ಸರಕಾರ ಬದಲಾಗಿದೆ ಆದರೆ!

Update: 2024-01-08 06:42 GMT

Photo: PTI 

ಕಳೆದ ತಿಂಗಳು 18ರಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ರಂಗಮಂದಿರದಲ್ಲಿ ನಟರಾಜ್‌ಹುಳಿಯಾರ್ ಬರೆದ ಪ್ರೊ.ನಂಜುಂಡಸ್ವಾಮಿಯವರ ಹೋರಾಟ ಕುರಿತು ಡೈರೆಕ್ಟ್ ಆ್ಯಕ್ಷನ್ ಎಂಬ ನಾಟಕ ಪ್ರದರ್ಶನದ ತಯಾರಿ ನಡೆದಿತ್ತು. ಇತ್ತ ರಸ್ತೆಗಾಗಿ ಭೂಮಿ ವಶಪಡಿಸಿಕೊಂಡು ಒಕ್ಕಲೆಬ್ಬಿಸಿದವರಿಗೆ ಪರಿಹಾರ ಕೊಡುವ ಪಿಡಬ್ಲ್ಯುಡಿ ಯಲ್ಲಿ ವರ್ಷ ಕಳೆದರೂ ತಮಗೆ ಸಂದಾಯವಾಗದ ಪರಿಹಾರಕ್ಕಾಗಿ ರೈತರು ಹತಾಶೆಯಿಂದ ಕೂಗಾಡತೊಡಗಿದ್ದರು. ಕಾರಣ ಇಷ್ಟೇ ಶಿವಮೊಗ್ಗದ ವರ್ತುಲ ರಸ್ತೆಯ ಕಾರಣಕ್ಕಾಗಿ, ಹಾರೊಬೆನವಳ್ಳಿ ಚಿಕ್ಕಕೂಡ್ಳಿ ರೈತರು 18ಗುಂಟೆ,20ಗುಂಟೆ ವಿಸ್ತೀರ್ಣದ ಭೂಮಿ ಕಳೆದುಕೊಂಡಿದ್ದರು. ಅವರ ಭೂಮಿಯಲ್ಲಿದ್ದ ಮರಗಳಿಗೆ ಬೆಲೆ ಕಟ್ಟಿ ಅದನ್ನು ವಿತರಿಸಿಯಾಗಿತ್ತು. ಆದರೆ ಭೂಮಿಗೆ ನಿಗದಿ ಮಾಡಿದ ಹಣವನ್ನು ಪಾವತಿಸದೆ ಸುಮಾರು 15ಬಾರಿ ರೈತರನ್ನು ಅಧಿಕಾರಿಗಳು ಅಲೆಸಿದ್ದರು. ಪ್ರತಿ ಬಾರಿಯೂ ಅಧಿಕಾರಿಗಳು ಹೇಳಿದ ಸುಳ್ಳನ್ನು ನಂಬಿದ ರೈತರು, ಈ ಬಾರಿ ಸಹನೆ ಕಳೆದುಕೊಂಡಿದ್ದರು. ಆದ್ದರಿಂದ ನಂಜುಂಡಸ್ವಾಮಿಯವರ ಡೈರಕ್ಟ್ ಆ್ಯಕ್ಷನ್ ನಾಟಕ ನೋಡಲು ಬಂದಿದ್ದ ರೈತನಾಯಕ ಕೆ.ಟಿ.ಗಂಗಾಧರರನ್ನು ಕರೆದುಕೊಂಡು ಹೋದರು. ಇದಕ್ಕೇನು ಹೆದರದ ಅಧಿಕಾರಿಗಳು ಆರಾಮವಾಗಿಯೇ ಇದ್ದರು. ಆಗ ಗಂಗಾಧರ್ ನೋಡಿ ಆ ರೈತರೆಲ್ಲಾ ಬಡವರು. ನೀವು ಕೊಡುವ ಹಣದಿಂದ ಬದುಕು ಕಟ್ಟಿಕೊಳ್ಳಲು ಕಾದಿದ್ದಾರೆ. ಇವರ ಮಕ್ಕಳಾಗಲೇ ಕೂಲಿಗೆ ಹೋಗುತ್ತಿದ್ದಾರೆ. ಇಂತಹ ಬಡವರ ಬದುಕಿನ ಜೊತೆ ಆಟ ಆಡಬೇಡಿ ಎಂದರು, ಇಂತಹ ಬೇಡಿಕೆ ನಂಜುಂಡಸ್ವಾಮಿಯವರ ಕಾಲದಲ್ಲಿ ಬೇರೆ ರೂಪ ಪಡೆದುಕೊಳ್ಳುತ್ತಿತ್ತು. ಅಧಿಕಾರಿ ಸಿಬ್ಬಂದಿ ಕೊರತೆಯ ಸಬೂಬು ಹೇಳಿದ. ಕೆರಳಿದ ಗಂಗಾಧರ್ ನೋಡ್ರಿ ನಿಮ್ಮ ಸಿಬ್ಬಂದಿ ಕೊರತೆಗೂ ರೈತರಿಗೆ ಬರುವ ಹಣಕ್ಕೂ ಸಂಬಂಧವಿಲ್ಲ, ನಾವಿಲ್ಲೆ ಧರಣಿ ಕೂರ್ತಿವಿ ಎಂದರು. ಆಗ ರೊಚ್ಚಿನಿಂದ ಕೂಗಾಡಿದ ರೈತರನ್ನು ಸಮಾಧಾನ ಪಡಿಸಿದ ಗಂಗಾಧರ್, ನೀವು ನಿಮಗೆ ಬರಬೇಕಾದ ಹಣ ಬಿಡುಗಡೆಯಾಗುವವರೆಗೂ ಧರಣಿ ಕೂರಲು ರೆಡಿಯಾಗಿ ಎಂದರು. ಎಚ್ಚೆತ್ತ ಅಧಿಕಾರಿಗಳು ರೈತರ ಫೈಲುಗಳನ್ನು ಬಿಚ್ಚಿ ಅವರಿಗೆ ಬರಬೇಕಾದ ಹಣದ ಚೆಕ್ ಬರೆಯುವ ತಯಾರಿ ನಡೆಸಿದರು. ರೈತರಿಗೆ ಬರಬೇಕಾದ ಹಣವನ್ನು ನ್ಯಾಯವಾಗಿ ಬಿಡುಗಡೆ ಮಾಡಬೇಕಾದ ಅಧಿಕಾರಿಗಳು ಅವರನ್ನು ಹದಿನೈದು ಬಾರಿ ಅಲೆಸಿದ್ದು, ಹೊಸ ಸಂಗತಿಯಲ್ಲ ಇಂತಹ ರೈತರು ಕಳೆದ ಶತಮಾನದ ಹಿಂದಿನಿಂದಲೂ ತಮ್ಮಿಂದ ಭೂಮಿ ಕಿತ್ತುಕೊಂಡವರ ಬಳಿಗೆ ಅಲೆಯುತ್ತಲೇ ಇದ್ದಾರೆ. ಹೈವೇಗಳಿಗಾಗಿ ಭೂಮಿ ಕಿತ್ತುಕೊಳ್ಳುವ ಅಧಿಕಾರಿಗಳಿನ್ನೂ ಬ್ರಿಟಿಷರ ಆಡಳಿತದಲ್ಲೇ ಇದ್ದಾರೆ. ಇವರೆಲ್ಲಾ ಐ.ಎ.ಎಸ್. ಮತ್ತು ಕೆ.ಎ.ಎಸ್. ಅಧಿಕಾರಿಗಳು, ಇವರಿಗಿರುವ ಕಾನೂನು ಬೆಂಬಲ ಯಾವುದೆಂದರೆ, 1894ರಲ್ಲಿ ಬ್ರಿಟಿಷರು ಹೇಗೆ ನಮ್ಮ ದೇಶವನ್ನು ತೀವ್ರತರದ ದೌರ್ಜನ್ಯದಿಂದ ಆಕ್ರಮಿಸಿದರೋ, ಹಾಗೆಯೇ ಅಧಿಕಾರಿಗಳೂ ಕೂಡ ಹೈವೇಗಳಿಗೆ, ಕಟ್ಟಡಗಳಿಗೇ, ಅಣೆಕಟ್ಟುಗಳಿಗೆ ಭೂಮಿಯನ್ನು ಆಕ್ರಮಿಸುತ್ತಿದ್ದರು. ಸ್ವಾತಂತ್ರ್ಯಾ ನಂತರ ಇದೇ ಕಾನೂನು ಮತ್ತು ಇದೇ ಅಧಿಕಾರಿಗಳು ಮುಂದುವರಿದಿದ್ದರಿಂದ, ಭೂಮಿ ಕಳೆದುಕೊಳ್ಳುವ ರೈತ ಸರಕಾರದ ದೌರ್ಜನ್ಯಕ್ಕೆ ತುತ್ತಾಗುತ್ತಲೇ ಇದ್ದಾನೆ. ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ರೈತರೆಂದೂ ವಿರೋಧಿಯಲ್ಲ. ಆದರೆ ಆತನ ಭೂಮಿಯನ್ನು ವಶ ಪಡಿಸಿಕೊಳ್ಳಬೇಕಾದರೆ, ನ್ಯಾಯ ಮಾರ್ಗದಲ್ಲಿ ಮರು ವಸತಿ ಕಾರ್ಯ ನಡೆಯಬೇಕು. ಮೊದಲನೆಯದಾಗಿ ಭೂಮಿ ಕಳೆದು ಕೊಂಡವನಿಗೆ ಪರ್ಯಾಯ ವ್ಯವಸ್ಥೆ ಆಗಬೇಕು. ಅವನಿಗೆ ನಿಗದಿ ಮಾಡಿದ ಪರಿಹಾರ ಅವನಿಗೆ ದಕ್ಕಬೇಕು. ಆ ನಂತರ ಸರಕಾರ ಕೈಗೊಂಡ ಅಭಿವೃದ್ಧಿ ಕಾರ್ಯ ಆರಂಭವಾಗಬೇಕು. ಇದು ನಡೆಯದೇ ಇರುವುದರಿಂದ ಭೂಮಿ ಕಳೆದುಕೊಂಡ ರೈತ ಇನ್ನೂ ಅಲೆಯುತ್ತಿದ್ದಾನೆ. ಆತನಿಗೆ ಕಾನೂನು ಸಲಹೆ ಮತ್ತು ಧೈರ್ಯ ತುಂಬುತ್ತಿದ್ದ ಪ್ರೊ. ನಂಜುಂಡಸ್ವಾಮಿ ಇಲ್ಲದಿರುವುದರಿಂದ ಅಧಿಕಾರಿಗಳಿಗೆ ದರ್ಪ ಆವರಿಸಿದೆ. ಆದ್ದರಿಂದ ಜೆಸಿಬಿ ಲಾರಿ ಟ್ರಕ್ಕುಗಳೊಡನೆ ಏಕನಂ ದಾಳಿಮಾಡಿ ರೈತನ ಬದುಕಿನ ಜಾಗವನ್ನೇ ಅಳಿಸಿ ಹಾಕುತ್ತಿದ್ದಾರೆ. ಕಳೆದ ವರ್ಷ ತಿಪಟೂರು ಬಳಿಯ ಬೇವಿನಹಳ್ಳಿ ಬಳಿ ರೈತನೊಬ್ಬ ಬೆಳಗ್ಗೆ ಎದ್ದು ಬಂದು ನೋಡಿದರೆ, ಆತನ ಹೊಲ ರಸ್ತೆಯಾಗಿ ಹೋಗಿತ್ತು. ಆಘಾತಗೊಂಡ ರೈತ ಅಲ್ಲೇ ಇದ್ದ ಬೇವಿನ ಮರಕ್ಕೆ ನೇತು ಹಾಕಿಕೊಂಡ. ವಿಶೇಷವೆಂದರೆ ಸರಕಾರದ ಇಂತಹ ಬುಲ್ಡೋಜರ್ ಕಾರ್ಯಾಚರಣೆ ಸಮಯದಲ್ಲಿ ಆ ಪ್ರಜೆಯಿಂದ ಓಟು ಪಡೆದ ಎಂಪಿ ಯಾಗಲಿ, ಎಮ್ಮೆಲ್ಲೆ ಯಾಗಲಿ, ಜಿಲ್ಲಾ ಪಂಚಾಯತ್ ಸದಸ್ಯನಾಗಲಿ ಯಾರೂ ಇರುವುದಿಲ್ಲ. ಅದೆಲ್ಲಿ ಅಡಗಿರುತ್ತಾರೋ ಏನೋ. ಬೇವಿನ ಮರದಲ್ಲಿ ನೇತಾಡುತ್ತಿದ್ದ ರೈತನ ಶವದ ವಾರಸುದಾರೆಂಬಂತೆ ರೈತರು ಬಂದರು. ಕೂಡಲೇ ರಸ್ತೆ ಮಾಡಿದವರನ್ನು ಹಿಡಿದು ನಿಲ್ಲಿಸಿ ಆತನ ಭೂಮಿಯ ಬೆಲೆ ಮತ್ತು ಸಾವಿಗೆ ಬೆಲೆ ಕಟ್ಟಿ ಪಾವತಿಯಾದ ನಂತರ ಶವಸಂಸ್ಕಾರ ಮಾಡುತ್ತೇವೆ. ಇಲ್ಲದಿದ್ದರೆ ನಮ್ಮ ಪ್ರತಿಭಟನೆ ಉಗ್ರರೂಪ ಪಡೆಯುತ್ತದೆ ಎಂದರು. ಹೆದ್ದಾರಿ ನಿರ್ಮಾತೃಗಳು ಇದಕ್ಕೆ ಬಗ್ಗಿದರು. ಒಂದು ವೇಳೆ ರೈತರು ದನಿ ಎತ್ತದಿದ್ದರೆ, ಅಧಿಕಾರಿಗಳು ಅಟ್ಟಹಾಸ ಮುಂದುವರಿಯುತ್ತಿತ್ತು.

ರೈತರನ್ನು ಒಕ್ಕಲೆಬ್ಬಿಸುತ್ತಿರುವ ಮತ್ತು ಬಲಿಪಡೆಯುತ್ತಿರುವ 1894ರ ಕಾಯ್ದೆಯ ತಿದ್ದುಪಡಿಗಾಗಿ ಕಾನೂನು ಪಂಡಿತರಾಗಿದ್ದ ಪ್ರೊ.ನಂಜುಂಡಸ್ವಾಮಿ ಯವರು ತಿವ್ರ ಹೋರಾಟ ನಡೆಸಿದ್ದರು. ನಮ್ಮ ಚಳವಳಿಗಳು ಮತ್ತು ಹೋರಾಟಗಳು ಎಷ್ಟೇ ಜೋರಾಗಿ ನಡೆದರೂ ಕಾನೂನುಗಳ ತಿದ್ದುಪಡಿಗಳಿಂದ ಮಾತ್ರ ನಮ್ಮ ಸಮಸ್ಯೆಗಳು ಬಗೆಹರಿಯ ಬಲ್ಲವು ಎಂದು ಬಲವಾಗಿ,ನಂಬಿದ್ದ ನಂಜುಂಡಸ್ವಾಮಿಯವರ ಹೋರಾಟದ ಫಲವಾಗಿ ಭೂಸ್ವಾಧೀನ ಕಾಯ್ದೆ ಮರು ಚಿಂತನೆಗೊಳಪಟ್ಟು, 1913ರಲ್ಲಿ ಹೊಸ ಕಾಯ್ದೆಯಾಗಿ ರೂಪುಗೊಂಡು ಜಾರಿಯಾಯ್ತು. ಇದಕ್ಕೆ ಶ್ರಮಿಸಿದವರು ಪ್ರೊ.ನಂಜುಂಡಸ್ವಾಮಿ, ಮಹೇಂದ್ರ ಸಿಂಗ್ ಠಿಕಾಯತ್, ಮೇಧಾಪಾಟ್ಕರ್, ನಾರಾಯಣಸ್ವಾಮಿ ನಾಯ್ಡು, ಶರತ್‌ಜೋಶಿ, ಇವರ ವಾದವನ್ನು ಮನ್ನಿಸಿದ, ಮನಮೋಹನ್‌ಸಿಂಗ್ ಹೊಸ ಕಾಯ್ದೆಯನ್ನು ಜಾರಿ ಮಾಡಿದರು. ಇದರ ಪ್ರಕಾರ ರಿ ಹ್ಯಾಬಿಟೇಶನ್ ಮಾಡಲು ಎಲ್ಲ ವಿಧಿ ವಿಧಾನಗಳನ್ನು ಅನುಸರಿಸಿ ಜಾರಿ ಮಾಡಬೇಕು. ಭೂಮಿ ಕಳೆದುಕೊಂಡ ರೈತ ಮರು ವಸತಿ ಜಾಗಕ್ಕೆ ಹೋಗಬೇಕಾದ ಕಾರಣವಾಗಿ ಆತ ತೊಂದರೆಗೆ ಸಿಕ್ಕಬಾರದು ಎಂಬ ತಿದ್ದುಪಡಿಯ ಕಾನೂನನ್ನೇ ಯಾವ ಅಧಿಕಾರಿಯೂ ಓದಿದ ದಾಖಲೆಯಿಲ್ಲ. ಓದಿದ್ದರೆ, ಇಂತಹ ತಪ್ಪುಗಳಾಗುತ್ತಿರಲಿಲ್ಲ. ಶಿವಮೊಗ್ಗದಲ್ಲಿ ವರ್ತುಲ ರಸ್ತೆಗೆ ಸಿಕ್ಕಿ ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುವ ಜನರ ಆಕ್ರಂದನ ವಿಷ್ಟೆ. ನಾವಿಲ್ಲಿ, ಅರುವತ್ತು ವರ್ಷಗಳಿಂದ ಇದ್ದೇವೆಎಂಬುದು. ಆದರೆ ಅಧಿಕಾರಿಗಳು ಇರಬಹುದು ನೀವಿರುವ ಜಾಗ ನಿಮ್ಮದಲ್ಲ ಸರಕಾರದ್ದು ಎಂಬುದು, ಅಧಿಕಾರಿಗಳವಾದಕ್ಕೆ ದಿಕ್ಕು ತಪ್ಪಿದಂತಾದ ಬಡವರು ಕೆ.ಟಿ.ಗಂಗಾಧರ್ ಮೊರೆ ಹೋದರು. ಅಧಿಕಾರಿಗಳು ಅವರಿಗೂ ಅದೇ ಉತ್ತರಕೊಟ್ಟರು. ಬಡವರು ವಾಸಮಾಡುತ್ತಿರುವ ಜಾಗ ಸರಕಾರದ್ದೇ ಇರಬಹುದು. ಆದರೆ ಅದನ್ನು ಅವರಿಗೆ ಮಂಜೂರು ಮಾಡಿ ಖಾತೆಯಾದ ನಂತರ ಸರಕಾರ ವಶಪಡಿಸಿಕೊಂಡು ಅವರಿಗೆಲ್ಲ ಮರುವಸತಿ ಕಲ್ಪಿಸುವ ಅಧಿಕಾರ ಜಿಲ್ಲಾಧಿಕಾರಿಗಿದೆ. ಅದನ್ನು ಚಲಾಯಿಸಿ ಎಂದರು. ಒಂದು ವೇಳೆ ರೈತ ನಾಯಕರಿಗೆ ಈ ಜ್ಞಾನವಿಲ್ಲದಿದ್ದರೆ ಸಂತೆಕಡೂರು ಜನ ದಿನ ಬೆಳಗಾಗುವುದರಲ್ಲಿ ದಿಕ್ಕು ದೆಸೆಯಿಲ್ಲದೆ ಹೋಗುತ್ತಿದ್ದರು. ನಮ್ಮ ದೇಶದ ದುರಂತ ಯಾವುದೆಂದರೆ, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಾಗ ಸರಕಾರದ ಕರ್ಮಚಾರಿಗಳು ಮತ್ತು ಪೊಲೀಸರು ಹಾಗೇ ಮುಂದುವರದಿದ್ದು, ಆಕಾರಣಕ್ಕೆ ಈ ಎಲ್ಲಾ ಇಲಾಖೆಗಳು ಜನಪೀಡಕವಾಗಿ ಉಳಿದು ಬಿಟ್ಟಿದೆ. ಇವನ್ನು ನಾವು ಏನು ಮಾಡಿಕೊಳ್ಳಲಾಗುತ್ತಿಲ್ಲ. ಪ್ರತಿಯೊಬ್ಬ ಸರಕಾರಿ ನೌಕರನೂ ಒಬ್ಬ ಎಮ್ಮೆಲ್ಲೆ ಟಚ್ಚಿನಲ್ಲಿರುತ್ತಾನೆ. ಹಾಗೆಯೇ ಮಕ್ಕಳಿಗೆ ಪಾಠಮಾಡುವ ಉಪಾಧ್ಯಾಯರೂ ಕೂಡ ರಾಜಕೀಯ ಕಾರ್ಯಕರ್ತರಂತೆ ಕಾಣುತ್ತಾರೆ. ಇಂಥವರ ಮೇಲೆ ಮಾಡುವ ದೂರುಗಳೂ ಕೂಡ ವ್ಯರ್ಥ, ಸರಕಾರವೊಂದು ಬದಲು ಗೊಂಡಾಗ ಆಡಳಿತ ಮಟ್ಟದಲ್ಲಿ ಚುರುಕು ಕಾಣಬೇಕಾದರೆ ಸಂಬಂಧ ಪಟ್ಟ ಇಲಾಖೆಯ, ಮಂತ್ರಿಯ ಕಾರ್ಯದಕ್ಷತೆಯನ್ನು ಅವಲಂಬಿಸಿರುತ್ತದೆ. ಒಂದು ಕಾಲದಲ್ಲಿ ಸರಕಾರಿ ಕರ್ಮಚಾರಿಗಳು ರೈತ ಸಂಘಕ್ಕೆ ಅಂಜಿಕೊಳ್ಳುತ್ತಿದ್ದರು. ಸರಕಾರಿ ವಾಹನದಲ್ಲಿ ಹೆಂಡತಿ -ಮಕ್ಕಳೊಂದಿಗೆ ಪ್ರವಾಸಹೋಗಿ ಬರಲು ಅಳುಕುತ್ತಿದ್ದರು. ಈಗ ಅಂತಹ ಅಂಜಿಕೆಯಿಲ್ಲ. ಇವರನ್ನು ಯಾರೂ ಕೇಳುವವರೇ ಇಲ್ಲ. ಅಂತಹ ಒಂದು ನಿರ್ಭೀತ ವಾತಾವರಣ ಸರಕಾರದ ಕರ್ಮಚಾರಿಗಳಲ್ಲಿ ಮನೆ ಮಾಡಿದೆ. ಆದ್ದರಿಂದ ಸರಕಾರ ಬದಲಾದರೂ ಇವರೆಲ್ಲಾ ಹಾಗೇ ಮುಂದುವರದಿದ್ದಾರೆ. ಜೊತೆಗೆ ಸರಕಾರದ ಗ್ಯಾರಂಟಿಗಳನ್ನೂ ಅಣಕಿಸುವ ಅಧಿಕಾರಿಗಳ ದಂಡೇ ಇದೆ. ಇವರಿಗೆ ಆಡಳಿತ ನಡೆಸುವವರ ಭೀತಿಯಿಲ್ಲದಿದ್ದರೂ ರೈತ ಸಂಘ ಇವರನ್ನು ಹದ್ದುಬಸ್ತಿಗೆ ತರಲು ಸಜ್ಜಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಿ. ಚಂದ್ರೇಗೌಡ

contributor

Similar News