದುರಿಸಬೇಕಾಯಿತು. ಈ ಹಿಂದೆ ಬಿಜೆಪಿ ಅಧ್ಯಕ್ಷರಾಗಿದ್ದ ಮತ್ತು ಈಗ ಗೃಹಮಂತ್ರಿಯಾಗಿರುವ ಅಮಿತ್ ಶಾ ವಿಚಾರವಾಗಿ ಮಾತಾಡಿದ್ದಕ್ಕೂ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

ಆರೆಸ್ಸೆಸ್ ವಿಚಾರ ಮಾತಾಡಿದ್ದಕ್ಕೂ ಮೊಕದ್ದಮೆ ಎದುರಿಸಬೇಕಾಗಿದೆ. ಸಾವರ್ಕರ್ ಹೆಸರು ತೆಗೆದುಕೊಂಡದ್ದಕ್ಕೂ ಮೊಕದ್ದಮೆ ದಾಖಲಾಗಿದೆ.

ಹೆರಾಲ್ಡ್ ಕೇಸ್ ವಿಚಾರದಲ್ಲಿ ಎರಡು ದಿನಗಳ ಕಾಲ ರಾಹುಲ್ ವಿಚಾರಣೆ ನಡೆಸಿದ್ದ ಈ.ಡಿ. ಯಾಕೆ ರಾಹುಲ್ ಅವರನ್ನು ಬಂಧಿಸದೆ ಬಿಟ್ಟಿತು? ಯಾಕೆ ರಾಹುಲ್ ವಿರುದ್ಧದ ಪ್ರಕರಣಗಳನ್ನು ಮುಂದಕ್ಕೆ ಹಾಕುತ್ತಲೇ ಬರಲಾಗುತ್ತಿದೆ?

ಈ ಮೊದಲು ಮಾನನಷ್ಟ ಪ್ರಕರಣದಲ್ಲಿ ಹೈಕೋರ್ಟ್ ಕೊಟ್ಟಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

ರಾಹುಲ್ ಗಾಂಧಿಯವರ ರಾಜಕೀಯ ನಡೆಯನ್ನು ಕಂಡೇ ಬಿಜೆಪಿ ಮತ್ತು ಮೋದಿ ಸರಕಾರ ಭಯಗೊಂಡಿದೆಯೇ?

ರೈತರನ್ನು ಭೇಟಿಯಾಗುವ, ಕಟ್ಟಡ ಕಾರ್ಮಿಕರನ್ನು ಭೇಟಿಯಾಗುವ, ರೈಲು ಚಾಲಕರನ್ನು ಭೇಟಿಯಾಗುವ, ಅವರೆಲ್ಲರ ಕಷ್ಟ ಕೇಳುವ ರಾಹುಲ್ ರೀತಿಯೇ ಮೋದಿ ಸರಕಾರಕ್ಕೆ ಭಯ ತಂದಿದೆಯೆ?

ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸಂಬಂಧಿಸಿ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿರುವ ಕೋರ್ಟ್‌ಗೆ ಶುಕ್ರವಾರ ಹಾಜರಾಗಿದ್ದ ರಾಹುಲ್ ಅಲ್ಲಿಂದ ಲಕ್ನೋಗೆ ವಾಪಸಾಗುವಾಗ ದಾರಿಮಧ್ಯೆ ಚಮ್ಮಾರನೊಬ್ಬನ ಅಂಗಡಿಗೆ ಭೇಟಿ ನೀಡಿ ಮಾತಾಡಿದರು. ಚಮ್ಮಾರ ರಾಮ್ ಚೇತ್ ಬಳಿ ಆತನ ಕುಟುಂಬದ ಸಮಸ್ಯೆಗಳನ್ನು ಆಲಿಸಿದರು. ರಾಹುಲ್ ಅವರ ಇಂಥ ನಡೆಯೇ ಬಿಜೆಪಿಯವರ ಭಯಕ್ಕೆ ಕಾರಣವಾಗುತ್ತಿದೆಯೆ?

ದೇಶದ ಸುಮಾರು 12 ನಗರಗಳಲ್ಲಿ ತಮ್ಮ ವಿರುದ್ಧದ ಪ್ರಕರಣದ ವಿಚಾರಣೆ ಸಂಬಂಧ ರಾಹುಲ್ ಓಡಾಡಬೇಕಿರುವುದರಿಂದ, ಅಲ್ಲೆಲ್ಲ ಅವರು ಜನರನ್ನು ಆಕರ್ಷಿಸುವುದು ಬಿಜೆಪಿಯ ಪಾಲಿಗೆ ಹೊಸ ತಲೆನೋವಾಗಿಬಿಟ್ಟಿದೆ.

ಪ್ರತೀ ಪ್ರಕರಣದ ಹಿನ್ನೆಲೆಯಲ್ಲಿ ಅವರು ಬೇರೆ ಬೇರೆ ನಗರಗಳಿಗೆ ಭೇಟಿ ಕೊಡುತ್ತಿರುವುದರಿಂದ, ಹೋದಲ್ಲೆಲ್ಲ ಜನರು ಅವರ ಸುತ್ತುವರಿಯುವುದು ಬಿಜೆಪಿಯವರಲ್ಲಿ ತಳಮಳ ಮೂಡಿಸಿದ ಹಾಗಿದೆ.

ಅಲ್ಲಿ ಜನರು, ರಾಹುಲ್ ಎದುರಿಸುತ್ತಿರುವ ಮಾನನಷ್ಟ ಪ್ರಕರಣದ ಬಗ್ಗೆಯೂ ಕೇಳಬಹುದು. ಯಾರ ಮಾನಹಾನಿಯಾಗಿದೆ ಎಂದೂ ಕೇಳಬಹುದು.

ಬಿಜೆಪಿ ಸರಕಾರವಿರುವ ಉತ್ತರ ಪ್ರದೇಶದಲ್ಲಿನ ಸುಲ್ತಾನ್‌ಪುರ ಆಯಿತು. ಇದೇ ರೀತಿ, ಅಸ್ಸಾಮಿನ ಕಾಮರೂಪ್ ಇರಬಹುದು, ಮಹಾರಾಷ್ಟ್ರದ ಭಿವಂಡಿ ಇರಬಹುದು, ಬಾಂದ್ರಾ, ಥಾಣೆ ಇರಬಹುದು, ಪುಣೆ ಇರಬಹುದು, ಬಿಹಾರದ ಪಾಟ್ನಾ ಇರಬಹುದು, ಗುಜರಾತ್‌ನ ಅಹಮದಾಬಾದ್, ಸೂರತ್ ಇರಬಹುದು, ಜಾರ್ಖಂಡ್‌ನ ರಾಂಚಿ ಇರಬಹುದು, ಬೆಂಗಳೂರು, ದಿಲ್ಲಿ ಇರಬಹುದು, ಅಲ್ಲೆಲ್ಲ ರಾಹುಲ್ ವಿರುದ್ಧ ಪ್ರಕರಣಗಳಿವೆ.

ದಿಲ್ಲಿಯಿಂದ 700 ಕಿ.ಮೀ. ದೂರದ ಸುಲ್ತಾನ್‌ಪುರಕ್ಕೆ ಹೋಗಿ 16 ನಿಮಿಷದ ವಿಚಾರಣೆಯಲ್ಲಿ ಹಾಜರಾಗಿ ತಾವು ನಿರ್ದೋಷಿ ಎಂಬುದನ್ನು ನ್ಯಾಯಾಲಯದ ಎದುರು ಹೇಳಿದ್ದಾರೆ ರಾಹುಲ್. ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನೂ ನಿರಾಕರಿಸಿದ್ದಾರೆ.

‘‘ನನ್ನ ವಿರುದ್ಧ ಎಷ್ಟು ಕೇಸುಗಳನ್ನಾದರೂ ಹಾಕಿ. ನಾನು ಸೋಲೊಪ್ಪುವುದಿಲ್ಲ. ನಾನು ಬಿಜೆಪಿಗಾಗಲೀ ಆರೆಸ್ಸೆಸ್‌ಗಾಗಲೀ ಹೆದರುವುದಿಲ್ಲ’’ ಎಂದು ಚುನಾವಣೆ ಪ್ರಚಾರದ ವೇಳೆ ರಾಹುಲ್ ಹೇಳಿದ್ದರು.

ರಾಹುಲ್ ವಿರುದ್ಧದ ಪ್ರಕರಣಗಳಲ್ಲಿ ವಿಚಾರಣೆ ಮುಂದಕ್ಕೆ ಹಾಕುತ್ತಲೇ ಬರಲಾಗುತ್ತಿದೆ. ಸುಲ್ತಾನ್‌ಪುರ ಕೋರ್ಟ್‌ನಲ್ಲಿಯೂ ಆಗಸ್ಟ್ 12ಕ್ಕೆ ಮುಂದಿನ ವಿಚಾರಣೆ ಗೊತ್ತುಪಡಿಸಲಾಗಿದೆ.

ಆದರೆ ಲಕ್ನೊದಿಂದ ಸುಲ್ತಾನ್‌ಪುರಕ್ಕೆ ಹೋಗುವಾಗ ಮಾತ್ರವಲ್ಲದೆ, ಕೋರ್ಟ್ ಹೊರಗೂ ಜನರು ರಾಹುಲ್‌ಗಾಗಿ ಕಾದಿದ್ದರು. ರಾಹುಲ್ ಅವರನ್ನು ಹೋದಲ್ಲೆಲ್ಲ ಜನರು ಹೀಗೆ ಸುತ್ತುವರಿಯುವುದು ಕಾಂಗ್ರೆಸ್ ಪಾಲಿನ ಬಲವಾಗುತ್ತಿದೆ.

ಕಾರ್ಯಕರ್ತರ ದಂಡೇ ರಾಹುಲ್ ಅವರಿಗಾಗಿ ಹೀಗೆ ಕಾಯುತ್ತಿದ್ದರೆ, ಅವರ ವಿರುದ್ಧ ರಾಜಕೀಯ ದುರುದ್ದೇಶದಿಂದ ಪ್ರಕರಣಗಳನ್ನು ಹೂಡಲಾಗಿದೆ ಎಂಬ ವಿಚಾರವೂ ಜನರ ನಡುವೆ ಚರ್ಚೆಗೆ ಬರುತ್ತಿರುತ್ತದೆ.

ರಾಹುಲ್ ಹೋದಲ್ಲೆಲ್ಲ ಜನಸಾಮಾನ್ಯರೂ ಅವರನ್ನು ಕಾಣಲು ಬಯಸುವುದು, ಭಾರತ ಜೋಡೊ ಯಾತ್ರೆ ಮತ್ತು ಭಾರತ ಜೋಡೊ ನ್ಯಾಯ ಯಾತ್ರೆಯ ಬಳಿಕ ಹೆಚ್ಚಾಗಿದೆ.

ರಾಹುಲ್ ವಿರುದ್ಧದ ಪ್ರಕರಣಗಳೆಲ್ಲವೂ ಬಿಜೆಪಿಯವರೇ ಹೂಡಿರುವ ಪ್ರಕರಣಗಳಾಗಿವೆ. ತನ್ನ ರಾಜಕೀಯಕ್ಕಾಗಿ ಮೋದಿ ಸೇನೆಯನ್ನೂ ಬಳಸಿಕೊಳ್ಳುವುದು ಒಂದೆಡೆ ನಡೆದಿರುವಾಗ. ರಾಹುಲ್ ಮಾತ್ರ ಕೇವಲ ಅಧಿಕಾರಕ್ಕಾಗಿ ರಾಜಕೀಯ ಮಾಡದೆ, ಜನರಿಗೆ ಸಿಗಬೇಕಿರುವ ನ್ಯಾಯ ಮತ್ತು ಸಮಾನತೆಗಾಗಿ ಹೋರಾಡುತ್ತಿದ್ದಾರೆ.

ಮತ್ತು ಈ ಎರಡೂ ಬಗೆಯ ರಾಜಕಾರಣಗಳು ಜನರ ಗಮನಕ್ಕೆ ಬರುತ್ತಿರುವಾಗ, ಬಿಜೆಪಿಯವರು ಹೂಡಿರುವ ಪ್ರಕರಣಗಳ ಕಾರಣದಿಂದ ರಾಹುಲ್ ಕೋರ್ಟ್ ಅಲೆಯುತ್ತಿರುವುದು ಜನರಿಗೂ ಮತ್ತೆ ಮತ್ತೆ ಗೊತ್ತಾಗುತ್ತಿದೆ.

ವಿಧಾನ ಸಭಾ ಚುನಾವಣೆ ನಡೆಯಲಿರುವ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಕೇಸ್ ಕಾರಣಕ್ಕೆ ರಾಹುಲ್ ಹೋಗಬೇಕಿದೆ. ಅದು ಅವರಿಗೆ ಜನರ ಜೊತೆಗೆ ಬೆರೆಯುವ ಅವಕಾಶವನ್ನೂ ಒದಗಿಸಲಿದೆ. ರಾಹುಲ್ ಹೀಗೆ ಜನರಿಗೆ ಹೆಚ್ಚು ಹತ್ತಿರವಾದಷ್ಟೂ ಬಿಜೆಪಿಗೆ ಸಂಕಟ ಕಾಡಲಿದೆ.

ಒಂದು ಕಡೆ ಮಡಿಲ ಮೀಡಿಯಾ ಮೂಲಕವೇ ಎಲ್ಲವನ್ನೂ ನಿಭಾಯಿಸಿ ಜನರಿಂದ ಬಹಳ ದೂರ ಇರುವ ಮೋದಿ, ಇನ್ನೊಂದೆಡೆ ಜನರ ನಡುವೆಯೇ ಓಡಾಡುವ ರಾಹುಲ್ ಗಾಂಧಿ. ಇವರಿಬ್ಬರ ನಡುವಿನ ವ್ಯತ್ಯಾಸವನ್ನು ದೇಶದ ಜನ ಗಮನಿಸುತ್ತಿದ್ದಾರೆ.

ಮೋದಿ ಸರಕಾರಕ್ಕೆ, ಬಿಜೆಪಿಗೆ ಈಗ ನಡುಕ ಶುರುವಾಗಿರುವುದಕ್ಕೆ ಇದೇ ಕಾರಣ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಎನ್. ಯಾದವ್

contributor

Similar News