'ಚಿನಾಲ್ ಕೀ ಕಾಫೀರ್' ಮತ್ತು ಪೊಲೀಸ್ ಸೃಷ್ಟಿಯ ಇಸ್ಲಾಮೊಫೋಬಿಯಾ !

Update: 2024-07-15 13:54 GMT

ಸಾಂದರ್ಭಿಕ ಚಿತ್ರ (PTI)

ಶಿವಾಜಿನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತ ಎನ್ನಲಾದ ರುದ್ರೇಶ್ ಎಂಬವರ ಕೊಲೆಯನ್ನು "ಧರ್ಮ ಯುದ್ದ" ಎಂದು ಬಣ್ಣಿಸಿದ್ದ ತನಿಖಾ ಸಂಸ್ಥೆಗಳ ಹುನ್ನಾರಗಳು ಈಗ ತನಿಖಾ ನ್ಯಾಯಾಲಯದಲ್ಲಿ ಬಯಲಾಗಿದೆ.

ಬಡ್ಡಿ ವ್ಯಾಪಾರಿಯೂ ಆಗಿದ್ದ ರುದ್ರೇಶ್ ರನ್ನು ಅಕ್ಟೋಬರ್ 16, 2016 ದುರ್ಷರ್ಮಿಗಳು ಕೊಲೆ ಮಾಡಿದ್ದರು. ಈ ಕೊಲೆ ಯಾವ ಉದ್ದೇಶಕ್ಕೆ ನಡೆದಿದೆ ಎನ್ನುವುದರ ಬಗ್ಗೆ ಪ್ರಾರಂಭದಲ್ಲಿ ಅನುಮಾನಗಳಿತ್ತು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದಿದ್ದ ರುದ್ರೇಶ್ ಕೊಲೆಯನ್ನು ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಹೋರಾಟವನ್ನಾಗಿ ಕೈಗೆತ್ತಿಕೊಂಡಿತ್ತು. ಹಾಗಾಗಿ ಎನ್ಐಎ ರಾಷ್ಟ್ರೀಯ ತನಿಖಾ ಸಂಸ್ಥೆ ರುದ್ರೇಶ್ ಕೊಲೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು.

ಎನ್ಐಎ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ ರುದ್ರೇಶ್ ಕೊಲೆ ಪ್ರಕರಣದಲ್ಲಿ ಧರ್ಮ, ಜಿಹಾದ್ (ಧರ್ಮ ಯುದ್ದ) ಚರ್ಚೆಯಾಗಿದ್ದಲ್ಲದೇ ಮುಸ್ಲಿಮರನ್ನೇ ಗುರಿಯಾಗಿರಿಸಿ ತನಿಖೆ ಮತ್ತು ಚರ್ಚೆ ನಡೆಯಲಾರಂಭಿಸಿತು.

"ಆರೆಸ್ಸೆಸ್ ಸದಸ್ಯರ ಕೊಲೆ ಮತ್ತು ಸಮಾಜದಲ್ಲಿ ಭಯೋತ್ಪಾದನೆ ಭೀತಿಯನ್ನು ಉಂಟುಮಾಡುವ ಉದ್ದೇಶದಿಂದ ರುದ್ರೇಶ್‌ನನ್ನು ಕೊಲ್ಲಲು ಘೌಸ್ ಮತ್ತು ಶೆರೀಫ್ ಇತರ ನಾಲ್ವರು ಆರೋಪಿಗಳನ್ನು ಪ್ರೇರೇಪಿಸಿದ್ದರು. ಆರೆಸ್ಸೆಸ್ ವಿರುದ್ಧದ ಹೋರಾಟವನ್ನು ‘ಪವಿತ್ರ ಯುದ್ಧ’ ಎಂದು ನಂಬುವಂತೆ ಕೊಲೆಗಾರರನ್ನು ಮನವೊಲಿಸಲಾಗಿತ್ತು" ಎಂದು ಎನ್ಐಎ ತಿಳಿಸಿದೆ ಎಂದು ಕನ್ನಡ ಪ್ರಭ ಸೇರಿದಂತೆ ಹಲವು ಪತ್ರಿಕೆಗಳು ಮಾರ್ಚ್ 3 ರಂದು ಕೂಡಾ ವರದಿ ಮಾಡಿತ್ತು. ಎಪ್ರಿಲ್ 2017 ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಎನ್ಐಎ, 'ರುದ್ರೇಶ್ ಕೊಲೆ ಭಯೋತ್ಪಾಧನೆಯ ಭಾಗ' ಎಂದು ಹೇಳಿತ್ತು.

ರಾಷ್ಟ್ರೀಯ ತನಿಖಾ ತಂಡವು ರುದ್ರೇಶ್ ಕೊಲೆಯನ್ನು "ಧರ್ಮ ಯುದ್ದ, ಪವಿತ್ರ ಯುದ್ದ, ಭಯೋತ್ಪಾಧನೆ' ಎಂದು ಘೋಷಿಸಲು ದಾಖಲೆಯಾಗಿ ಬಳಸಿದ್ದು ಇಬ್ಬರು 'ಪ್ರತ್ಯಕ್ಷದರ್ಶಿ ಸಾಕ್ಷ್ಯ' ಗಳ ಹೇಳಿಕೆ ! ಪ್ರತ್ಯಕ್ಷದರ್ಶಿ ಸಾಕ್ಷಿಗಳ ಹೇಳಿಕೆಯಲ್ಲಿ "ಕೊಲೆ ಆರೋಪಿಗಳು ರುದ್ರೇಶ್ ರನ್ನು ಕೊಲೆ ಮಾಡುವ ಸಂದರ್ಭದಲ್ಲಿ ಚಿನಾಲ್ ಕೀ ಕಾಫೀರ್ ಎಂದು ಹೇಳಿ ಕೊಲೆ ಮಾಡಿದ್ದರು" ಎಂದು ಹೇಳಿಕೆ ನೀಡಿದ್ದರು. ಕಾಫಿರರು ಎಂದರೆ ಇಸ್ಲಾಂ ದೇವಾರಾಧನೆಯನ್ನು ನಂಬದೇ ಇರುವ ಯಾವುದೇ ಇಸ್ಲಾಮೇತರರು ಎಂದರ್ಥ. ಚಿನಾಲೆ ಎಂದರೆ ಅನೈತಿಕಕ್ಕೆ ಹುಟ್ಟಿದವರು ಎಂದರ್ಥ. ಹಿಂದೂ- ಮುಸ್ಲಿಂ ದ್ವೇಷದ ಕಾರಣಕ್ಕಾಗಿಯೇ ಮುಸ್ಲೀಮರೇ ರುದ್ರೇಶ್ ಕೊಲೆಯನ್ನು ಮಾಡಿದ್ದಾರೆ ಎಂಬ ಅರ್ಥ ಬರಲೆಂದೇ ಪ್ರತ್ಯಕ್ಷದರ್ಶಿಗಳ ಈ ಹೇಳಿಕೆಯನ್ನು ಎನ್ಐಎ ಬಳಸಿಕೊಂಡಿತ್ತು.

ರುದ್ರೇಶ್ ಕೊಲೆ ತನಿಖೆಗೆ ಎನ್ಐಎಗೆ ವರ್ಗಾವಣೆ ಆಗುವುದಕ್ಕೂ ಮೊದಲು ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸಿ ತನಿಖೆ ನಡೆಸಿದ್ದ ತನಿಖಾಧಿಕಾರಿಯನ್ನು ಹಿರಿಯ ವಕೀಲ ಎಸ್ ಬಾಲನ್ ಅವರು 26.06.2024 ಮತ್ತು 02.07.2024 ರಂದು ಪಾಟಿ ಸವಾಲಿಗೆ ಗುರಿಪಡಿಸಿದರು.

ಎಸ್ ಬಾಲನ್: ಚಿನಾಲ್ ಕೀ ಕಾಫೀರ್ ಎನ್ನುವ ಪದ Ex.P.1 ಸಾಕ್ಷ್ಯದಲ್ಲಿ ದಾಖಲಾಗಿಲ್ಲ.

ತನಿಖಾಧಿಕಾರಿ: ಹೌದು. ದಾಖಲಾಗಿಲ್ಲ.

ಎಸ್ ಬಾಲನ್: ನೀವು ತನಿಖಾಧಿಕಾರಿಯಾಗಿ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದಿದ್ದೀರಿ. ನೀವು ಪ್ರಾರಂಭದಲ್ಲಿ ಹೇಳಿಕೆ ಪಡೆಯುವಾಗ ಆ ಹೇಳಿಕೆಯಲ್ಲಿ ಚಿನಾಲ್ ಕಿ ಕಾಫೀರ್ ಎನ್ನುವ ಪದ ಇರಲಿಲ್ಲ.

ತನಿಖಾಧಿಕಾರಿ: ಹೌದು. ನಿಜ. ನಾನು ದಾಖಲಿಸಿಕೊಂಡ ಇಬ್ಬರ ಸಾಕ್ಷ್ಯ ಹೇಳಿಕೆಯಲ್ಲೂ ಚಿನಾಲ್ ಕಿ ಕಾಫಿರ್ ಎಂಬ ಪದ ಇರಲಿಲ್ಲ.

ಎಸ್ ಬಾಲನ್: ರುದ್ರೇಶ್ ಕೊಲೆಯಾದ ತಕ್ಷಣ ನೀವು ನಿಮ್ಮ ಉನ್ನತ ಅಧಿಕಾರಿಗಳಿಗೆ 'ತುರ್ತು ಘೋರ ಅಪರಾಧ ವರದಿ' ಸಲ್ಲಿಸಿದ್ರಿ ?

ತನಿಖಾಧಿಕಾರಿ : ಹೌದು. ಮೇಲಾಧಿಕಾರಿಗಳಿಗೆ ತುರ್ತು ಘೋರ ಅಪರಾಧ ವರದಿ ಸಲ್ಲಿಕೆ ಮಾಡಿದ್ದೆ.

ಎಸ್ ಬಾಲನ್ : ನೀವು ಹೈಯರ್ ಆಫೀಸರ್ ಗೆ ಸಲ್ಲಿಕೆ ಮಾಡಿದ 'ತುರ್ತು ಘೋರ ಅಪರಾಧ ವರದಿ'ಯಲ್ಲೂ ಚಿನಾಲ್ ಕೀ ಕಾಫೀರ್ ಪದದ ಉಲ್ಲೇಖ ಇಲ್ಲ.

ತನಿಖಾಧಿಕಾರಿ : ಹೌದು. ತುರ್ತು ಘೋರ ಅಪರಾಧ ವರದಿಯಲ್ಲೂ ಚಿನಾಲ್ ಕೀ ಕಾಫೀರ್ ಪದದ ಉಲ್ಲೇಖ ಇಲ್ಲ.

ಎಸ್ ಬಾಲನ್ : ಯಾವುದೇ ಅಪರಾಧ ಆದ ತಕ್ಷಣ ಆ ಅಪರಾಧಕ್ಕೆ ಸಂಬಂಧಿಸಿ ಒಂದು 'ಕೇಸ್ ಡೈರಿ'ಯನ್ನು ಸೃಷ್ಟಿಸುತ್ತೀರಿ ?

ತನಿಖಾಧಿಕಾರಿ : ಹೌದು

ಎಸ್ ಬಾಲನ್ : ರುದ್ರೇಶ್ ಕೇಸ್ ಡೈರಿಯನ್ನು ನೋಡಿ ಹೇಳಿ. ನಿಮ್ಮ ಕೇಸ್ ಡೈರಿಯಲ್ಲಿ 'ಚಿನಾಲ್ ಕೀ ಕಾಫೀರ್' ಎಂಬ ಪದದ ಉಲ್ಲೇಖ ಇಲ್ಲ.

ತನಿಖಾಧಿಕಾರಿ : ಹೌದು. ಕೇಸ್ ಡೈರಿಯಲ್ಲೂ ಚಿನಾಲ್ ಕೀ ಕಾಫೀರ್ ಎಂಬ ಪದದ ಉಲ್ಲೇಖ ಇಲ್ಲ.

ಎಸ್ ಬಾಲನ್ : ರುದ್ರೇಶ್ ಕೊಲೆ ಆದ ದಿನ ಎಫ್ಐಆರ್ ಮಾಡಿ 43 ACMM ಕೋರ್ಟ್ ಸನ್ನಿಧಾನಕ್ಕೆ ಬಿನ್ನವ (requisition) ಸಲ್ಲಿಕೆ ಮಾಡಿದ್ದೀರಿ. ಆ requisition ನ ಎಲ್ಲೂ ಕೂಡಾ ಆರೋಪಿಗಳು ಚಿನಾಲ್ ಕೀ ಕಾಫೀರ್ ಎಂದು ಘೋಷಣೆ ಕೂಗಿ ಕೊಲೆ ಮಾಡಿದ್ರು ಎನ್ನುವ ಬಗ್ಗೆ ಉಲ್ಲೇಖಗಳು ಇಲ್ಲ.

ತನಿಖಾಧಿಕಾರಿ : ಹೌದು. 43 ACMM ಗೆ ಸಲ್ಲಿಸಿದ requisition ನಲ್ಲೂ ಚಿನಾಲ್ ಕಿ ಕಾಫೀರ್ ಎಂಬ ಪದದ ಉಲ್ಲೇಖ ಇಲ್ಲ.

ಎಸ್ ಬಾಲನ್ : ಕೊಲೆಯಾದ ದಿನ ರುದ್ರೇಶ್ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗಿಯಾಗಿಲ್ಲ. ಮತ್ತು ಆರೆಸ್ಸೆಸ್ ಪಥ ಸಂಚಲನವೇ ನಡೆದಿಲ್ಲ.

ತನಿಖಾಧಿಕಾರಿ : ಪಥ ಸಂಚಲನ ನಡೆದಿತ್ತು.

ಎಸ್ ಬಾಲನ್ : ಶಿವಾಜಿನಗರ ಅತ್ಯಂತ ಟ್ರಾಫಿಕ್ ಇರುವ ಪ್ರದೇಶ. ಹಾಗಾಗಿ ಶಿವಾಜಿನಗರದಲ್ಲಿ ಯಾರಿಗೂ ಪಥ ಸಂಚಲನ/ ಮೆರವಣಿಗೆ ಮಾಡಲು ಪೊಲೀಸ್ ಇಲಾಖೆ ಅನುಮತಿ ನೀಡುವುದಿಲ್ಲ.

ತನಿಖಾಧಿಕಾರಿ : ಹೌದು‌. ಶಿವಾಜಿನಗರದಲ್ಲಿ ಯಾರಿಗೂ ಮೆರವಣಿಗೆ ಅವಕಾಶ ಇಲ್ಲ.

ಎಸ್ ಬಾಲನ್ : ಆರೆಸ್ಸೆಸ್ ರೂಟ್ ಮಾರ್ಚ್ ಗೂ ನೀವು ಅನುಮತಿ ನೀಡಿಲ್ಲ.

ತನಿಖಾಧಿಕಾರಿ : ಆರೆಸ್ಸೆಸ್ ರೂಟ್ ಮಾರ್ಚ್ ಗೂ ನಾನು ಪರ್ಮೀಷನ್ ನೀಡಿಲ್ಲ.

ಎಸ್ ಬಾಲನ್ : ಒಂದು ವೇಳೆ ನಿಮ್ಮ ಏರಿಯಾದಲ್ಲಿ ಮೆರವಣಿಗೆ ನಡೆದ್ರೆ ಪೊಲೀಸ್ ಇಲಾಖೆಯಿಂದ ಅದನ್ನು ಫೋಟೋ ಮತ್ತು ವಿಡಿಯೋ ಮಾಡಿಕೊಳ್ಳುತ್ತೀರಿ.

ತನಿಖಾಧಿಕಾರಿ : ಹೌದು. ಎಲ್ಲಾ ಮೆರವಣಿಗೆಗಳ ವಿಡಿಯೋ ಚಿತ್ರೀಕರಣವನ್ನು ವ್ಯಾಪ್ತಿಯ ಪೊಲೀಸರು ಮಾಡುತ್ತಾರೆ.

ಎಸ್ ಬಾಲನ್ : ರುದ್ರೇಶ್ ಕೊಲೆ ಕೇಸ್ ತನಿಖೆಯ ವೇಳೆ ಆರೆಸ್ಸೆಸ್ ರೂಟ್ ಮಾರ್ಚ್ ನ ವಿಡಿಯೋವನ್ನು ಪೊಲೀಸರಿಂದ ಸಂಗ್ರಹಿಸಿದ್ದೀರಾ ?

ತನಿಖಾಧಿಕಾರಿ : ಇಲ್ಲ.

ಎಸ್ ಬಾಲನ್ : ರುದ್ರೇಶ್ ಕೊಲೆಯಾಗುವುದಕ್ಕೂ ಮೊದಲು ಭಾಗವಹಿಸಿದ್ದ ಆರೆಸ್ಸೆಸ್ ರೂಟ್ ಮಾರ್ಚ್ ಗೆ ಸಂಬಂಧಿಸಿ ರಸ್ತೆ ಬದಿಯ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ್ದೀರಾ ?

ತನಿಖಾಧಿಕಾರಿ : ಇಲ್ಲ

ಎಸ್ ಬಾಲನ್ : ರುದ್ರೇಶ್ ಕೊಲೆಯಾದ ದಿನ‌ ಆರೆಸ್ಸೆಸ್ ಪಥ ಸಂಚಲನ ನಡೆಯಿತು ಎಂಬುದರ ಬಗ್ಗೆ ನೀವು ತನಿಖಾಧಿಕಾರಿಯಾಗಿ ತನಿಖೆ ಮಾಡಲಿಲ್ಲ.

ತನಿಖಾಧಿಕಾರಿ : ನಾನು ಆರೆಸ್ಸೆಸ್ ಪಥಸಂಚಲದ ಬಗ್ಗೆ ತನಿಖೆ ಮಾಡಲಿಲ್ಲ.

ಎಸ್ ಬಾಲನ್ : ರುದ್ರೇಶ್ ಕೊಲೆ ಮಾಡಲು ನಾಲ್ಕು ಆರೋಪಿಗಳು ಪಲ್ಸರ್ ಮತ್ತು ಅಪಾಚೆ ಬೈಕ್ ನಲ್ಲಿ ಬಂದರು ಎನ್ನುವುದಕ್ಕೆ ಏನು ದಾಖಲೆ ಇದೆ.

ತನಿಖಾಧಿಕಾರಿ : ಯಾವ ಅಧಿಕೃತ ದಾಖಲೆ ಇಲ್ಲ. ಪ್ರತ್ಯಕ್ಷ ಸಾಕ್ಷಿಗಳು ಅದನ್ನು ಹೇಳಿದ್ದರು.

ಎಸ್ ಬಾಲನ್ : ಆರೋಪಿಗಳು ಪಲ್ಸರ್ ಮತ್ತು ಅಪಾಚೆ ಬೈಕ್ ನಲ್ಲಿ ಬಂದು ಕೊಲೆ ನಡೆಸಿದ್ರು ಅಂತ ಕೇಸ್ ಡೈರಿಯಲ್ಲಿ ಉಲ್ಲೇಖಿಸಿದ್ರಾ ?

ತನಿಖಾಧಿಕಾರಿ : ಇಲ್ಲ

ಎಸ್ ಬಾಲನ್ : ಯಾವುದೇ ಮೆರವಣಿಗೆ ನಡೆಬೇಕಾದರೆ 20 ರೂ ಚಲನ್ ಕಟ್ಟಿ, ಸಂಘಟಕರ ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿ ಪಡೆಯುತ್ತೀರಿ. ರುದ್ರೇಶ್ ಕೊಲೆಯಾವುದಕ್ಕೂ ಮೊದಲು ನಡೆದ ಆರೆಸ್ಸೆಸ್ ಪಥಸಂಚಲನಕ್ಕೆ 20 ರೂ ಚಲನ್ ಕಟ್ಟಿದ್ದಾರಾ ?

ತನಿಖಾಧಿಕಾರಿ : ಗೊತ್ತಿಲ್ಲ

ಎಸ್ ಬಾಲನ್ : ರುದ್ರೇಶ್ ಕೊಲೆ ನಡೆಯುವುದಕ್ಕೂ ಮೊದಲು ಪಥ ಸಂಚಲನ ನಡೆಸಿದ ಸಂಘಟಕರು ಐಡಿ ಕಾರ್ಡ್ ಕೊಟ್ಟಿದ್ದಾರಾ ?

ತನಿಖಾಧಿಕಾರಿ : ಗೊತ್ತಿಲ್ಲ

ಎಸ್ ಬಾಲನ್ : ನೀವು ಆರೆಸ್ಸೆಸ್ ಮೆರವಣಿಗೆಗೆ ಅನುಮತಿ ಕೊಟ್ಟಿದ್ದೀರಾ ?

ತನಿಖಾಧಿಕಾರಿ : ಇಲ್ಲ

ರುದ್ರೇಶ್ ಕೊಲೆಯನ್ನು ಯಾರು ಮಾಡಿದ್ದಾರೆ ? ಯಾರು ಅಪರಾಧಿಗಳು, ಯಾರು ನಿರಪರಾಧಿಗಳು ಎನ್ನುವುದನ್ನು ಅಂತಿಮವಾಗಿ ನ್ಯಾಯಾಲಯ ನಿರ್ಧರಿಸುತ್ತದೆ. ಆದರೆ ನ್ಯಾಯಾಲಯದ ಮೂಲಕ ಕೊಲೆ ಆರೋಪಿಗಳಿಗೆ ಶಿಕ್ಷೆ ಕೊಡಿಸುವುದಕ್ಕಿಂತಲೂ ಕೊಲೆಯಲ್ಲಿ "ಧರ್ಮ ರಾಜಕಾರಣ" ಮಾಡುವ ಉತ್ಸಾಹ ತನಿಖಾ ಸಂಸ್ಥೆಗೆ ಇರುವಂತಿದೆ. ಕೊಲೆ ಆರೋಪಕ್ಕೆ ಪೂರಕವಾದ ಸಾಕ್ಷ್ಯ ಸಂಗ್ರಹಿಸುವ ಬದಲು 'ಧರ್ಮಯುದ್ದ, ಪವಿತ್ರಯುದ್ದ'ಕ್ಕೆ ಎಂದು ಹೇಳಿಕೆ ನೀಡಿ ಇಸ್ಲಾಮೋಫೋಬಿಯಾ ಸೃಷ್ಟಿಸಲು ಪೂರಕವಾದ ಸಾಕ್ಷ್ಯ ಸಂಗ್ರಹಿಸಲು/ ಸೃಷ್ಟಿಸುವ ಆತುರ ಪೊಲೀಸರಿಗೆ ಇದ್ದಂತೆ ಕಾಣುತ್ತದೆ.

(ರುದ್ರೇಶ್ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, 26.06.2024 ಮತ್ತು 02.07.2024 ರಂದು ನಡೆದ ಪಾಟಿ ಸವಾಲಿನ ದಾಖಲೆಯ ಆಯ್ದ ಭಾಗವನ್ನಷ್ಟೇ ಸರಳೀಕೃತಗೊಳಿಸಿ ಲೇಖನಕ್ಕಾಗಿ ಬಳಸಲಾಗಿದೆ. ಇದು ಕೊಲೆ ಆರೋಪದ ಸತ್ಯಾಸತ್ಯತೆಗೆ ಸಂಬಂಧಿಸಿದ್ದಲ್ಲ - ನವೀನ್ ಸೂರಿಂಜೆ)

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ನವೀನ್ ಸೂರಿಂಜೆ

contributor

Similar News