ಕೃತಕ ಬುದ್ಧಿಮತ್ತೆ ಮತ್ತು ಮಾನವ ಹಕ್ಕುಗಳು
ಎಐ ತಂತ್ರಜ್ಞಾನವು ಅನೇಕ ಕ್ಷೇತ್ರಗಳಲ್ಲಿ ಪ್ರಮುಖ ಪ್ರಯೋಜನಗಳನ್ನು ತರುತ್ತದೆ ಎಂಬುದೇನೋ ನಿಜ. ಆದರೆ ನೈತಿಕ ಚೌಕಟ್ಟಿನ ರಕ್ಷಣೆಯಿಲ್ಲದೆ, ಇದು ಸಮಾಜದಲ್ಲಿ ಪಕ್ಷಪಾತಗಳನ್ನು ಮತ್ತು ತಾರತಮ್ಯಗಳನ್ನು ಉಂಟುಮಾಡುವ ಅಪಾಯವಿದೆ. ಎಐನ ಮೂಲಕ ಸೃಜಿಸಿದ ಕೃತಕ ಮಾಹಿತಿ, ಚಿತ್ರ, ಧ್ವನಿ, ವೀಡಿಯೊಗಳ ಮೂಲಕ ಸಮಾಜದಲ್ಲಿ ಜಾತಿ, ಧರ್ಮ, ಜನಾಂಗೀಯ ವಿಭಜನೆಗಳನ್ನು ಉಂಟುಮಾಡಲು ಸಾಧ್ಯವಿರುವುದರಿಂದ ಇದು ಮೂಲಭೂತ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗೆ ಬೆದರಿಕೆ ಹಾಕುತ್ತದೆ. ವ್ಯಕ್ತಿಯ ಘನತೆಯು ಮನುಷ್ಯನ ಸಾಮಾಜಿಕ ಜೀವನದ ಅತಿ ಮುಖ್ಯ ಅಂಶವಾಗಿದ್ದು ಇದಕ್ಕೆ ಭಂಗ ತರುವ ಯಾವುದೇ ತಂತ್ರಜ್ಞಾನ ಮನುಷ್ಯ ವಿರೋಧಿ ಆಗಿಬಿಡುತ್ತದೆ. ಹಾಗಾಗಿಯೇ ಕೃತಕ ಬುದ್ಧಿಮತ್ತೆಯ ಕುರಿತ ನೈತಿಕ ನಿಯಮಾವಳಿಗಳು ಇಂದು ಬೇರೆ ಯಾವುದೇ ಕ್ಷೇತ್ರಕ್ಕಿಂತ ಹೆಚ್ಚು ಅಗತ್ಯವಾಗಿದೆ.
ಇದು ಕೃತಕ ಬುದ್ಧಿಮತ್ತೆಯ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಕಾಲ. ದಿನೇ ದಿನೇ ಎಐ ಬಳಕೆಯು ತೀವ್ರವಾಗುತ್ತಿದ್ದು, ಜಗತ್ತು ಹಿಂದೆ ಹೋಗಲಾರದಷ್ಟು ದೂರಕ್ಕೆ ಸಾಗಿದೆ. ಈ ಆಧುನಿಕ ತಂತ್ರಜ್ಞಾನವು ಜಾಗತಿಕವಾಗಿ ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಅಷ್ಟೇ ಅಲ್ಲದೆ ಮನೆ, ಮನೋರಂಜನೆ, ಸಾರ್ವಜನಿಕ ಮತ್ತು ಸರಕಾರೇತರ ವಲಯದಲ್ಲಿ ಈಗಾಗಲೇ ವ್ಯಾಪಕವಾದ ಸೇವೆಗಳನ್ನು ಒದಗಿಸುತ್ತಿದೆ. ಸುರಕ್ಷತಾ ವ್ಯವಸ್ಥೆಗಳು, ಕಾನೂನು ಸಲಹೆ, ಮೂಲಸೌಕರ್ಯ, ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡುತ್ತಿದೆ. ಇದಲ್ಲದೆ ಇತ್ತೀಚೆಗೆ ಡೀಫ್ ಫೇಕ್ ತಂತ್ರಜ್ಞಾನದ ಮೂಲಕ ಮಾರ್ಪಡಿಸಲಾದ ಚಿತ್ರ, ಧ್ವನಿ ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಎಐನ ದುರ್ಬಳಕೆಗಳ ಕುರಿತು ಸಾಮಾನ್ಯರಿಗೂ ಸಹ ಅರಿವು ಮೂಡುತ್ತಿದೆ.
ನಾವು ದಿನನಿತ್ಯ ನೋಡುವ ಮುಖ ಗುರುತಿಸುವಿಕೆ ವ್ಯವಸ್ಥೆ, ವ್ಯಕ್ತಿಯ ನಡಿಗೆಯ ವಿಶ್ಲೇಷಣೆ, ಬಯೋಮೆಟ್ರಿಕ್ಸ್ ಮುಂತಾದವುಗಳು ಕೃತಕ ಬುದ್ಧಿಮತ್ತೆ ಅಭಿವೃದ್ಧಿಪಡಿಸಿದ ಉತ್ಪನ್ನಗಳ ಉದಾಹರಣೆಗಳಾಗಿವೆ. ಇದು ಕಂಪ್ಯೂಟರ್ ವಿಜ್ಞಾನದ ಒಂದು ಶಾಖೆಯಾಗಿದ್ದು, ಸಾಮಾನ್ಯವಾಗಿ ಮಾನವ ಬುದ್ಧಿವಂತಿಕೆಯ ಅಗತ್ಯವಿರುವ ಕಾರ್ಯಗಳನ್ನು ಸ್ವಯಂನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್ ಯಂತ್ರಗಳನ್ನು ನಿರ್ಮಿಸಲು ಕಾಳಜಿ ವಹಿಸುತ್ತದೆ.
ಈ ನಮ್ಮ ಕಾಲವನ್ನು ನಾಲ್ಕನೇ ಕ್ರಾಂತಿಯ ಕಾಲವೆಂತಲೂ, ಸಮಾಜವನ್ನು ಅಲ್ಗರಿದಮಿಕ್ ಸೊಸೈಟಿ ಅಥವಾ ಡಿಜಿಟಲ್ ಸೊಸೈಟಿ ಎಂದೂ ಪರಿಗಣಿಸುತ್ತಾರೆ. ಏಕೆಂದರೆ ಎಐ ತಂತ್ರಜ್ಞಾನದ ಬಳಕೆಯು ಸಾಂಪ್ರದಾಯಿಕವಾಗಿ ಬಳಕೆಯಲ್ಲಿದ್ದ ರೆಫ್ರಿಜರೇಟರ್‌ಗಳು, ಟೆಲಿವಿಷನ್‌ಗಳು ಮತ್ತು ಸ್ಪೀಕರ್ ಮೊದಲಾದವುಗಳಲ್ಲೂ ಸೇರಿ ಈಗ ಅವು ಸಹ ಬುದ್ಧಿವಂತವಾಗಿವೆ. ಈಗಿನ ಎಐ ಆಧಾರಿತ ಯಂತ್ರಗಳು ಮನೆ ಸ್ವಚ್ಛಗೊಳಿಸಬಹುದು, ಅಡುಗೆ ಮಾಡಬಹುದು, ಸಂಭಾಷಣೆಗಳನ್ನು ನಡೆಸಬಹುದು, ಕೇಳಿದ್ದನ್ನು ಬರೆದು ಕೊಡಬಹುದು, ಮನರಂಜನೆ ನೀಡಬಹುದು, ಭದ್ರತಾ ವ್ಯವಸ್ಥೆಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಸಹ ನಿಯಂತ್ರಿಸಬಹುದು.
ಎಐ ಅಗಾಧವಾಗಿ ಪ್ರಯೋಜನಕಾರಿಯಾಗುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಈಗಾಗಲೇ ನಮಗೆ ತಿಳಿದಿದೆ. ಇದು ನೀತಿ ನಿರೂಪಣೆಗೆ, ಆಡಳಿತ ಸುಧಾರಣೆಗೆ ಬೇಕಾದ ಕಾರ್ಯತಂತ್ರಗಳಿಗೆ ಮುನ್ನೋಟ ಕೊಡುವುದಕ್ಕೆ, ಜ್ಞಾನ ಮತ್ತು ಮಾಹಿತಿಯನ್ನು ಮತ್ತಷ್ಟು ಪ್ರಜಾಪ್ರಭುತ್ವೀಕರಣಗೊಳಿಸುವುದಕ್ಕೆ, ವೈಜ್ಞಾನಿಕ ಪ್ರಗತಿಯನ್ನು ಹೆಚ್ಚಿಸುವುದಕ್ಕೆ ಉಪಯುಕ್ತವಾಗಿದೆ ಎಂದೇ ಈಗ ಪರಿಗಣಿಸಲಾಗಿದೆ.
ವಾಣಿಜ್ಯಿಕವಾಗಿ, ಈ ತಂತ್ರಜ್ಞಾನದ ಬಳಕೆ ಗ್ರಾಹಕರ ಆರ್ಥಿಕ ನಡವಳಿಕೆಯನ್ನು ತಿಳಿದುಕೊಳ್ಳಲು ಮತ್ತು ಸೈಬರ್ ಕಳ್ಳರ ದಾಳಿಯ ಅಪಾಯವನ್ನು ಸಹ ತಗ್ಗಿಸಲು ಸಹಾಯ ಮಾಡಿದೆ. ವಿವಿಧ ಮಾರುಕಟ್ಟೆಗಳಲ್ಲಿ ಅಂತರ್ಗತವಾಗಿರುವ ದೋಷಗಳನ್ನು ಕಡಿಮೆ ಮಾಡುತ್ತಿದೆ ಮತ್ತು ಮುಂದಿನ ವರ್ಷಗಳಲ್ಲಿ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯಗಳ ಚಿಕಿತ್ಸೆಯಲ್ಲೂ ಇವುಗಳ ಬಳಕೆ ಗಣನೀಯವಾಗಲಿದೆ.
ಎಐ ಮನುಷ್ಯನ ಮೇಲೆ ಧನಾತ್ಮಕವಷ್ಟೇ ಅಲ್ಲದೆ ಋಣಾತ್ಮಕ ಪ್ರಭಾವಗಳನ್ನೂ ಬೀರುವಲ್ಲಿ, ಕಾನೂನು ವಿರೋಧಿ ಚಟುವಟಿಕೆಗಳಿಗೂ ಕಾರಣವಾಗುವಲ್ಲಿ ಸಮರ್ಥವಾಗಿದೆ. ಕೆಲವು ತಿಂಗಳುಗಳ ಹಿಂದೆ ಪೆಗಾಸಸ್ ಎಂಬ ಕೃತಕ ಬುದ್ಧಿಮತ್ತೆಯ ತಂತ್ರಾಂಶವನ್ನು ಬಳಸಿ ಅನೇಕ ಗಣ್ಯರ ಟೆಲಿಫೋನ್ ಮತ್ತು ಗ್ಯಾಜೆಟ್‌ಗಳ ದತ್ತಾಂಶಗಳನ್ನು ಕದ್ದ ಕುರಿತು ಆರೋಪಗಳು ಬಂದದ್ದು ನಿಮಗೆ ನೆನಪಿರಬಹುದು. ಹಾಗೆಯೇ ಅಮೆರಿಕದಂತಹ ದೇಶಗಳಲ್ಲಿ ಮುಖ ಗುರುತಿಸುವ ತಂತ್ರಜ್ಞಾನವು ಕರಿಯ ಮತ್ತು ಕಂದು ಬಣ್ಣದವರ ಕುರಿತು ಪೂರ್ವಗ್ರಹಪೀಡಿತವಾಗಿ ವರ್ತಿಸಿ ಬಿಳಿಯರ ಪರವಾಗಿ ಸದಭಿಪ್ರಾಯ ವ್ಯಕ್ತಪಡಿಸಿದ, ಜನಾಂಗೀಯ ತಾರತಮ್ಯ ಎಸಗಿದ ಘಟನೆಗಳು ವರದಿಯಾಗಿದೆ. ಸುಳ್ಳು ಸುದ್ದಿ, ಸುಳ್ಳು ಚಿತ್ರಗಳನ್ನು ನಿರ್ಮಿಸಿ ಸಮಾಜದಲ್ಲಿ ಕ್ಷೋಭೆಯನ್ನುಂಟು ಮಾಡಿದ ಪ್ರಕರಣಗಳೂ ಕಣ್ಣಮುಂದಿವೆ. ಕೋವಿಡ್ ನಿಯಮವಳಿಗಳು ಜಾರಿಯಲ್ಲಿದ್ದಾಗ ರೋಗಿಗಳನ್ನು ಜಿಪಿಎಸ್ ಟ್ರ್ಯಾಕಿಂಗ್ ಮೂಲಕ ಕಣ್ಗಾವಲಿನಲ್ಲಿ ಇಟ್ಟಿದ್ದು ಸಹ ಬಹಳಷ್ಟು ಚರ್ಚೆಗೆ ಒಳಗಾಯಿತು. ಆಗ ಇದು ರಾಷ್ಟ್ರೀಯ ತುರ್ತು ಮತ್ತು ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ಕ್ರಮ ಎಂದು ಸಮರ್ಥಿಸಿದರೂ, ತಂತ್ರಜ್ಞಾನವನ್ನು ಬಳಸಿ ವ್ಯಕ್ತಿಗಳನ್ನು ಸತತ ಕಣ್ಗಾವಲಿನಲ್ಲಿ ಇರಿಸಿದಾಗ ಮನುಷ್ಯನ ಮೂಲಭೂತ ಹಕ್ಕಾದ ಖಾಸಗಿತನದ ಹಕ್ಕಿಗೆ ಅಡ್ಡಿ ಉಂಟಾಗುತ್ತದೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ಎಐ ಮತ್ತು ಅದರ ಉತ್ಪನ್ನಗಳನ್ನು ಬಳಕೆಗಾಗಿ ಅಭಿವೃದ್ಧಿಪಡಿಸುವ ಖಾಸಗಿ ಉದ್ದಿಮೆದಾರರುಗಳಲ್ಲಿ ಇರಬೇಕಾದ ನೈತಿಕ ಮತ್ತು ತಾತ್ವಿಕತೆಗಳ ಕುರಿತು ಹಲವಾರು ಚರ್ಚೆಗಳು ಹುಟ್ಟಿಕೊಂಡಿವೆ.
ಸಮಾಜವಿಜ್ಞಾನಿಗಳನೇಕರು ಎಐನ ಆಲ್ಗರಿದಮ್‌ಗಳು ಈಗಾಗಲೇ ಬೇರೂರಿರುವ ಸಾಮಾಜಿಕ ಅಸಮಾನತೆಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಸಾಧ್ಯತೆ ಕಂಡುಬರುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕೃತಕ ಬುದ್ಧಿಮತ್ತೆಯ ಸಂಶೋಧನೆಗಳು ಮತ್ತು ಇದರ ಹೊಸ ಅನ್ವೇಷಣೆಗಳು ಹೆಚ್ಚಿನ ಬಂಡವಾಳವನ್ನು ಬಯಸುವುದರಿಂದ ಖಾಸಗಿ ಸಂಸ್ಥೆಗಳು ಇದರಲ್ಲಿ ಮುಂದಿದ್ದು, ಶ್ರೀಮಂತ ರಾಷ್ಟ್ರಗಳು ತಮ್ಮ ದೇಶದ ನಾಗರಿಕ ಸೌಲಭ್ಯ, ಆರೋಗ್ಯ ಸೌಲಭ್ಯ, ಸಂವಹನ, ಸಂಚಾರ ಮೊದಲಾದ ಎಲ್ಲಾ ಕ್ಷೇತ್ರಗಳಲ್ಲೂ ಎಐ ಅನ್ನು ಬಳಸಿಕೊಂಡು ಜೀವನವನ್ನು ಸುಗಮಗೊಳಿಸಲು ಮುಂದಾಗಿವೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ಅಥವಾ ಬಡ ದೇಶಗಳು ಈ ಎಲ್ಲಾ ತಾಂತ್ರಿಕ ನಾವೀನ್ಯತೆಯನ್ನು ಅಳವಡಿಸಿಕೊಳ್ಳಲಾಗದೆ ಇವುಗಳ ಬಳಕೆಯಲ್ಲಿ, ಸಂಶೋಧನೆಯಲ್ಲಿ ಹಿಂದಿರುವುದರಿಂದ ವಿವಿಧ ದೇಶಗಳ ಮಧ್ಯೆ, ವಿವಿಧ ಸಮುದಾಯಗಳ ನಡುವೆ ಅಸಮಾನತೆ ಉಂಟಾಗುತ್ತಿದೆ.
ಮುಂದೆ ಈ ತಂತ್ರಜ್ಞಾನ ವಿವಿಧ ಕ್ಷೇತ್ರಗಳಲ್ಲಿ ಹೊಸ ಬಗೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದರೂ, ಬಹುತೇಕ ವೃತ್ತಿಗಳಲ್ಲಿ ಮಾನವ ಹಸ್ತಕ್ಷೇಪವನ್ನು ಸಹ ಕಡಿಮೆ ಮಾಡುತ್ತದೆ. ಈಗಾಗಲೇ ಅಡಿದಾಸ್‌ನಂತಹ ಅನೇಕ ಬೃಹತ್ ಉದ್ದಿಮೆಗಳು ತಮ್ಮ ಕಾರ್ಖಾನೆಗಳನ್ನು ಸಂಪೂರ್ಣವಾಗಿ ಎಐ ಆಧಾರಿತವಾಗಿ ಯಾಂತ್ರೀಕರಣಗೊಳಿಸಿವೆ. ಈ ಬಗೆಯು ಬದುಕುವ ಹಕ್ಕಿಗೆ ಸಂಬಂಧಿಸಿದಂತಹ ಡಿಜಿಟಲ್ ವಿಭಜನೆಯನ್ನು ಉಂಟುಮಾಡುವುದರಿಂದ, ಕೆಲವು ವರ್ಗಗಳು ಉತ್ತಮವಾಗಿ ಬದುಕಲು ಉದ್ಯೋಗ, ಜೀವನ ಸೌಕರ್ಯ ರೂಪಿಸಿಕೊಳ್ಳಲು ಸಾಧ್ಯವಾದರೆ, ಸಮಾಜದ ಬಹುತೇಕ ವರ್ಗಗಳು ಉದ್ಯೋಗಗಳನ್ನು ಕಳೆದುಕೊಂಡು ಅವರ ದುಡಿಯುವ ಹಕ್ಕು ನಶಿಸುವುದು. ಇದರಿಂದ ಈಗಾಗಲೇ ಸಮಾಜದಲ್ಲಿ ಬೇರೂರಿರುವ ಆರ್ಥಿಕ, ಸಾಮಾಜಿಕ ಅಸಮಾನತೆಗಳು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಸಮಾಜದಲ್ಲಿ ಯಾರಿಗೆ ಜನ್ಮತಃ ಆಧುನಿಕತೆಯ, ಶ್ರೀಮಂತಿಕೆಯ, ತಂತ್ರಜ್ಞಾನ ಬಳಕೆಯ ಸೌಲಭ್ಯಗಳು ಲಭಿಸಿರುತ್ತದೆಯೋ ಅವರಿಗೆ ಮಾತ್ರ ಕೃತಕ ಬುದ್ಧಿಮತ್ತೆಯ ಉಪಯೋಗಗಳು ದೊರೆತು, ಯಾರಿಗೆ ಈ ಎಲ್ಲಾ ಸೌಕರ್ಯಗಳು ಲಭ್ಯ ಇಲ್ಲವೋ ಅವರು ಇವುಗಳಿಂದ ದೂರ ಉಳಿಯುವುದರಿಂದ ಅಸಮಾನತೆಯ ಅಂತರ ಹೆಚ್ಚುತ್ತಲೇ ಇರುತ್ತದೆ. ಇದರಿಂದ ಜಗತ್ತಿಗೆ, ದೇಶಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳಲ್ಲಿ ಉಳ್ಳವರ, ತಾಂತ್ರಿಕವಾಗಿ ಮುಂದುವರಿದವರ ನಿರ್ಧಾರಗಳೇ ಮೇಲುಗೈ ಪಡೆದು ಈ ದೆಸೆಯಲ್ಲಿ ಇನ್ನೂ ಪ್ರಗತಿಯನ್ನು ಸಾಧಿಸದ ಅಥವಾ ಬಳಕೆಗೆ ತೆರೆದುಕೊಳ್ಳದ ಜನಸಮುದಾಯಗಳು ಹೊರಗುಳಿಯುತ್ತವೆ.
ಕೃತಕ ಬುದ್ಧಿಮತ್ತೆಯ ಉಪಯೋಗವನ್ನು ಉತ್ತೇಜಿಸುವ ಸಾಧನಗಳ ಆವಿಷ್ಕಾರದಲ್ಲಿ ಕಂಪೆನಿಗಳು ಮಾನವ ಹಕ್ಕುಗಳ ವಿಷಯದಲ್ಲಿ ಅತ್ಯಂತ ಎಚ್ಚರಿಕೆಯನ್ನು ಹೊಂದಿರಬೇಕಿದ್ದು ತಮಗೆ ತಾವೇ ಬಿಗಿಯಾದ ನಿಯಮಾವಳಿಗಳನ್ನು ರೂಪಿಸಿಕೊಂಡು ಸೂಕ್ಷ್ಮತೆಯನ್ನು ಹೊಂದಿರಬೇಕಾದುದು ಕೂಡ ಅವಶ್ಯ. ಇವು ಬಹಳ ಕಟ್ಟುನಿಟ್ಟಾದ ನೈತಿಕ ನಿಯಮಾವಳಿಗಳನ್ನು ಹೊಂದಿರಬೇಕಾಗಿರುತ್ತದೆ. ಜನರಿಂದ ವ್ಯಾಪಕವಾಗಿ ಸಂಗ್ರಹಿಸಿದ ದತ್ತಾಂಶಗಳನ್ನು ಕಾಪಾಡಿಕೊಳ್ಳಬೇಕಾದ ಬಿಗಿಯಾದ, ದೋಷರಹಿತ, ಭದ್ರತಾ ವ್ಯವಸ್ಥೆಯನ್ನು ಹೊಂದಬೇಕಾಗುತ್ತದೆ. ಹಾಗೆಯೇ ಸರಕಾರಗಳು ನೀತಿ ನಿರೂಪಕರು, ತಂತ್ರಜ್ಞರು, ಕಾನೂನು ತಜ್ಞರು, ಸಂವಿಧಾನ ತಜ್ಞರು, ನಾಗರಿಕರು ಮತ್ತು ಎಲ್ಲಾ ಕ್ಷೇತ್ರದ ಪರಿಣಿತರ ಸಹಭಾಗಿತ್ವದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಕುರಿತು ಸಮಾಲೋಚನೆ ನಡೆಸಿ ಸಮಾಜದ ವಿವಿಧ ವರ್ಗಗಳ ನಡುವೆ ಯಾವುದೇ ಅಂತರ ಉಂಟಾಗದ ಹಾಗೆ ನಿಯಮಾವಳಿಗಳನ್ನು ರೂಪಿಸಬೇಕಾಗುತ್ತದೆ.
ಜನಸಾಮಾನ್ಯರ ಜೀವನವನ್ನು ಸರಳಗೊಳಿಸುವ ಉದ್ದೇಶದಿಂದ ರೂಪಿತವಾದ ತಂತ್ರಜ್ಞಾನಗಳು ನಾವು ಕೆಲಸ ಮಾಡುವ, ಸಂವಹನ ಮಾಡುವ ಮತ್ತು ಬದುಕುವ ವಿಧಾನವನ್ನು ಮರುರೂಪಿಸುತ್ತಿವೆ. ಎಐ ತಂತ್ರಜ್ಞಾನವು ಅನೇಕ ಕ್ಷೇತ್ರಗಳಲ್ಲಿ ಪ್ರಮುಖ ಪ್ರಯೋಜನಗಳನ್ನು ತರುತ್ತದೆ ಎಂಬುದೇನೋ ನಿಜ. ಆದರೆ ನೈತಿಕ ಚೌಕಟ್ಟಿನ ರಕ್ಷಣೆಯಿಲ್ಲದೆ, ಇದು ಸಮಾಜದಲ್ಲಿ ಪಕ್ಷಪಾತಗಳನ್ನು ಮತ್ತು ತಾರತಮ್ಯಗಳನ್ನು ಉಂಟುಮಾಡುವ ಅಪಾಯವಿದೆ. ಎಐನ ಮೂಲಕ ಸೃಜಿಸಿದ ಕೃತಕ ಮಾಹಿತಿ, ಚಿತ್ರ, ಧ್ವನಿ, ವೀಡಿಯೊಗಳ ಮೂಲಕ ಸಮಾಜದಲ್ಲಿ ಜಾತಿ, ಧರ್ಮ, ಜನಾಂಗೀಯ ವಿಭಜನೆಗಳನ್ನು ಉಂಟುಮಾಡಲು ಸಾಧ್ಯವಿರುವುದರಿಂದ ಇದು ಮೂಲಭೂತ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗೆ ಬೆದರಿಕೆ ಹಾಕುತ್ತದೆ. ವ್ಯಕ್ತಿಯ ಘನತೆಯು ಮನುಷ್ಯನ ಸಾಮಾಜಿಕ ಜೀವನದ ಅತಿ ಮುಖ್ಯ ಅಂಶವಾಗಿದ್ದು ಇದಕ್ಕೆ ಭಂಗ ತರುವ ಯಾವುದೇ ತಂತ್ರಜ್ಞಾನ ಮನುಷ್ಯ ವಿರೋಧಿ ಆಗಿಬಿಡುತ್ತದೆ. ಹಾಗಾಗಿಯೇ ಕೃತಕ ಬುದ್ಧಿಮತ್ತೆಯ ಕುರಿತ ನೈತಿಕ ನಿಯಮಾವಳಿಗಳು ಇಂದು ಬೇರೆ ಯಾವುದೇ ಕ್ಷೇತ್ರಕ್ಕಿಂತ ಹೆಚ್ಚು ಅಗತ್ಯವಾಗಿದೆ.
ಎಐಗಳಿಗೆ ತರಬೇತಿ ನೀಡಲು ಬಳಸಲಾಗುವ ದತ್ತಾಂಶಗಳು ಪಕ್ಷಪಾತಗಳಿಂದ ಕೂಡಿದ್ದರೆ ಈಗಾಗಲೇ ಸಮಾಜದಲ್ಲಿ ಬೇರೂರಿರುವ ಅಸಮಾನತೆಗಳನ್ನು ಮತ್ತಷ್ಟು ಹೆಚ್ಚಿಸಬಹುದು. ಭದ್ರತೆಗೆ ಬಹಳ ಅಗತ್ಯ ಎಂದು ಪ್ರಶಂಸಿಸಲಾಗುವ ಮುಖವನ್ನು ಗುರುತಿಸುವ ತಂತ್ರಜ್ಞಾನವು ಮುಂದೆ ಅಪಾರವಾದ ದತ್ತಾಂಶಗಳನ್ನು ಸಂಗ್ರಹಿಸಿದ ನಂತರ ಸಾಮೂಹಿಕ ಕಣ್ಗಾವಲು ಸಾಧನವಾಗಿ, ಸಾಮಾನ್ಯರ ಖಾಸಗಿತನವನ್ನು ಹಾಳುಮಾಡಲು ಸಹ ಬಳಸಲ್ಪಡಬಹುದು. ಕೆಲ ಸರಕಾರಗಳು ಮತ್ತು ಸಂಸ್ಥೆಗಳು ಜನರ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮ ಚಟುವಟಿಕೆಗಳನ್ನು ನಿಯಂತ್ರಿಸಬಹುದು. ಆಗ ಇದು ವ್ಯಕ್ತಿಯ ಖಾಸಗಿತನ ಮತ್ತು ಮುಕ್ತ ಚಲನೆಯ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ನಾಶಪಡಿಸುತ್ತದೆ. ಎಐ ನಿರಂಕುಶ ಆಡಳಿತವನ್ನು ಬಲಪಡಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ ಎಂದು ಮಾನವ ಹಕ್ಕುಗಳ ಪ್ರತಿಪಾದಕರು ಈಗಾಗಲೇ ಗಂಭೀರ ಚರ್ಚೆಗಳನ್ನು ನಡೆಸುತ್ತಿದ್ದಾರೆ.
ಹಾಗಾಗಿಯೇ ಜಗತ್ತಿನ ಅನೇಕ ದೇಶಗಳು ಕೃತಕ ಬುದ್ಧಿಮತ್ತೆ ಬಳಸುವಾಗ ಮಾನವ ಹಕ್ಕುಗಳಿಗೆ ಯಾವುದೇ ರೀತಿಯಲ್ಲಿ ಅಡಚಣೆ ಉಂಟಾಗದಂತೆ ತಂತ್ರಜ್ಞಾನದ ಅಭಿವೃದ್ಧಿ, ಬಳಕೆ ಮತ್ತು ವಿನ್ಯಾಸವನ್ನು ಮಾಡುವಂತೆ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆಯಲ್ಲಿ ವಿಶ್ವದಾದ್ಯಂತ ಸಾಮಾನ್ಯವಾದ ನಿಯಮಾವಳಿಗಳನ್ನು ರೂಪಿಸುವಂತೆ ಅಂತರ್‌ರಾಷ್ಟ್ರೀಯ ಸಮುದಾಯಗಳಿಂದ, ಸಂಘಟನೆಗಳಿಂದ ಒತ್ತಾಯಗಳು ಬರುತ್ತಿವೆ.